Shivamogga | ಭದ್ರಾ ನಾಲೆಗಳಲ್ಲಿ 20 ದಿನ ನೀರು ಹರಿಸುವಂತೆ ಆಗ್ರಹ; ಟ್ರ್ಯಾಕ್ಟರ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಶಿವಮೊಗ್ಗ : ಭದ್ರಾ ಜಲಾಶಯದ ಬಲದಂಡೆ ಹಾಗೂ ಎಡದಂಡೆ ನಾಲೆಗಳಲ್ಲಿ ಸತತ 20 ದಿನ ನೀರು ಹರಿಸಿ ಅಡಿಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿಗೆ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಮುತ್ತಿಗೆ ಹಾಕಿದರು.
ಬುಧವಾರ ಬೆಳಿಗ್ಗೆ 10 ಗಂಟೆಗೆ ಪುರಲೆ ಗ್ರಾಮದ ವೃತ್ತದಿಂದ ಹಸಿರು ಬಾವುಟಗಳೊಂದಿಗೆ ಆರಂಭಗೊಂಡ ಟ್ರ್ಯಾಕ್ಟರ್ ರ್ಯಾಲಿ ಚಿಕ್ಕಲ್ ಮೂಲಕ ಬಿಹೆಚ್ ರಸ್ತೆ, ಶಿವಪ್ಪನಾಯಕ ವೃತ್ತ,ಗೋಪಿ ವೃತ್ತ,ಬಾಲರಾಜ್ ಅರಸ್ ರಸ್ತೆ ಮೂಲಕ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ರೈತ ಸಂಘದ ಹಿರಿಯ ನಾಯಕ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ಸಹ್ರಸಾರು ಸಂಖ್ಯೆಯಲ್ಲಿ ರೈತರು ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗಿಯಾದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕದಂತೆ ಪೊಲೀಸರು ಹಾಕಿದ ಗೇಟ್ ನ್ನು ತಳ್ಳಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮುತ್ತಿಗೆ ಹಾಕದಂತೆ ತಡೆಯಲು ಎಷ್ಟೇ ಪ್ರಯತ್ನಿಸಿದರೂ ರೈತರು ಡಿಸಿ ಕಚೇರಿ ಆವರಣದೊಳಗೆ ಟ್ರ್ಯಾಕ್ಟರ್ ತರುವಲ್ಲಿ ಯಶಸ್ವಿಯಾದರು.
ಭದ್ರಾ ಜಲಾಶಯದಲ್ಲಿ ಸುಮಾರು 178 ಅಡಿ ನೀರು ಸಂಗ್ರಹವಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರಿಗೆ ನಾಲೆಗಳ ಮೂಲಕ ನೀರು ಹರಿಸದೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸುಮಾರು 4 ಟಿಎಂಸಿ ನೀರು ಹರಿಸಿರುವುದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ರೈತರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿರುವ ಡಿ.ಕೆ ಶಿವಕುಮಾರ್ ರೈತ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಶಾಂತನಗೌಡ ವಿರುದ್ದ ದಿಕ್ಕಾರ ಕೂಗಿದರು.
ಬಲ ಮತ್ತು ಎಡದಂಡೆ ನಾಲೆಗಳಲ್ಲಿ 10 ದಿನ ನೀರು ಹರಿಸುವುದಾಗಿ ಸರಕಾರ ಘೋಷಿಸಿತ್ತಾದರೂ ಮೂರು ದಿನಗಳಲ್ಲೇ ನೀರು ಸ್ಥಗಿತಗೊಳಿಸಿದೆ. ಇದರಿಂದ ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಹಂತ ತಲುಪಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.






