Soraba | ಕುರಿ ಶೆಡ್ಗೆ ಆಕಸ್ಮಿಕ ಬೆಂಕಿ; 300ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ಶಿವಮೊಗ್ಗ: ಕುರಿ ಶೆಡ್ಗೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ 300ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಜೀವವಾಗಿ ದಹನವಾಗಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಸೂರಣಗಿ ಗ್ರಾಮದ ರಾಮಣ್ಣ ಎಂಬುವವರಿಗೆ ಸೇರಿದ ಕುರಿ ಶೆಡ್ನಲ್ಲಿ ಈ ಘಟನೆ ಸಂಭವಿಸಿದೆ.
ತಡರಾತ್ರಿ ಶೆಡ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಶೆಡ್ಗೆ ವ್ಯಾಪಿಸಿದೆ ಎನ್ನಲಾಗಿದೆ. ಶೆಡ್ನಲ್ಲಿ ನೂರಾರು ಕುರಿಗಳು ಮತ್ತು ಕುರಿಮರಿಗಳನ್ನು ಇರಿಸಲಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಕುರಿಗಳು ಹೊರಬರಲಾಗದೆ ಸಜೀವವಾಗಿ ದಹನವಾಗಿವೆ.
ಈ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಕುರಿಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಮಾಲೀಕ ರಾಮಣ್ಣ ಅವರಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ. ಕುರಿ ಸಾಕಾಣಿಕೆಯನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದ ಕುಟುಂಬಕ್ಕೆ ಈ ಘಟನೆ ದೊಡ್ಡ ಆಘಾತ ತಂದಿದೆ.
ಘಟನೆಗೆ ಸಂಬಂಧಿಸಿದಂತೆ ಕುರಿ ಮಾಲೀಕ ರಾಮಣ್ಣ ಅವರು ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.




