ಯುವ ಬರಹಗಾರ, ಸಂಭಾಷಣೆಕಾರ ಟಿ.ಜಿ. ನಂದೀಶ್ ಹೃದಯಾಘಾತದಿಂದ ನಿಧನ

ತೀರ್ಥಹಳ್ಳಿ: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಂಭಾಷಣೆಕಾರರಾಗಿ ಹೆಸರು ಮಾಡಿದ್ದ ಪ್ರತಿಭಾವಂತ ಬರಹಗಾರ ಟಿ.ಜಿ. ನಂದೀಶ್ ಅವರು ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 37 ವರ್ಷ ವಯಸ್ಸಾಗಿತ್ತು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ನಂದೀಶ್ ಅವರ ಅಕಾಲಿಕ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರಾದ ಟಿ.ಜಿ. ನಂದೀಶ್ ಅವರು ಆಶಾ ಮತ್ತು ಗಂಗಾಧರಯ್ಯ ದಂಪತಿಯ ಪುತ್ರರಾಗಿದ್ದರು. ಸಾಹಿತ್ಯದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು, ಬರವಣಿಗೆಯ ಮೂಲಕವೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಳ್ಳುತ್ತಿದ್ದ “ನಂದಿ ರೈಟ್ಸ್” ಬರಹಗಳು ಅಪಾರ ಜನಪ್ರಿಯತೆ ಪಡೆದಿದ್ದವು.
ಚಿತ್ರರಂಗದಲ್ಲಿ ಸಾಧನೆ ಮಾಡುವ ಕನಸಿನೊಂದಿಗೆ ಬೆಂಗಳೂರಿಗೆ ಬಂದ ನಂದೀಶ್ ಅವರು ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದರು. ಬಳಿಕ ಪ್ರಸಿದ್ಧ ‘ಚಿತ್ತಾರ’ ಸಿನಿಮಾ ಮ್ಯಾಗಝಿನ್‌ನಲ್ಲಿ ಕೆಲಸ ಮಾಡುವ ಮೂಲಕ ಚಿತ್ರರಂಗದೊಂದಿಗೆ ಆಪ್ತ ಸಂಪರ್ಕ ಬೆಳೆಸಿಕೊಂಡರು. ಈ ಅವಧಿಯಲ್ಲಿ ಅನೇಕ ನಿರ್ದೇಶಕರು, ನಟರು ಹಾಗೂ ತಂತ್ರಜ್ಞರೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡಿದ್ದ ಅವರು, ತಮ್ಮ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ಸ್ಥಾನ ಪಡೆದಿದ್ದರು.
2023ರಲ್ಲಿ ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆ ಪಡೆದ ‘ಒಂದಂಕೆ ಕಾಡು’ ಸಿನಿಮಾಗೆ ಟಿ.ಜಿ. ನಂದೀಶ್ ಸಂಭಾಷಣೆ ಬರೆದಿದ್ದರು. ಅವರ ಸಂಭಾಷಣೆಯ ಶೈಲಿ ಹಾಗೂ ಪಾತ್ರಗಳಿಗೆ ನೀಡುತ್ತಿದ್ದ ಅಭಿವ್ಯಕ್ತಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದಲ್ಲದೆ ‘ದೂರದರ್ಶನ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮೂಲಕ ಅವರು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಗುರುತು ಮೂಡಿಸಿದ್ದರು.
ಬುಧವಾರ ಬೆಳಗ್ಗೆಯೂ ಎಂದಿನಂತೆ ನಂದೀಶ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದು ಹಂಚಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಹೃದಯಾಘಾತವಾಗಿದೆ. ತೀವ್ರ ಅಸ್ವಸ್ಥಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಮೃತ ನಂದೀಶ್ ಅವರಿಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ.
ಮೇ 21, ಗುರುವಾರ ಮಧ್ಯಾಹ್ನ 12:30ಕ್ಕೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಕಲಾವಿದರು, ಕಿರುತೆರೆ ನಟರು, ಪತ್ರಕರ್ತರು ಮತ್ತು ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ






