ಮಂಗನ ಕಾಯಿಲೆ ನಿಯಂತ್ರಣ ಸಂಬಂಧ ಶೀಘ್ರದಲ್ಲೇ ಬೆಂಗಳೂರಿನಲ್ಲಿ ತಜ್ಞರು, ಉನ್ನತಮಟ್ಟದ ಅಧಿಕಾರಿಗಳ ಸಭೆ : ಯು.ಟಿ.ಖಾದರ್

ಶಿವಮೊಗ್ಗ : ಹಲವು ದಶಕಗಳಿಂದ ಜಿಲ್ಲೆಯ ಮಲೆನಾಡು ಭಾಗದ ಜನರಿಗೆ ಕಂಟಕಪ್ರಾಯವಾಗಿರುವ ಮಂಗನಕಾಯಿಲೆ ನಿಯಂತ್ರಣದ ಕುರಿತು ಶೀಘ್ರದಲ್ಲಿ ಬೆಂಗಳೂರಿನಲ್ಲಿ ತಜ್ಞರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ನಝೀರ್ ಸಾಬ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ತಂತ್ರಜ್ಞರೊಂದಿಗೆ ಸಭೆ ನಡೆಸಿದ ಅವರು, ಪ್ರಸಕ್ತ ಸಾಲಿನಲ್ಲಿ ಈವರೆಗೆ ಗುರುತಿಸಲಾಗಿರುವ 130 ಪ್ರಕರಣಗಳಲ್ಲಿ 5 ಜನರು ಮೃತರಾಗಿರುವುದು ಅತ್ಯಂತ ನೋವಿನ ಸಂಗತಿ, ಸಕಾಲದಲ್ಲಿ ಕಾಯಿಲೆಗೆ ಚಿಕಿತ್ಸೆ ದೊರೆಯುವಂತೆ ವೈದ್ಯಾಧಿಕಾರಿಗಳು ವಿಶೇಷ ಗಮನ ಹರಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಡೆಂಗಿ, ಚಿಕುನ್‌ಗುನ್ಯಾ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧಗಳ ದಾಸ್ತಾನು ಇದೆ. ಈ ಕಾಯಿಲೆಗಳ ನಿಯಂತ್ರಣ ಕ್ರಮವಾಗಿ ವೈದ್ಯಕೀಯ ಸಿಬ್ಬಂದ ಜನರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವುದು ಸೊಳ್ಳೆಗಳ ನಿಯಂತ್ರಣ ಕ್ರಮದ ಮೊದಲ ಹೆಜ್ಜೆ ಯಾಗಿದೆ. ಅಗತ್ಯವಿರುವೆಡೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಯಂತ್ರಗಳನ್ನು ಬಳಸಬೇಕು. ಸ್ಥಳೀಯ ಸಂಸ್ಥೆಗಳು ಅಂಗಡಿ ಮುಂಗಟ್ಟುಗಳ ಪರವಾನಿಗೆ ನೀಡುವ ಸಂದರ್ಭ ಸ್ವಚ್ಛತೆಯ ಕುರಿತು ನಿಬಂಧನೆಗಳನ್ನು ವಿಧಿಸಬೇಕು. ತಪ್ಪಿದ್ದಲ್ಲಿ ಪರವಾನಿಗೆ ರದ್ದುಗೊಳಿಸಬೇಕೆಂದು ನಿರ್ದೇಶಿಸಿದರು.






