ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಚಿಂತನೆ: ವಿಜಯೇಂದ್ರ

ವಿಜಯೇಂದ್ರ
ಶಿವಮೊಗ್ಗ, ಡಿ.13: ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಾಳ್ಮೆಗೂ ಮೀತಿ ಇದೆ. ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಒಂದು ರೂ. ಅಥವಾ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ಕುರ್ಚಿಯ ಕಿತ್ತಾಟದಿಂದಾಗಿ ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ. ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಶೂನ್ಯ ಸರಕಾರವಾಗಿದ್ದು, ಸರಕಾರ ಬದುಕಿದೆಯೋ?, ಸತ್ತಿದೆಯೋ? ಎನ್ನುವ ಪರಿಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು.
ರಾಜ್ಯದ ಹಿತದೃಷ್ಟಿಯಿಂದ ಪಕ್ಷ ಬೇಧ ಮರೆತು ಸಮಗ್ರವಾಗಿ ಚರ್ಚೆ ಮಾಡುವುದಾದರೆ ಮಾತ್ರ ಈ ಅಧಿವೇಶನ ಕರೆಯಿರಿ ಎಂದಿದ್ದೆ. ನಾಯಕತ್ವಕ್ಕಾಗಿ ಪೈಪೋಟಿ ಮಾಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ನಿಮ್ಮ ನಾಯಕತ್ವ ಸಮಸ್ಯೆ ಬಗೆಹರಿಯುವ ತನಕ ಅಧಿವೇಶನ ಮುಂದೂಡಬೇಕೆಂದು ಮುಖ್ಯಮಂತ್ರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ಅಧಿವೇಶನ ಪ್ರಾರಂಭವಾಗಿ ಒಂದು ವಾರ ಆದರೂ ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವದಾನ ಇಲ್ಲದೇ ಇರುವುದು ಈ ಸರಕಾರದ ದುರ್ದೈವವಾಗಿದೆ. ಸಿಎಂ-ಡಿಸಿಎಂ ಕಳೆದೆರೆಡು ವರ್ಷಗಳಿಂದ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದವರು ಈಗ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದಾರೆ. ಇದರಿಂದ ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ. 54 ಲಕ್ಷ ಟನ್ ಮೆಕ್ಕೆಜೋಳ ಬೆಳೆದ ರೈತ ಖರೀದಿ ಕೇಂದ್ರ ಇಲ್ಲದೆ ದಲ್ಲಾಳಿಗಳ ಮೊರೆ ಹೋಗಿ 1,400 ರೂ.ಗೆ ಕಣ್ಣೀರು ಹಾಕುತ್ತಾ ಕೊಡುತ್ತಿದ್ದಾರೆ. ಕೇಂದ್ರ ಸರಕಾರ ಎಂಎಸ್ಪಿ 2400 ರೂ.ಯನ್ನು ಮೆಕ್ಕೆಜೋಳಕ್ಕೆ ನಿಗದಿ ಮಾಡಿ 2 ತಿಂಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಶಾಸಕರೇ ಈ ಗಂಭೀರ ಸಮಸ್ಯೆ ಬಗ್ಗೆ ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. ಆದರೂ ಯಾವ ಸಚಿವರೂ ಉತ್ತರ ಕರ್ನಾಟಕ ಭಾಗಕ್ಕೆ ಅತಿವೃಷ್ಟಿಯ ಹಾನಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ನೀಡಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಟಿ.ಡಿ. ಮೇಘರಾಜ್, ಜ್ಞಾನೇಶ್ವರ್, ನಾಗರಾಜ್, ಶಿವರಾಜ್, ಮಾಲತೇಶ್, ಎನ್.ಡಿ. ಸತೀಶ್, ಮಂಜುನಾಥ್, ಕೆ.ವಿ. ಇದ್ದರು.







