ಸರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಬೆಳ್ಳಿ ಬೆಲೆ

ಹೈದರಾಬಾದ್: ಮಾರುಕಟ್ಟೆಯಲ್ಲಿ ಚಿನ್ನದ ಹೊಳಪಿನ ಛಾಯೆಯ ನಡುವೆಯೇ ಶುಕ್ರವಾರ ಬೆಳ್ಳಿ ಕೂಡ ಪ್ರತಿ ಕೆಜಿಗೆ 1,13,000 ರೂಪಾಯಿಗೆ ಏರಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪಾಟ್ ಮಾರ್ಕೆಟ್ ನಲ್ಲಿ ಬೆಳ್ಳಿ ಬೆಲೆ 13 ವರ್ಷದ ಗರಿಷ್ಠ ಮಟ್ಟವನ್ನು ತಲುಪಿ ಪ್ರತಿ ಔನ್ಸ್ ಗೆ 37.8 ಡಾಲರ್ ಗೆ ಏರಿದರೆ ಫ್ಯೂಚರ್ ಮಾರ್ಕೆಟ್ ನಲ್ಲಿ 38.7 ಡಾಲರ್ ತಲುಪಿತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಾರ ಪ್ರತಿ ಸುಂಕವನ್ನು ಹೇರುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ವಹಿವಾಟು ಭೀತಿ ಬೆಲೆ ಏರಿಕೆಗೆ ಪ್ರಮುಖ ಕಾರಣ.
"ಸಾಗರೋತ್ತರ ಮಾರುಕಟ್ಟೆಯ ಧನಾತ್ಮಕ ಸುಳಿವಿನ ಹಿನ್ನೆಲೆಯಲ್ಲಿ ಎಂಸಿಎಕ್ಸ್ ನಲ್ಲಿ ಬೆಳ್ಳಿ ಬೆಲೆ ಗರಿಷ್ಠ ಮಟ್ಟ ತಲುಪಿದೆ. ಜಾಗತಿಕ ವ್ಯಾಪಾರ ಸಂಘರ್ಷಗಳು ಸುರಕ್ಷಿತ ಆಸ್ತಿಗಳ ಬೇಡಿಕೆ ಹೆಚ್ಚಲು ಕಾರಣವಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಸಿಲ್ವರ್ ವಹಿವಾಟು 13 ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ನ ಕಮೊಡಿಟೀಸ್ ವಿಭಾಗದ ಹಿರಿಯ ವಿಶ್ಲೇಷಕ ಸ್ಯಾಮ್ಯುಯೆಲ್ ಗಾಂಧಿ ಹೇಳುತ್ತಾರೆ.
ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಕೆನಡಾದ ಆಮದಿನ ಮೇಲೆ ಟ್ರಂಪ್ ಶೇಕಡ 35ರಷ್ಟು ಮತ್ತು ಇತರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇಕಡ 15-20ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಚಿನ್ನದ ಬೆಲೆ ಕೂಡಾ ವಾರದ ಗರಿಷ್ಠ ಮಟ್ಟವನ್ನು ಶುಕ್ರವಾರ ದಾಖಲಿಸಿದ್ದು, 3,356 ಡಾಲರ್ ಗೆ ಏರಿದೆ ಎಂಧು ಗಾಂಧಿ ವಿವರಿಸಿದ್ದಾರೆ.
ಇದರ ಜತೆಗೆ ಬೆಳ್ಳಿಯ ಪೂರೈಕೆ ಕೂಡಾ ಬೇಡಿಕೆಗಿಂತ ಕಡಿಮೆ ಇದೆ. ಸತತ ಐದನೇ ವರ್ಷ ಬೆಳ್ಳಿಯ ಪೂರೈಕೆ ಕಡಿಮೆ ಇದ್ದು, ಹಸಿರು ಆರ್ಥಿಕತೆ ಅನ್ವಯಿಕೆಗಳ ಹಿನ್ನೆಲೆಯಲ್ಲಿ ಕೈಗಾರಿಕಾ ಬೇಡಿಕೆ 700 ದಶಲಕ್ಷ ಔನ್ಸ್ ಗಿಂತಲೂ ಅಧಿಕವಾಗುವ ನಿರೀಕ್ಷೆ ಇದೆ ಎಂದು ವಿಶ್ಲೇಷಿಸಿದ್ದಾರೆ. ಕೈಗಾರಿಕಾ ಬೇಡಿಕೆ ಹೆಚ್ಚಿರುವುದು ಕೂಡಾ ಬೆಲೆ ಏರಿಕೆಗೆ ಪ್ರಮುಖ ಕಾರಣ. ಚೀನಾ ಜತೆಗಿನ ವ್ಯಾಪಾರ ವ್ಯಾಜ್ಯವನ್ನು ಟ್ರಂಪ್ ಬಗೆಹರಿಸಿಕೊಂಡ ಹಿನ್ನೆಲೆಯಲ್ಲಿ ಕೈಗಾರಿಕಾ ಬೇಡಿಕೆ ಹೆಚ್ಚುತ್ತಿದೆ ಎಂದು ಅಖಿಲ ಭಾರತ ಹರಳು ಮತ್ತು ಆಭರಣಗಳ ದೇಶೀಯ ಮಂಡಳಿಯ ಮುಖ್ಯಸ್ಥ ವಿಸಿ ಅವಿನಾಶ್ ಗುಪ್ತಾ ಅಭಿಪ್ರಾಯಪಡುತ್ತಾರೆ.







