ರೂನಿಗೆ ನಾಲ್ಕನೆ ಬಾರಿ ‘ಇಂಗ್ಲೆಂಡ್ನ ವರ್ಷದ ಆಟಗಾರ’ ಪ್ರಶಸ್ತಿ
ಲಂಡನ್, ಜ.6: ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ವೇಯ್ನಾ ರೂನಿ ನಾಲ್ಕನೆ ಬಾರಿ ಇಂಗ್ಲೆಂಡ್ನ ವರ್ಷದ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಫುಟ್ಬಾಲ್ ಸಂಸ್ಥೆ ತಿಳಿಸಿದೆ.
30ರ ಹರೆಯದ ರೂನಿ ಇಂಗ್ಲೆಂಡ್ನ ಪರ 51 ಗೋಲುಗಳನ್ನು ಬಾರಿಸಿ ಸ್ವದೇಶದ ಬಾಬ್ಬಿ ಚಾರ್ಲ್ಸ್ಟನ್ ಹೆಸರಲ್ಲಿದ್ದ ದೀರ್ಘಕಾಲದ ದಾಖಲೆಯನ್ನು(49ಗೋಲುಗಳು) ಮುರಿದಿದ್ದರು. ಯುರೋ 2016ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಒಟ್ಟು ಏಳು ಗೋಲುಗಳನ್ನು ಬಾರಿಸಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.
ಇಂಗ್ಲೆಂಡ್ ಫುಟ್ಬಾಲ್ ತಂಡದ ನಾಯಕ ರೂನಿ ಇಂಗ್ಲೆಂಡ್ ಸಪೋಟರ್ಸ್ ಕ್ಲಬ್ ಸದಸ್ಯರು ನಡೆಸಿದ ಮತದಾನದಲ್ಲಿ ಶೇ.37ರಷ್ಟು ಮತಗಳನ್ನು ಪಡೆದುಕೊಂಡು ವರ್ಷದ ಆಟಗಾರ ಪ್ರಶಸ್ತಿಗೆ ಆಯ್ಕೆಯಾದರು. ರೂನಿ 2008,2009 ಹಾಗೂ 2014ರಲ್ಲೂ ಇಂಗ್ಲೆಂಡ್ನ ವರ್ಷದ ಆಟಗಾರ ಪ್ರಶಸ್ತಿ ಸ್ವೀಕರಿಸಿದ್ದರು.
ಈ ಋತುವಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಸ್ಟೋಕ್ಸಿಟಿ ತಂಡದ ಗೋಲುಕೀಪರ್ ಜಾಕ್ ಬಟ್ಲೆಂಡ್ ವರ್ಷದ ಅಂಡರ್-21 ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್ ತಂಡ ಮಾ.26 ರಂದು ಬರ್ಲಿನ್ನಲ್ಲಿ ಜರ್ಮನಿಯ ವಿರುದ್ಧ ಸೌಹಾರ್ದ ಪಂದ್ಯ ಆಡುವ ಮೊದಲು ರೂನಿ ಹಾಗೂ ಬಟ್ಲೆಂಡ್ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.