‘ದೂಸ್ರಾ’ ಚಿತ್ರದ ಬಿಡುಗಡೆಗೆ ತಡೆ ಕೋರಿದ ಸೌರವ್ ಗಂಗುಲಿ: ತಕ್ಷಣದ ಆದೇಶಕ್ಕೆ ದೆಹಲಿ ಹೈಕೋರ್ಟ್ ನಕಾರ
ಲಾರ್ಡ್ಸ್ ನಲ್ಲಿ ಅಂಗಿ ಕಳಚಿ ಸಂಭ್ರಮಿಸಿದ ದೃಶ್ಯದ ಬಳಕೆಗೆ ಆಕ್ಷೇಪ; ವ್ಯಕ್ತಿತ್ವ ಹಕ್ಕು ಉಲ್ಲಂಘನೆಯ ಆರೋಪ

Photo: x.com/barandbench
ಹೊಸದಿಲ್ಲಿ, ಅ. 22: ಲಾರ್ಡ್ಸ್ ಮೈದಾನದಲ್ಲಿ ಅಂಗಿ ಕಳಚಿ ಸಂಭ್ರಮಿಸಿದ ಐತಿಹಾಸಿಕ ಕ್ರಿಕೆಟ್ ಕ್ಷಣವೂ ಸೇರಿದಂತೆ ತಮ್ಮ ಹೆಸರು, ಖ್ಯಾತಿ ಮತ್ತು ಕ್ರಿಕೆಟ್ ಬದುಕಿನ ಘಟನೆಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಆರೋಪಿಸಿ ‘ದೂಸ್ರಾ’ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಸಲ್ಲಿಸಿರುವ ಅರ್ಜಿಯ ಕುರಿತು ತಕ್ಷಣ ಯಾವುದೇ ಆದೇಶ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ ಎಂದು barandbench.com ವರದಿ ಮಾಡಿದೆ.
ನ್ಯಾಯಮೂರ್ತಿ ದಿನೇಶ್ ಭಟ್ ಅವರು ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸುವುದಾಗಿ ತಿಳಿಸಿದರು. ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ‘ನಾನು ಯಾವುದೇ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಚಿತ್ರದ ಬಿಡುಗಡೆ ಮುಂದುವರಿಯಬಹುದು’ ಎಂದರು.
ಗಂಗುಲಿ ಅವರ ಅನುಮತಿ ಪಡೆಯದೆ ‘ದೂಸ್ರಾ’ ಚಿತ್ರದಲ್ಲಿ ಅವರ ಹೆಸರು, ಖ್ಯಾತಿ ಹಾಗೂ ಕ್ರಿಕೆಟ್ ಬದುಕಿನ ಪ್ರಮುಖ ಘಟನೆಗಳನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಗಂಗುಲಿ ಅವರ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಯಾಗಿದೆ. ಅಲ್ಲದೆ, ಗಂಗುಲಿ ಅವರ ಜೀವನಚರಿತ್ರೆ ಆಧರಿಸಿ ಚಿತ್ರ ನಿರ್ಮಿಸುವ ಸಂಬಂಧ ಲವ್ ಫಿಲ್ಮ್ಸ್ ಮಾಡಿಕೊಂಡಿರುವ ಒಪ್ಪಂದದ ಹಕ್ಕುಗಳಿಗೂ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಚಿತ್ರದ ಚಿತ್ರಮಂದಿರ ಮತ್ತು ಡಿಜಿಟಲ್ ಬಿಡುಗಡೆ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿನ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಬೇಕು. ಗಂಗುಲಿ ಅವರ ಹೆಸರು, ಚಿತ್ರ, ಹೋಲಿಕೆ ಹಾಗೂ ಅವರ ವೃತ್ತಿಜೀವನದ ಪ್ರಮುಖ ಕ್ರಿಕೆಟ್ ಕ್ಷಣಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡಿದ್ದಾರೆ ಎನ್ನಲಾದ ಪ್ರಚಾರ ಸಾಮಗ್ರಿಗಳ ಪ್ರಸರಣವನ್ನೂ ತಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
2027ರಲ್ಲಿ ಗಂಗುಲಿ ಜೀವನಚರಿತ್ರೆ ಚಿತ್ರ
ಗಂಗುಲಿ ಅವರು 2021ರ ಆಗಸ್ಟ್ 5ರಂದು ಲವ್ ಫಿಲ್ಮ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ತಮ್ಮ ಜೀವನ ಮತ್ತು ಕ್ರಿಕೆಟ್ ವೃತ್ತಿಜೀವನವನ್ನು ಆಧರಿಸಿದ ಜೀವನಚರಿತ್ರೆ ಸೇರಿದಂತೆ ಆಡಿಯೊವಿಶುವಲ್ ವಿಷಯವನ್ನು ಅಭಿವೃದ್ಧಿಪಡಿಸಲು, ನಿರ್ಮಿಸಲು ಮತ್ತು ವಾಣಿಜ್ಯಿಕವಾಗಿ ಬಳಸಿಕೊಳ್ಳಲು ಸಂಸ್ಥೆಗೆ ವಿಶೇಷ ಹಕ್ಕುಗಳನ್ನು ನೀಡಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
‘ದಾದಾ–ದಿ ಸೌರವ್ ಗಂಗೂಲಿ ಸ್ಟೋರಿ’ (Dada – The Sourav Ganguly Story) ಎಂಬ ಶೀರ್ಷಿಕೆಯ ಅಧಿಕೃತ ಜೀವನಚರಿತ್ರೆ ಚಿತ್ರದಲ್ಲಿ ಲವ್ ಫಿಲ್ಮ್ಸ್ ಭಾರಿ ಹೂಡಿಕೆ ಮಾಡಿದೆ. ಈ ಚಿತ್ರವು 2027ರ ಮೇ 14ರಂದು ಬಿಡುಗಡೆಯಾಗಲು ನಿಗದಿಯಾಗಿದೆ.
ಅಕ್ಟೋಬರ್ 12ರಂದು ಬಿಡುಗಡೆಯಾದ ‘ದೂಸ್ರಾ’ ಚಿತ್ರದ ಟ್ರೈಲರ್ ಮತ್ತು ಪ್ರಚಾರ ಅಭಿಯಾನದಲ್ಲಿ ಗಂಗುಲಿ ಅವರ ನಾಯಕತ್ವ ಹಾಗೂ 2002ರ ನ್ಯಾಟ್ವೆಸ್ಟ್ ಸರಣಿಯ ಫೈನಲ್ ನಲ್ಲಿ ಭಾರತ ತಂಡ ಸಾಧಿಸಿದ ಐತಿಹಾಸಿಕ ಗೆಲುವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಗಂಗುಲಿ ತಮ್ಮ ಅಂಗಿಯನ್ನು ಕಳಚಿ ಸಂಭ್ರಮಿಸಿದ ದೃಶ್ಯವೂ ಇದರಲ್ಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಗಂಗೂಲಿ ಅವರ ಗುರುತು ಮತ್ತು ಖ್ಯಾತಿಯನ್ನು ಬಳಸಿಕೊಂಡು ವಾಣಿಜ್ಯ ಲಾಭ ಪಡೆಯುವುದು ಈ ಉಲ್ಲೇಖಗಳ ಉದ್ದೇಶವಾಗಿದೆ. ಇದರಿಂದ ಅವರು ಚಿತ್ರದೊಂದಿಗೆ ಸಂಬಂಧ ಹೊಂದಿದ್ದಾರೆ ಅಥವಾ ಅದಕ್ಕೆ ಬೆಂಬಲ ನೀಡಿದ್ದಾರೆ ಎಂಬ ತಪ್ಪು ಕಲ್ಪನೆ ಮೂಡಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.
ಅಕ್ಟೋಬರ್ 13ರಂದು ನಡೆದ ಸಂದರ್ಶನವೊಂದರಲ್ಲಿ ಚಿತ್ರದ ನಿರ್ದೇಶಕ ಅಭಿನಯ್ ದೇವ್ ಅವರು, 2002ರ ನ್ಯಾಟ್ವೆಸ್ಟ್ ಫೈನಲ್ ಹಾಗೂ ಗಂಗುಲಿ ಅವರ ವೃತ್ತಿಜೀವನದ ಪ್ರಮುಖ ಘಟನೆಗಳು ಚಿತ್ರದ ಕಾಲ್ಪನಿಕ ಪಾತ್ರವಾದ ‘ತಾರಾ’ಳ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಚರ್ಚಿಸಿದ್ದರು ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.
‘ಟ್ರೈಲರ್ ನ ಮೂರನೇ ಒಂದು ಭಾಗ ಗಂಗುಲಿ ಅವರಿಗೆ ಸಂಬಂಧಿಸಿದ್ದು’
‘ದೂಸ್ರಾ’ ಚಿತ್ರವು ಗಂಗುಲಿ ಅವರ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸಿದೆ. ಚಿತ್ರ ನಿರ್ಮಾಣಕ್ಕೆ ಅವರಿಂದ ಯಾವುದೇ ಅನುಮತಿ ಅಥವಾ ಪರವಾನಗಿ ಪಡೆದಿಲ್ಲ ಎಂದು ಗಂಗುಲಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಚಿತ್ರದಲ್ಲಿ ಗಂಗುಲಿ ಅವರು ‘ಸ್ಯೂಡೋ ಹೀರೋ’ (ಪರೋಕ್ಷ ನಾಯಕ) ಆಗಿದ್ದಾರೆ. ಟ್ರೈಲರ್ನ ಸುಮಾರು ಮೂರನೇ ಒಂದು ಭಾಗದಷ್ಟು ದೃಶ್ಯಗಳು ಅವರಿಗೆ ಸಂಬಂಧಿಸಿವೆ ಎಂದೂ ವಕೀಲರು ವಾದಿಸಿದರು. ಚಿತ್ರದ ನಿರ್ದೇಶಕರು ಸಂದರ್ಶನವೊಂದರಲ್ಲಿ ಗಂಗುಲಿ ಅವರ ಬಗ್ಗೆ ಪ್ರಸ್ತಾಪಿಸಿರುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ, ‘ದೂಸ್ರಾ’ ಗಂಗೂಲಿ ಅವರ ಜೀವನಚರಿತ್ರೆಯಲ್ಲ ಎಂದು ನಿರ್ಮಾಪಕರ ಪರ ವಕೀಲರು ಸ್ಪಷ್ಟಪಡಿಸಿದರು. ರಾಜಸ್ಥಾನದ ಯುವತಿಯೊಬ್ಬಳು ಗಂಗುಲಿ ಅವರಿಂದ ಸ್ಫೂರ್ತಿ ಪಡೆಯುವ ಕಥೆಯನ್ನು ಚಿತ್ರ ಹೊಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಟ್ವೆಸ್ಟ್ ಸರಣಿಯ ದೃಶ್ಯಗಳನ್ನು ಬಳಸಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯಿಂದ ಅನುಮತಿ ಪಡೆಯಲಾಗಿದೆ. ಇಂತಹ ದೃಶ್ಯಗಳ ಮೇಲೆ ಗಂಗುಲಿ ಅವರಿಗೆ ವೈಯಕ್ತಿಕ ಹಕ್ಕು ಇರುವುದಿಲ್ಲ ಎಂದೂ ನಿರ್ಮಾಪಕರ ಪರ ವಕೀಲರು ವಾದಿಸಿದರು.
ಗಂಗುಲಿ ಮತ್ತು ಲವ್ ಫಿಲ್ಮ್ಸ್ ಪರವಾಗಿ ನಿಯೋ ಜ್ಯೂರಿಸ್ (Neo Juris) ಸಂಸ್ಥೆಯ ವಕೀಲರಾದ ಜಯಾ ಗೋಯಲ್ ಮತ್ತು ಮನ್ಪ್ರೀತ್ ಕೌರ್ ಅರ್ಜಿ ಸಲ್ಲಿಸಿದ್ದಾರೆ.
ಪ್ರತಿವಾದಿ ಮಸ್ಜ್ದಾ ಸಾಜೆಹ್ (Masjda Sajeh) ಪರವಾಗಿ ಹಿರಿಯ ವಕೀಲ ಬಲ್ಬೀರ್ ಸಿಂಗ್ ಹಾಗೂ ವಕೀಲರಾದ ಅಮೀತ್ ನಾಯಕ್, ಮಧು ಗಡೋಡಿಯಾ, ಮೇಘಾ ಚಂದ್ರ, ಧ್ರುವ ಆನಂದ್, ಸಾಕ್ಷಿ ದುಬೆ, ಉನ್ನತಿ ಗಂಬಾನಿ ಮತ್ತು ಖುಷಿ ಅಗರ್ವಾಲ್ ಹಾಜರಿದ್ದರು. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಪರವಾಗಿ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಹಾಗೂ ವಕೀಲರಾದ ಅಮೀತ್ ನಾಯಕ್, ಮಧು ಗಡೋಡಿಯಾ, ಸಂಜೀವಿ ಶೇಷಾದ್ರಿ, ಧ್ರುವ ಆನಂದ್, ಸಾಕ್ಷಿ ದುಬೆ, ಉನ್ನತಿ ಗಂಬಾನಿ ಮತ್ತು ಖುಷಿ ಅಗರ್ವಾಲ್ ವಾದ ಮಂಡಿಸಿದರು.
ಸೌಜನ್ಯ: barandbench.com






