Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಸರಕಾರಕ್ಕೆ 6 ತಿಂಗಳು : ಸಿದ್ದರಾಮಯ್ಯಗೆ...

ಸರಕಾರಕ್ಕೆ 6 ತಿಂಗಳು : ಸಿದ್ದರಾಮಯ್ಯಗೆ ಕಲ್ಲುಮುಳ್ಳಿನ ಹಾದಿ

ಜನಪರ ಯೋಜನೆಗಳ ಶ್ರೇಯಸ್ಸು, ಪಕ್ಷದೊಳಗಿನ ಹಿತಶತ್ರುಗಳ ಕಾಟ ► ಬಿಜೆಪಿ - ಜೆಡಿಎಸ್ ಹಾಕುವ ಸವಾಲುಗಳನ್ನು ಎದುರಿಸೋದು ಎಷ್ಟು ಕಷ್ಟ ?

ಆರ್. ಜೀವಿಆರ್. ಜೀವಿ22 Nov 2023 7:36 PM IST
share
ಸರಕಾರಕ್ಕೆ 6 ತಿಂಗಳು : ಸಿದ್ದರಾಮಯ್ಯಗೆ ಕಲ್ಲುಮುಳ್ಳಿನ ಹಾದಿ

ಸಿದ್ದರಾಮಯ್ಯ ಸರ್ಕಾರ 6 ತಿಂಗಳು ಪೂರ್ಣಗೊಳಿಸಿದೆ. ಹನಿಮೂನ್ ಪೀರಿಯಡ್ ಮುಗಿದಿದೆ ಎಂದೂ ಮಾಧ್ಯಮಗಳು ಹೇಳತೊಡಗಿವೆ. ಆದರೆ ನಿಜವಾಗಿಯೂ ಈ ಸರ್ಕಾರದ ಪಾಲಿಗೆ ಹನಿಮೂನ್ ಪೀರಿಯಡ್ ಇತ್ತೆ ಎಂಬ ಪ್ರಶ್ನೆಯೂ ಏಳುತ್ತದೆ. ಮೊದಲ ದಿನದಿಂದಲೇ ಹತಾಶ ಪ್ರತಿಪಕ್ಷಗಳ ಅಪಪ್ರಚಾರ, ಅವು ತಾ ಮುಂದು ನಾ ಮುಂದು ಎಂದು ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದ ರೀತಿ ನೋಡಿದರೆ, ಮೊದಲ ದಿನದಿಂದಲೇ ಅವು ಸರ್ಕಾರ ಬೀಳುವುದರ ಬಗ್ಗೆ ಮಾತನಾಡುತ್ತಿದ್ದುದನ್ನು ಗಮನಿಸಿದರೆ, ಈ 6 ತಿಂಗಳುಗಳ ಒಂದೊಂದು ದಿನವೂ ಸರ್ಕಾರಕ್ಕೆ ಸವಾಲಿನ ಸಮಯವೇ ಆಗಿತ್ತು ಎಂಬುದನ್ನು ಹೇಳಲೇಬೇಕಿದೆ.

ಹಾಗೆಂದು ಇಂಥದೊಂದು ಸವಾಲಿನ ​ಸಂದರ್ಭವನ್ನು, ಬಿಕ್ಕಟ್ಟಿನ ಸಮಯವನ್ನು ಅದು ಎದುರಿಸಬೇಕಾಗಿ ಬಂದುದಕ್ಕೆ ವಿರೋಧಿಗಳ ಅಪಸ್ವರ, ಅಪಪ್ರಚಾರವೇ ಪೂರ್ತಿ ಕಾರಣ ಎಂದೂ ಹೇಳುವಂತಿಲ್ಲ. ಸ್ವತಃ ಕಾಂಗ್ರೆಸ್ನ ಆಂತರಿಕ ಕಚ್ಚಾಟಗಳ ಪಾಲೂ ಇದರಲ್ಲಿ ಇದೆ.

ಗೆದ್ದ ಮಾರನೇ ದಿನದಿಂದಲೇ ಸಿಎಂ ಪಟ್ಟದ ವಿಚಾರವಾಗಿ ಶುರುವಾದ ಸಂಘರ್ಷ, ಚುನಾವಣೆಗೆ ಮುಂಚಿನಿಂದಲೂ ಕಾಂಗ್ರೆಸ್​ ಅನ್ನು ಕಾಡುತ್ತಿದ್ದ ಬಣ ರಾಜಕೀಯದ ಮುಂದುವರಿಕೆಯಾಗಿ ದೊಡ್ಡ ಸದ್ದು ಮಾಡಿತ್ತು. ಅದೆಲ್ಲವನ್ನೂ ಒಂದು ಹಂತದಲ್ಲಿ ಬಗೆಹರಿಸಿಕೊಂಡು ಸರ್ಕಾರ ರಚಿಸಿದ ಬಳಿಕ ಮತ್ತೆ ಎದ್ದ ಆಂತರಿಕ ಬೇಗುದಿ, ಕಡೆಗೆ ಕೆಲವು ನಾಯಕರು ಜಾತಿ ಸಮಾವೇಶ, ಸಮುದಾಯದ ಸಮಾವೇಶ ಎಂದೆಲ್ಲ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುವ ಮಟ್ಟದವರೆಗೂ ಹೋಯಿತು.

ಬಹುಮತದೊಂದಿಗೆ ಆರಿಸಿಬಂದ ಸರ್ಕಾರ ಇಷ್ಟು ಬೇಗ ಇಂಥದೊಂದು ಒಳ ತಳಮಳಗಳಲ್ಲಿ ಸಿಕ್ಕಿಬಿದ್ದದ್ದು ವಿರೋಧಿಗಳ ಪಾಲಿಗೆ ಅಸ್ತ್ರವಾಗಿ ಸಿಗಲು ಕಾರಣವಾಗಿದೆ ಎಂಬುದಂತೂ ನಿಜ. ಇದದೆಲ್ಲದರ ನಡುವೆಯೂ ಸರ್ಕಾರ 6 ತಿಂಗಳು ಪೂರ್ಣಗೊಳಿಸಿರುವುದು, ಈ 6 ತಿಂಗಳಲ್ಲಿ ಅದು ಜನಸಾಮಾನ್ಯರನ್ನು ತನ್ನ ಗ್ಯಾರಂಟಿಗಳೂ ಸೇರಿದಂತೆ ಹಲವು ಯೋಜನೆಗಳ ಮೂಲಕ ಮುಟ್ಟಿರುವುದು ಗಮನಾರ್ಹ.

ವಿರೋಧಿಗಳ ದಾಳಿಯ ನಡುವೆಯೇ, ಕಾಂಗ್ರೆಸ್ ಸರ್ಕಾರದ ಮೇಲೆ ಅದು ಜನರಿಗೆ ಕೊಟ್ಟಿದ್ದ ಗ್ಯಾರಂಟಿಗಳನ್ನು ಈಡೇರಿಸಬೇಕಾದ ಬಹು ದೊಡ್ಡ ಹೊಣೆಗಾರಿಕೆ ಇತ್ತು. ಅದು ಬಹು ದೊಡ್ಡ ಭಾರವೂ ಆಗಿತ್ತು. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಚುನಾವಣೆಗೆ ಮೊದಲು ಲೇವಡಿ ಮಾಡುತ್ತ, ಅದಕ್ಕೆ ಗೆಲ್ಲುವ ಗ್ಯಾರಂಟಿಯೇ ಇಲ್ಲ ಎಂದಿದ್ದ ಬಿಜೆಪಿ ಮತ್ತು ಜೆಡಿಎಸ್,

ಸರ್ಕಾರ ರಚನೆ ​ಆದ ದಿನದಿಂದಲೇ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಶುರು ಮಾಡಿಕೊಂಡಿದ್ದವು.

ಯಾವ ಮಟ್ಟಿಗೆಂದರೆ ಜನಸಾಮಾನ್ಯರಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಪೂರ್ತಿ ನಂಬಿಕೆ ಹೋಗಿ, ಅವು ಸರ್ಕಾರದ ವಿರುದ್ಧ ಸಿಡಿದೇಳುವ ಮಟ್ಟಿಗೆ ಪ್ರಚೋದಿಸುವ​ ವ್ಯವಸ್ಥಿತ ಅಪಪ್ರಚಾರ ನಡೆದಿತ್ತು. ಆದರೆ ಎಲ್ಲವನ್ನೂ ಕೆಲಸದ ಮೂಲಕವೇ, ಅದೂ ಕೂಡ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಧಿಸಿ ತೋರಿಸುವ ಮೂಲಕವೇ ಸಿದ್ದರಾಮಯ್ಯ ಎಲ್ಲದಕ್ಕೂ ಉತ್ತರಿಸಿ​ದರು. ಪ್ರತಿಪಕ್ಷಗಳ ಬಾಯಿಗೆ ಬೀಗ ಬೀಳುವ ಮಟ್ಟಿಗೆ ಅವರು ಅತ್ಯಂತ ಕರಾರುವಾಕ್ಕಾಗಿ ಗ್ಯಾರಂಟಿಗಳನ್ನು ವಾಸ್ತವ ರೂಪಕ್ಕಿಳಿಸಿ​ದರು.

ನುಡಿದಂತೆ ನಡೆದಿದ್ದೇವೆ, ರಾಜ್ಯದ ಶೇ.96ಕ್ಕಿಂತಲೂ ಅಧಿಕ ಮಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಪ್ರಯೋಜನವಾಗಿದೆ ಎಂಬ ಕಾಂಗ್ರೆಸ್ ಸರ್ಕಾರದ ಮಾತಿನಲ್ಲಿ ಅವಾಸ್ತವ ಇಲ್ಲ, ಬಿಜೆಪಿಯವರ ಥರದ ಬೊಗಳೆಗಳಾಗಲೀ, ಜೆಡಿಎಸ್ನ ಉಡಾಫೆತನವಾಗಲೀ ಇಲ್ಲ ಎಂಬುದು ಕಾಣಿಸುತ್ತದೆ.

ರಾಜ್ಯದ ಬಹುತೇಕ ಗ್ರಾಮೀಣ ಪ್ರದೇಶಗಳ ಜನರ ಮನಸ್ಸಿನಲ್ಲಿ ಸಿದ್ದರಾಮಯ್ಯ ಸರ್ಕಾರ ಹೊಸ ಭರವಸೆಯನ್ನು ತುಂಬಿದೆ, ಬದುಕನ್ನು ಅವರ ಪಾಲಿಗೆ ಸಹ್ಯವಾಗಿಸಿದೆ ಎಂಬುದು ನಿಜ.

ಗ್ಯಾರಂಟಿಗಳ ಮೂಲಕ ಸಿದ್ದರಾಮಯ್ಯ ಸರ್ಕಾರ ಸಾಧಿಸಿರುವುದನ್ನು ಪಟ್ಟಿ ಮಾಡುವುದಾದರೆ,

1.ಶಕ್ತಿ ಯೋಜನೆಯಡಿಯಲ್ಲಿ ನಿತ್ಯವೂ 60 ಲಕ್ಷ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. 97.30 ಕೋಟಿ ಟ್ರಿಪ್ಗಳಲ್ಲಿ ಈವರೆಗೆ ಪ್ರಯಾಣಿಸಿದ್ದಾರೆ.

2.ಗೃಹಜ್ಯೋತಿ ಯೋಜನೆಯಡಿ 1.56 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ.

3.ಪ್ರತಿ ತಿಂಗಳೂ ಕುಟುಂಬದ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಲ್ಲಿ 99.52 ಲಕ್ಷ ಖಾತೆಗಳಿಗೆ ನಗದು ವರ್ಗಾವಣೆಯಾಗಿದೆ.

4.ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಇನ್ನೈದು ಕೆಜಿ ಅಕ್ಕಿಗೆ ಪರ್ಯಾಯವಾಗಿ 3.92 ಕೋಟಿ ಫಲಾನುಭವಿಗಳಿಗೆ 2,444 ಕೋಟಿ ರೂ. ವರ್ಗಾವಣೆಯಾಗಿದೆ.​

ಇದಲ್ಲದೆ, ಸರ್ಕಾರ ಪಟ್ಟಿ ಮಾಡಿರುವ ಪ್ರಮುಖ ಸಾಧನೆಗಳೆಂದರೆ, 19 ಲಕ್ಷ ರೈತರಿಗೆ 1,500 ಕೋಟಿ ರೂ. ಬೆಳೆ ವಿಮೆ,

9 ಲಕ್ಷ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, 16 ಲಕ್ಷ ರೈತರಿಗೆ ಬೆಳೆಸಾಲ, 18,230 ಸ್ವಸಹಾಯ ಗುಂಪುಗಳಿಗೆ ಬಡ್ಡಿ ಸಾಲ, 48 ಲಕ್ಷ ಫಲಾನುಭವಿಗಳನ್ನು ಮುಟ್ಟಿದ ಯಶಸ್ವಿನಿ, ಎಸ್, ಎಸ್ಟಿ ಮತ್ತು ಇತರರಿಗೆ 98,080 ಮನೆಗಳ ನಿರ್ಮಾಣ, ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ 9.5 ಲಕ್ಷ ವಿದ್ಯಾರ್ಥಿಗಳಿಗೆ 525 ಕೋಟಿ ರೂ. ವಿದ್ಯಾರ್ಥಿವೇತನ, ಸಕಾಲ ಸೇವೆಗಳ ಅಡಿಯಲ್ಲಿ 1.91 ಕೋಟಿ ಅರ್ಜಿಗಳ ವಿಲೇವಾರಿ,

ಕಂದಾಯ ನ್ಯಾಯಾಲಯದಲ್ಲಿ 59,757 ಪ್ರಕರಣ ಇತ್ಯರ್ಥ, 185.74 ಕೋಟಿ ರೂ. ವೆಚ್ಚದಲ್ಲಿ ಅನೀಮಿಯಾ ಮುಕ್ತ ರಾಜ್ಯವನ್ನಾಗಿಸಲು ಪೌಷ್ಠಿಕ ಕರ್ನಾಟಕ ಯೋಜನೆಗೆ ಸಿದ್ಧತೆ.

ಹಾಗೆ ನೋಡಿದರೆ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ ಸಾಧನೆಯ ವಿಷಯದಲ್ಲಿ ಅದರದ್ದೇ ಆದ ವಿಶಿಷ್ಟ ದಾಖಲೆಗಳಿವೆ. ಅನ್ನಭಾಗ್ಯ ಸಿದ್ದರಾಮಯ್ಯ ಕನಸಿದ ಯೋಜನೆಯಾಗಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. ಈ ಸರ್ಕಾರದಲ್ಲೂ ಅದರ ಮುಂದುವರಿಕೆ ಇನ್ನೂ ದೊಡ್ಡ ಮಟ್ಟದಲ್ಲಿ ಆಗಿದೆ. ಶಾಲಾ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆಯಂತೂ ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ಹಾಲು ವಿತರಣೆ ಮಾಡುವ ಅಪರೂಪದ ಯೋಜನೆಯಾಗಿತ್ತು. ಮೈತ್ರಿ, ಮನಸ್ವಿನಿ ಯೋಜನೆಗಳೂ ಜನಪ್ರಿಯತೆ ಪಡೆದಿದ್ದವು. ಕೃಷಿಭಾಗ್ಯ ಯೋಜನೆ, ವಿದ್ಯಾಸಿರಿ ಯೋಜನೆಗಳೂ ಗಮನ ಸೆಳೆದಿದ್ದವು. ​ಇಂದಿರಾ ಕ್ಯಾಂಟೀನ್ ಅಂತೂ ನಗರಗಳಲ್ಲಿ ಹಸಿದವರ ಪಾಲಿಗೆ ಆಸರೆಯಾಗಿತ್ತು.

ಹಿಂದಿನ ಯೋಜನೆಗಳೆಲ್ಲವೂ ಈಗ ದೊಡ್ಡ ವ್ಯಾಪ್ತಿ ಪಡೆದಿವೆ. ಇವೆಲ್ಲವೂ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕ ಮಾದರಿ ಸರ್ಕಾರ ಎಂದು ಹೇಳಿಕೊಳ್ಳುವಂತೆ ಮಾಡಿರುವುದು ಹೌದಾದರೂ, ಸರ್ಕಾರದ ಎದುರಿನ ರಾಜಕೀಯ ಸವಾಲುಗಳೂ ಅಷ್ಟೇ ದೊಡ್ಡದಿವೆ. ​ಯುವನಿಧಿ ಗ್ಯಾರಂಟಿ ಇನ್ನಷ್ಟೇ ಜಾರಿಯಾಗಬೇಕಿದೆ. ಅದು ಜಾರಿ ಆಗೋದೇ ಇಲ್ಲ ಎಂಬ ಬಗ್ಗೆ ಹಲವು ವದಂತಿಗಳು, ಊಹಾಪೋಹಗಳನ್ನು ಈಗಾಗಲೇ ವಿಪಕ್ಷಗಳು ಹರಡುತ್ತಿವೆ. ಅದಕ್ಕೆ ತಕ್ಕಂತೆ ಈಗಾಗಲೇ ಗೃಹಲಕ್ಷ್ಮೀ ಗ್ಯಾರಂಟಿಯ ಹಣ ಪಾವತಿಯಲ್ಲಿ ಅಲ್ಲಲ್ಲಿ ವಿಳಂಬವಾಗುತ್ತಿರುವ ವರದಿಗಳೂ ಬರುತ್ತಿವೆ. ಅದಕ್ಕೆ ಸಚಿವರು ಸ್ಪಷ್ಟನೆಯನ್ನೂ ನೀಡುತ್ತಿದ್ದಾರೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಹೋಲಿಸಿದರೆ ಈ ಸರ್ಕಾರ ನಿರಾಸೆ ತಂದಿದೆಯೆ ಎಂಬ ಅನುಮಾನಗಳೂ ಕಾಡುತ್ತಿವೆ. ​ಸಿದ್ದರಾಮಯ್ಯ ಅವರಂತಹ ನಾಯಕರಿಂದ ಪ್ರಜ್ಞಾವಂತ ಜನರು ನಿರೀಕ್ಷಿಸುವ ಜಾತ್ಯತೀತ ಸಿದ್ಧಾಂತಕ್ಕೆ ಗಟ್ಟಿ ಬದ್ಧತೆಯ ಸರಕಾರವಾಗಿ ಇದು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಕಾಂಗ್ರೆಸ್ ಗೆ ಮತ ನೀಡಿ ಬೆಂಬಲಿಸಿದವರಿಂದಲೇ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಸಂಘ ಪರಿವಾರದ ಆಟಾಟೋಪಕ್ಕೆ ಮುಲಾಜಿಲ್ಲದೆ ಕಡಿವಾಣ ಹಾಕುವಲ್ಲಿ ಈ ಸರಕಾರ ಇಚ್ಛಾಶಕ್ತಿಯನ್ನೇ ತೋರಿಸುತ್ತಿಲ್ಲ ಎಂಬ ಅಸಮಾಧಾನ ಇದೆ. ದ್ವೇಷ ಭಾಷಣಕಾರರು, ಪ್ರಚೋದನಕಾರಿ ಮಾತಾಡುವವರು, ಸಮಾಜದ ಶಾಂತಿ ಕದಡುವವರು, ಸುಳ್ಳು ಹರಡುವವರು, ಅನೈತಿಕ ಪೊಲೀಸ್ ಗಿರಿ ವಿರುದ್ಧ ಕೇವಲ ಹೆಸರಿಗೆ ಮಾತ್ರ ಒಂದಿಷ್ಟು ಕ್ರಮ ಕೈಗೊಳ್ಳಲಾಗುತ್ತಿದೆಯೇ ವಿನಃ ಅವರ ಹೆಡೆಮುರಿ ಕಟ್ಟುವ ಕ್ರಮ ಎಲ್ಲೂ ಆಗುತ್ತಲೇ ಇಲ್ಲ ಎಂಬ ದೂರುಗಳು ಬೇಕಾದಷ್ಟಿವೆ.

ಈ ಸರಕಾರ ಬಂದ ಮೇಲೂ ಆಯಕಟ್ಟಿನ ಸ್ಥಳಗಳಲ್ಲಿ, ಪ್ರಭಾವೀ ಹುದ್ದೆಗಳಲ್ಲಿ ಬಿಜೆಪಿ, ಸಂಘ ಪರಿವಾರದವರೇ ಮೆರೆಯುತ್ತಿದ್ದಾರೆ ಎಂಬ ಅಪಸ್ವರ ಕಾಂಗ್ರೆಸ್ ಬೆಂಬಲಿಗರಿಂದಲೇ ಕೇಳಿ ಬಂದಿದೆ. ಫೆಲೆಸ್ತೀನ್ ನಂತಹ ವಿಷಯಗಳಲ್ಲಿ ಕಾಂಗ್ರೆಸ್ ವರಿಷ್ಠರದ್ದೇ ಒಂದು ನಿಲುವಾದರೆ ಈ ಸರಕಾರದ್ದು ಅದಕ್ಕೆ ತದ್ವಿರುದ್ಧ ನಿಲುವು ಎಂಬ ಅಸಮಾಧಾನ ರಾಜ್ಯದ ಎಲ್ಲ ಪ್ರಗತಿಪರರಲ್ಲಿದೆ.

​ಇನ್ನು ರಾಜಕೀಯವಾಗಿ ​ಈ ಸರಕಾರಕ್ಕೆ ಆಕ್ರಮಣಕಾರಿ ವಿಪಕ್ಷಗಳ ಜೊತೆ ಪಕ್ಷದೊಳಗೇ ಇರುವ ಹಿತಶತ್ರುಗಳ ಕಾಟವೂ ಜೋರಾಗಿದೆ. ಈಗಾಗಲೇ ಪ್ರಸ್ತಾಪಿಸಿದಂತೆ ಹೆಚ್ಚು ಕಡಿಮೆ ಮೊದಲ ದಿನದಿಂದಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಂಥ ಸಣ್ಣ ನೆಪ ಸಿಕ್ಕರೂ ಅದನ್ನು ಅದರ ವಿರುದ್ಧ ಬಳಸಿಕೊಳ್ಳುವ ತಂತ್ರ ಅನುಸರಿಸುತ್ತಲೇ ಬಂದಿವೆ ಪ್ರತಿಪಕ್ಷಗಳು.

ಸರ್ಕಾರದ ವಿರುದ್ಧ ಮುಗಿಬೀಳುವುದರಲ್ಲಿ ಬಿಜೆಪಿಗಿಂತ ಮುಂದಿರುತ್ತಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ ಈಗಂತೂ ಅಧಿಕೃತವಾಗಿ ಬಿಜೆಪಿಯ ಟೀಂ ಆಗಿದ್ದಾರೆ. ಚುನಾವಣೆ ಸೋಲಿನಿಂದಾದ ಅತ್ಯಂತ ಹತಾಶೆ ಅವರ ಪ್ರತಿ ಮಾತುಗಳಲ್ಲಿಯೂ ಕಾಣಿಸುತ್ತಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಅದನ್ನು ಬಹಳ ಸಲ ಹೇಳಿದ್ದಾರೆ.

ಕುಮಾರಸ್ವಾಮಿ ಮಾಡುವ ದಿನಕ್ಕೊಂದು ಆರೋಪಗಳು ಆಧಾರವಿಲ್ಲದವೆಂಬ ತಕರಾರುಗಳ ನಡುವೆಯೇ, ಒಬ್ಬ ಮಾಜಿ ಸಿಎಂಗೆ ಇರಬೇಕಾದ ಘನತೆಯೇ ಇಲ್ಲದೆ ಮಾತಾಡುತ್ತಿದ್ದಾರೆ ಎಂಬ ಟೀಕೆಗಳ ನಡುವೆಯೇ ಸರ್ಕಾರದ ವಿರುದ್ಧದ ಟೀಕೆಗಳು ಜನಸಾಮಾನ್ಯರ ನಡುವೆ ಗಂಭೀರ ವಿಚಾರಗಳಾಗಿ ನಿಲ್ಲುವುದನ್ನು, ಅವರ ಮೇಲೆ ಪ್ರಭಾವ ಬೀರುವುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.

ಸಿದ್ದರಾಮಯ್ಯ ಮನೆಗೆ ಕೊಟಿ ಬೆಲೆಯ ಸೋಫಾ ಸೆಟ್ ಗಿಫ್ಟ್ ಬಂದಿದೆ ಎನ್ನುವಲ್ಲಿಂದ ಹಿಡಿದು ವರ್ಗಾವಣೆ ದಂಧೆಯ ವಿಚಾರವಾಗಿ ಸಿಎಂ ಕಾರ್ಯಾಲಯದ ವಿರುದ್ಧವೇ ಹರಿಹಾಯುವವರೆಗೆ ಕುಮಾರಸ್ವಾಮಿ ಆರೋಪಗಳು ಸುದ್ದಿಯಾಗುತ್ತಿವೆ. ಈಚೆಗೆ ಅವರು ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಮಾತುಕತೆಯ ವೀಡಿಯೊ ಬಗ್ಗೆ ಹೇಳುತ್ತ ವರ್ಗಾವಣೆ ದಂಧೆಯ ಆರೋಪ ಮಾಡಿದ್ದಾರೆ.

ಬಿಜೆಪಿ ಕೂಡ ಇದನ್ನು ಚುನಾವಣೆ ಹೊತ್ತಲ್ಲಿ ಬಳಸಿಕೊಳ್ಳುವಂತೆ ಬೆಳೆಸಲು ನೋಡುತ್ತಿದೆ.

ಡಿಕೆ ಶಿವಕುಮಾರ್ ವಿರುದ್ಧವೂ ಕುಮಾರಸ್ವಾಮಿ ಆರೋಪಗಳು ನಿಲ್ಲುತ್ತಿಲ್ಲ. ಇದಕ್ಕೆ ಕಟುವಾಗಿಯೇ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ದ್ವೇಷ ಮತ್ತು ಅಸೂಯೆಯಿಂದ ಕುಮಾರಸ್ವಾಮಿ ಮಾತನಾಡುತ್ತಿದ್ಧಾರೆ ಎಂದಿದ್ದರೆ, ಬುದ್ಧಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಎಚ್ಡಿಕೆ ವಿರುದ್ಧ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. ಆದರೆ, ಇಂಥ ಆರೋಪಗಳು ಸರ್ಕಾರದ ವಿರುದ್ಧ ಬಂದಾಗ, ಎಲ್ಲ ಬಣ್ಣವನ್ನೂ ಮಸಿ ನುಂಗಿತು ಎನ್ನುವಂತೆ ಸರ್ಕಾರದ ಸಾಧನೆಗಳನ್ನೆಲ್ಲ ನುಂಗಿಹಾಕುತ್ತವೆ. ಸರ್ಕಾರದ ಘನತೆ ಕುಂದುವ ಹಾಗಾಗುತ್ತದೆ. ಜನ ಸರ್ಕಾರದ ಬಗ್ಗೆ ಯೋಚಿಸುವ ರೀತಿಯ ಮೇಲೆ ಇಂಥ ಆರೋಪಗಳು ಪ್ರಭಾವ ಬೀರುತ್ತವೆ.

ಇದು ಸಾಲದು ಎನ್ನುವಂತೆ, ಸರ್ಕಾರದೊಳಗೇ ಸರ್ಕಾರದ ವಿರುದ್ಧ ಇರುವ ಶತ್ರುತ್ವ, ಅಸಮಾಧಾನ, ಅಪಸ್ವರಗಳು ಬೇರೆ. ಸಿಎಂ ಯಾವಾಗ ಬದಲಾಗುತ್ತಾರೆ ಎನ್ನುವಲ್ಲಿಂದ ಹಿಡಿದು, ಸಿಎಂ ಸ್ಥಾನಕ್ಕೆ ತಾನೂ ರೆಡಿ ಎಂದು ಹಲವರು ಹೇಳುವವರೆಗೆ, ಡಿಕೆ ಶಿವಕುಮಾರ್ ವಿರುದ್ಧ ಪಕ್ಷದೊಳಗೆ ಹರಿಹಾಯುವವರಿಂದ ಹಿಡಿದು ನಾಲ್ವರು ಡಿಸಿಎಂಗಳ ಬಗ್ಗೆ ಮಾತಾಡುವವರೆಗೆ ಕಾಂಗ್ರೆಸ್ನೊಳಗಿನ ಅಸಮಾಧಾನ ಹೊಗೆಯಾಡುತ್ತಲೇ ಇದೆ.

ಇದೆಲ್ಲದರ ಜೊತೆ, ಗ್ಯಾರಂಟಿ ಪೂರೈಸುವುದಕ್ಕಾಗಿ ಅನುದಾನಗಳಲ್ಲಿ ಕಡಿತ ಮಾಡಲಾಗಿರುವ ಆರೋಪವನ್ನೂ ಕಾಂಗ್ರೆಸ್ ಶಾಸಕರೇ ಮಾಡುತ್ತಿದ್ದಾರೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂಬ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವ ಶಾಸಕರೂ ಇದ್ದಾರೆ. ಲೋಕಸಭೆ ಚುನಾವಣೆ ಎದುರಿಗೆ ಇರುವ ಹೊತ್ತಿನಲ್ಲಿ ಇವೆಲ್ಲವೂ ಕಾಂಗ್ರೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಲ್ಲವೆ ಎಂಬ ಪ್ರಶ್ನೆಯೂ ಇದೆ.

ಇಂಥ ಅಪಾಯವನ್ನು ಅರಿತೇ ಸಿದ್ದರಾಮಯ್ಯ, ಮುನಿಸು ಬದಿಗಿಟ್ಟು ಸುಭದ್ರ ಸರ್ಕಾರ ನೀಡೋಣ, ಚುನಾವಣೆಯತ್ತ ಗಮನ ಹರಿಸೋಣ ಎಂದಿರುವುದು. ನವೆಂಬರ್ ಮೊದಲ ವಾರದಲ್ಲಿ ಸಂಪುಟದ ಅರ್ಧದಷ್ಟು ಸಚಿವರ ಜೊತೆ ಬ್ರೇಕ್​ ಫಾಸ್ಟ್ ಮೀಟಿಂಗ್ನಲ್ಲಿ ಅವರು ಸಚಿವರಲ್ಲಿ ಈ ಮನವಿ ಮಾಡಿದ್ದಾರೆ.

ಇನ್ನುಳಿದ ಸಚಿವರ ಜೊತೆಗೂ ಇಂಥದೇ ಸಭೆಯನ್ನು ಮುಂದಿನ ದಿನಗಳಲ್ಲಿ ಮಾಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಯಾರೂ ಅನಗತ್ಯ ವಿಷಯವನ್ನು ಬಹಿರಂಗವಾಗಿ ಮಾತನಾಡುವುದು ಬೇಡ ಎಂಬ ಮನವಿಯನ್ನು ಡಿಕೆ ಶಿವಕುಮಾರ್ ಕೂಡ ಮಾಡಿಕೊಂಡಿದ್ದಾರೆ. ಸಿಎಂ ಹುದ್ದೆ ವಿಚಾರವಾಗಿ ಮಾತನಾಡಿದ್ದ ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಕೂಡ ಸಿಎಂ ಬದಲಾವಣೆಯಿಲ್ಲ, ಗೊಂದಲಗಳಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಕಾವೇರಿಯಲ್ಲಿ ಹೊಸದಾಗಿ ಸ್ಥಾಪಿಸಿದ ಕಚೇರಿಯನ್ನೂ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಕೈಯಿಂದಲೇ ಟೇಪ್ ಕಟ್ ಮಾಡಿಸಿ ಉದ್ಘಾಟನೆ ಮಾಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು, ಸರ್ಕಾರದ ವಿರುದ್ಧ ಮುಗಿಬಿದ್ದಿರುವ, ಬೀಳಿಸುವ ಮಾತನಾಡುತ್ತಿರುವ ಪ್ರತಿಪಕ್ಷಕ್ಕೆ ಉತ್ತರದಂತಿದೆ.

ಪ್ರತಿಪಕ್ಷದ ವಿರುದ್ಧ ದೃಢವಾಗಿ ನಿಲ್ಲಲು ಮೊದಲು ತಮ್ಮೊಳಗಿನ ಆಂತರಿಕ ಭಿನ್ನಮತವನ್ನು ಬಗೆಹರಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರಿಗೂ ಮನವರಿಕೆಯಾದಂತಿದೆ. ಗೆದ್ದುದಕ್ಕಾಗಿ ಮೈಮರೆಯುವ ಸ್ಥಿತಿಯಲ್ಲಂತೂ ಕಾಂಗ್ರೆಸ್ ಇಲ್ಲ. ಆರು ತಿಂಗಳು ಪೂರ್ಣಗೊಳಿಸಿರುವ ಸರ್ಕಾರದ ಮುಂದೆ ಇನ್ನೂ ನಾಲ್ಕೂವರೆ ವರ್ಷಗಳ ಹಾದಿಯಿದೆ. ಮತ್ತು ಆ ಹಾದಿ ಸುಲಭದ್ದಲ್ಲ ಎಂಬ ಎಚ್ಚರವೂ ಕಾಂಗ್ರೆಸ್ ನಾಯಕರಿಗೆ ಇರಬೇಕಿದೆ.

share
ಆರ್. ಜೀವಿ
ಆರ್. ಜೀವಿ
Next Story
X