ಆನಂದ್ ಕುಮಾರ್ ಗೆ ಎಂಬೆಸಿಯಿಂದ ಪ್ರೇಮಪತ್ರ!
ಒಟ್ಟಿನಾಗ ತುರ್ತು ಪರಿಸ್ಥಿತಿ ನೆವದಾಗ, ಅಮೆರಿಕಕ್ಕೆ ಓದಲು ಬಂದಿದ್ದ ಆನಂದ್ ಕುಮಾರ್ ಮ್ಯಾಲೆ ಭಾರತ ಸರಕಾರ ಬಿಟ್ಟ ಬಾಣ, ಬಿಟ್ಟವರಿಗೇ ತಿರುಗೇಟಾಗಿ ಪರಿಣಮಿಸಿತ್ತು. ಎಲ್ಲ ವಲಯಗಳಿಂದಾನೂ ಸಹಾನುಭೂತಿ ಹೆಚ್ಚುತ್ತಿತ್ತು. 1976ರ ಮಾರ್ಚ್ 5ರ, ಇಂಡಿಯನ್ ಓಪೀನಿಯನ್ನಲ್ಲಿ ‘ಎ ಫ್ರೆಶ್ ಲುಕ್ ಆಫ್ ಕಾನ್ಸ್ಟಿಟ್ಯೂಷನ್’ ಅಂತ ಹೇಳಿ ಸಮಗ್ರವಾಗಿ ಒಂದು ಲೇಖನ ಬರೆದು ಹಾಕಿದ್ವಿ. ಸಂವಿಧಾನಕ್ಕೆ ತುರ್ತು ಪರಿಸ್ಥಿತಿ ಸಂದರ್ಭದಾಗ ಆದ ತಿದ್ದುಪಡಿಗಳ ವಿವರಗಳು ಅದರಾಗಿತ್ತು.
ಇದರಿಂದ ತುಂಬಾ ಗಂಭೀರ ದೀರ್ಘಾವಧಿ ಪರಿಣಾಮ ಉಂಟು ಮಾಡಿ ನಮ್ಮ ಸಂವಿಧಾನದ ಸ್ಪಿರಿಟ್ ಅನ್ನೇ ಹಾಳು ಮಾಡುವಂತಹ ಪ್ರಯತ್ನ ಸರಕಾರ ಮಾಡಿದ್ದರ ಬಗ್ಗೆ ಪೂರ್ಣ ವಿವರ ಅದರಲ್ಲಿ ಸೇರಿತ್ತು. ಇದರ ಜೊತೆ ಜೊತೆಗೆ ತುರ್ತು ಪರಿಸ್ಥಿತಿಯ ಕ್ರೌರ್ಯ ಕೂಡ ಹೆಚ್ಚುತ್ತಿತ್ತು. ಭಾರತದಲ್ಲಿ ಆನಂದ್ ಕುಮಾರ್ ಸಹೋದರಿ ಅಂಜನಾ ಪ್ರಕಾಶ್ರನ್ನು ಕೂಡ ಬಂಧಿಸಲಾಗಿತ್ತು. ಎಂ.ಎ. ವಿದ್ಯಾರ್ಥಿನಿ ಅಂಜನಾರಿಗೆ, ಪರೀಕ್ಷೆ ಕಟ್ಟಲು ನ್ಯಾಯಾಲಯದ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ಬಿಡುಗಡೆ ಸಿಕ್ಕಿತು.
ಇದೆಲ್ಲ ಕೂಡ ಅಮೆರಿಕದಲ್ಲಿರುವ ಭಾರತೀಯರಿಗೆ ಭೀತಿ ಉಂಟುಮಾಡಲಿಕ್ಕೆ ಜರುಗಿಸಿದ ಕೃತ್ಯಗಳು ಅನ್ನಬಹುದು. ಭೀತಿ ಉಂಟಾಗಲಿಲ್ಲ ಎಂದು ಹೇಳಲಿಕ್ಕೆ ಬರುವುದಿಲ್ಲ. ಆದರೆ ಛೆ, ಇದೆಲ್ಲಾ ಆಗಬಾರದಿತ್ತು ಅಂತ ಅಮೆರಿಕದ ಎಲ್ಲರ ಹೃದಯದಾಗೂ ಪ್ರತಿಧ್ವನಿಸುವಂತಾಯ್ತಲ್ಲಾ ಅದಾ ಹೆಚ್ಚು ಪರಿಣಾಮಕಾರಿ. ಇದೇ ಕಾಲಮಾನದಾಗೇ ಆಗ ಜನಸಂಘದ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿಯವರ ಅಮೆರಿಕ ಪ್ರವಾಸ! ಇದಕ್ಕೊಂದು ಹಿನ್ನೆಲೆಯಿತ್ತು. ತುರ್ತು ಪರಿಸ್ಥಿತಿ ಪ್ರಾರಂಭವಾದಾಗಿನಿಂದ ಸಂಸದ ಸುಬ್ರಮಣಿಯನ್ ಸ್ವಾಮಿಯವರು ಭಾರತದಾಗೇ ಭೂಗತರಾಗಿದ್ದರು.
ಅವರನ್ನು ಅರೆಸ್ಟ್ ಮಾಡಲಿಕ್ಕೆ ವಾರೆಂಟ್ ಹೊರಡಿಸಲಾಗಿತ್ತು. ಬಂಧನದಿಂದ ತಪ್ಪಿಸಿಕೊಂಡು ಸುಬ್ರಮಣಿಯನ್ ಸ್ವಾಮಿ ಅಮೆರಿಕಕ್ಕೆ ಬಂದುಬಿಟ್ಟಿದ್ದರು! ಶಿಕಾಗೋದಲ್ಲಿ ‘ಇಂಡಿಯನ್ಸ್ ಫಾರ್ ಡೆಮಾಕ್ರಸಿ’ (ಐಎಫ್ಡಿ) ವತಿಯಿಂದ ಅವರ ಮಾತು ಕೇಳಲಿಕ್ಕೆ ನಾವು ಒಂದು ರವಿವಾರ ಸಭೆ ಆಯೋಜಿಸಿದೆವು. ಸುಬ್ರಮಣಿಯನ್ ಸ್ವಾಮಿ ಅವರು ನಮ್ಮ ಮನೆಗೆ ಶನಿವಾರವೇ ಬಂದು ಉಳಿದುಕೊಂಡರು. ಆಗ ನಮ್ಮಿಬ್ಬರ ನಡುವೆ ರೋಚಕ ಮಾತುಕತೆ ಆಯ್ತು.
ಶನಿವಾರ ಮಧ್ಯಾಹ್ನದ ಊಟ ಆದ ನಂತರ, ಅವರು ಮಾರನೆಯ ದಿನ ಸಭೆಯಲ್ಲಿ ಆಡಬೇಕಾದ ವಿಷಯಗಳ ಬಗ್ಗೆ ಮಾತು ಶುರುಮಾಡಿದರು. ‘‘ತುರ್ತು ಪರಿಸ್ಥಿತಿ ಬಗ್ಗೆ ಮಾತಾಡ್ತೇನೆ, ಜೊತೆಗೆ ಜಾರ್ಜ್ ಫೆರ್ನಾಂಡಿಸ್ ಬಗ್ಗೆನೂ ಮಾತಾಡೋನಿದ್ದೇನೆ’’ ಎಂದರು. ನಾನು ಚಕಿತನಾಗಿ ‘‘ಜಾರ್ಜ್ ಫೆರ್ನಾಂಡಿಸ್ ಬಗ್ಗೆ ಏನು ಹೇಳ್ಬೇಕಿದೆ ನಿಮಗೆ?’’ ಎಂದೆ. ‘‘ಜಾರ್ಜ್ಗೆ ತಾನೇ ಹೀರೋ ಎನ್ನುವುದು ಇದೆ... ಹಾಗೇ ಹೀಗೆ’’ ಅಂತ ಅವರ ಬಗ್ಗೆ ಈರ್ಷ್ಯೆಯಿಂದ ಹೇಳಿದರು. ಈ ಅಭಿಪ್ರಾಯ ಬಂದಾಗ ನಾನು ಅವರಿಗೆ ಹೇಳಿದೆ- ‘‘ನೋಡಿ ಸಾರ್, ನೀವು ನನಗಿಂತ ದೊಡ್ಡವರಿದ್ದೀರಿ, ತಿಳಿದವರಿದ್ದೀರಿ, ಈ ಎಮರ್ಜೆನ್ಸಿ ಬಗ್ಗೆ ಮಾತಾಡೋವಾಗ, ಜಾರ್ಜ್ ಫೆರ್ನಾಂಡಿಸ್ ಬಗ್ಗೆ ಹೇಳೋದು ಯಾಕೆ? ಅದಕ್ಕೂ ಇದಕ್ಕೂ ಏನ್ ಸಂಬಂಧ?’’ ಎಂದೆ.
‘‘ಇಲ್ಲ ಆತ ಭಾರೀ ದೊಡ್ಡ ಅಂಡರ್ ಗ್ರೌಂಡ್ ಲೀಡರ್ ಇದ್ದಾನೆ, ಅವನಿಗೆ ದೊಡ್ಡ ಅಹಂ ಇದೆ’’ ಎಂತೆಲ್ಲಾ ಹೇಳಿದರು. ಅದಕ್ಕೆ ನಾನು ‘‘ಇರಲಿ ಬಿಡಿ ಸಾರ್. ಎಲ್ಲರಿಗೂ ಅವರದೇ ಹಕ್ಕಿರ್ತದಾ. ಅವರದೇ ವಿಭಿನ್ನ ಹೋರಾಟದ ರೂಪಗಳಿರ್ತಾವಾ. ಅದನ್ನು ನಾವು ಇಲ್ಲಿ ಅಮೆರಿಕದಾಗೆ ಉಲ್ಲೇಖಮಾಡೋ ಅಗತ್ಯ ಏನು?’’ ಎಂದು ಪ್ರಶ್ನಿಸಿದೆ. ಅದಕ್ಕವರು ‘‘ನೀವೂ ಅವರ ಬೆಂಬಲಿಗರೇ?’’ ಅಂತ ಮರುಪ್ರಶ್ನಿಸಿದರು. ‘‘ನಾನು ಅವರ ಬೆಂಬಲಿಗನೂ ಅಲ್ಲ. ಅವರ ಮುಖ ಕೂಡ ನೋಡಿಲ್ಲ.
ಹಾಗೆ ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗನೂ ಅಲ್ಲ’’ ಎಂದೆ. ಆಮೇಲೆ ಅವರು ‘‘ಆ ಆನಂದ್ ಕುಮಾರ್ ಸೋಶಿಯಲಿಸ್ಟ್ ಇದ್ದಾನೆ’’ ಅಂತಂದರು! ಆನಂದ್ ಸೋಶಿಯಲಿಸ್ಟ್ ಆದರೆ ಇವರಿಗೇನು ಕಷ್ಟ ಅನ್ನಿಸಿತು. ನಾನು ‘‘ನೋಡಿ ಸಾರ್. ನೀವು ಅವರಿವರ ಬಗ್ಗೆ ನಿಮ್ಮ ವೈಯಕ್ತಿಕ ಅಭಿಪ್ರಾಯಕ್ಕಿಂತ, ನೀವು ಅಮೆರಿಕದ ಜನರಿಗೆ ನಾಳೆ ಏನು ಹೇಳಲು ಹೊರಟಿರುವಿರಿ? ಸ್ಪಷ್ಟ ಮಾಡಿಕೊಳ್ಳಿ. ನಾಳೆ ನಡೆಯೋ ಶಿಕಾಗೋ ಸಮ್ಮೇಳನದಲ್ಲಿ ನಿಮ್ಮ ಭಾಷಣಕ್ಕೆ ನಾನು ಅಧ್ಯಕ್ಷ ಇದ್ದೇನೆ.
ನಿಮಗೆ ನೇರವಾಗಿ ಹೇಳಲಿಕ್ಕೆ ಇಷ್ಟಪಡ್ತೇನೆ. ನಾನು ರಾಜಕೀಯ ಪಂಡಿತನೇನೂ ಅಲ್ಲ. ನಮಗೆ ನಮ್ಮ ದೇಶ ಮುಖ್ಯ ಅಷ್ಟೇ. ನಮ್ಮ ದೇಶದಲ್ಲಿ ಈಗ ಏನಾಗುತ್ತಿದೆ ಎನ್ನೋದು ಮುಖ್ಯ. ನಿಮ್ಮ ರಾಜಕೀಯ ಅಭಿಪ್ರಾಯಗಳು ಏನೇ ಇರಲಿ. ಅದನ್ನು ಭಾರತದಲ್ಲೇ ಇಟ್ಟುಕೊಳ್ಳಿ ಸಾರ್. ಭಾರತದಾಗ ಚುನಾವಣೆ ಘೋಷಣೆಯಾದಾಗ ಅವರು ಬೇರೆ ಪಕ್ಷದವರು, ನೀವು ಬೇರೆ ಪಕ್ಷದ ಬೆಂಬಲಿಗರು. ಆದರೆ ಇಲ್ಲಿ, ಅಮೆರಿಕದಲ್ಲಿ ಅದೆಲ್ಲಾ ಬೇಡ. ನಾವು ಇಲ್ಲಿರುವ ಭಾರತೀಯರು, ಈಗ ಭಾರತದಲ್ಲಿ ಇರುವ ತುರ್ತು ಪರಿಸ್ಥಿತಿಯ ವಿರುದ್ಧ ನಾವು ಒಗ್ಗೂಡಿ ಧ್ವನಿ ಎತ್ತಬೇಕು.
ಅದಷ್ಟೇ ಮುಖ್ಯ. ನಾನೂ ಕೂಡ ನನ್ನ ದೇಶ ಎಷ್ಟು ದೊಡ್ಡದು ಅನ್ನೋದು ಅರ್ಥಮಾಡಿಕೊಂಡಿದ್ದು ಹೇಗೆಂದರೆ -ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿ ನಿವೃತ್ತರಾದ ಎಂ.ಸಿ.ಚಾಗ್ಲಾ ಅವರು 1975ರ ಅಕ್ಟೋಬರ್ 12ರಂದು ಅಹಮದಾಬಾದ್ನಲ್ಲಿ ಒಂದು ಭಾಷಣ ಮಾಡಿದ್ದಾರೆ.
ಈ ಭಾಷಣದಲ್ಲಿ ಅವರು ಭಾರತದ ಇತಿಹಾಸ ಕುರಿತು ಬಹಳ ಉತ್ಕೃಷ್ಟವಾದ ಮಾತುಗಳನ್ನಾಡಿದ್ದಾರೆ. ಆ ಭಾಷಣದ ಪಠ್ಯವನ್ನು ಕಿರುಹೊತ್ತಿಗೆ ಮಾಡಿ, ಮುದ್ರಿಸಿ 5,000 ಪ್ರತಿಗಳನ್ನು ನಾವು ಇಲ್ಲಿ ಹಂಚಿದ್ದೇವೆ. ಅವರು ಆ ಭಾಷಣದಲ್ಲಿ ಭಾರತದ ಇತಿಹಾಸವನ್ನು ವಿವರಿಸುತ್ತಾ ‘‘India has survived many a crisis, it will survive Indira and her constitution dictatorship’’ ಅಂತನೂ ಹೇಳ್ತಾರೆ.
ಹಾಗೆಯೇ When night is darkest, dawn is not far off ಅಂದರೆ ‘ರಾತ್ರಿ ಯಾವಾಗ ಕಗ್ಗತ್ತಲು ಆಗಿರುತ್ತದೆ, ಬೆಳಕಾಗುವುದು ಬಹಳ ದೂರ ಇರೋದಿಲ್ಲ’ ಅನ್ನುವ ನುಡಿಗಟ್ಟನ್ನು ಹೇಳುತ್ತಾರೆ’’ ಎಂದು ತಿಳಿಸಿ, ‘‘ನೀವು ಅದನ್ನು ದಯವಿಟ್ಟು ಓದಿ’’, ಎಂದು ಒಂದು ಪ್ರತಿಯನ್ನು ಅವರಿಗೆ ಕೊಟ್ಟೆ. ‘ಇದೆಲ್ಲಾ ಇವನಿಗೆ ಗೊತ್ತಾಗಲ್ಲ’ ಎಂಬ ಅಭಿಪ್ರಾಯ ಸುಬ್ರಮಣಿಯನ್ ಸ್ವಾಮಿಯವರಿಗೆ ನನ್ನ ಬಗ್ಗೆ ಇದ್ದಂತೆ ಇತ್ತು.
ಆಗಲೇ ಸುಬ್ರಮಣಿಯನ್ ಸ್ವಾಮಿಯವರಿಗೆ ಸ್ಟ್ರಾಂಗ್ ಡೋಸ್ ಕೊಡದಿದ್ದರೆ ಈತ ಬಾಯಿಗೆ ಬಂದುದನ್ನು ನಾಳೆ ಸಭೆಯಲ್ಲಿ ಮಾತಾಡಲೂಬಹುದು ಎನ್ನಿಸಿತು. ಆಮೇಲೆ ನಾನು ಖಚಿತ ದನಿಯಲ್ಲಿ ಹೇಳಿದೆ: ‘‘ನೋಡಿ ಸರ್, ನೀವು ಸಂಸತ್ ಸದಸ್ಯರಿದ್ದೀರಿ. ಅದೆಲ್ಲಾ ನನಗೆ ಗೊತ್ತಿದೆ. ಆದರೆ ಎಲ್ಲಕ್ಕಿಂಥ ದೇಶ ಮತ್ತು ಸದ್ಯದ ಸಿದ್ಧಾಂತ ಮೊದಲು ಬರ್ತದೆ. ನೀವೇನಾದರೂ ಅನಗತ್ಯ ಮಾತಾಡಿದರೆ, ಆ ಸಭೆಯ ಅಧ್ಯಕ್ಷನಾಗಿ ನಾನು ನಿಮಗೆ ನಿಮ್ಮ ಭಾಷಣ ನಿಲ್ಲಿಸಲಿಕ್ಕೆ ಹೇಳ್ತೇನೆ. ನಾನು ಸ್ವಲ್ಪ risky fellow . ತುಂಬಾ ಕಠಿಣ. ಹಾಗೂ ನೀವೇನಾದರೂ ನಿಲ್ಲಿಸಲಿಲ್ಲಂದ್ರೆ ನಾನು ನಿಮ್ಮ ಬಳಿಗೆ ಬಂದು ನಿಮ್ಮ ಮೈಕ್ ಕಸಿದುಕೊಳ್ಳುತ್ತೇನೆ’’ ಎಂದೆ! ಅವರು ಅವಕ್ಕಾಗಿ, ‘‘ಏನು ಹಾಗೆಂದರೆ?’’ ಎಂದರು. ಮತ್ತೆ ನಾನು ‘‘ಇದು ನನ್ನ interest ಹಾಗೂ ದೇಶದ ಹಿತಾಸಕ್ತಿ ಕೂಡ. ನಿಮ್ಮಂತಹ ತಿಳಿದ ವ್ಯಕ್ತಿಗೆ ನಾನು ವಿವರಿಸಬೇಕಾಗಿಲ್ಲ’’ ಎಂದು ಮಾತು ಮುಗಿಸಿದೆ.
ಮಾರನೇ ದಿನದ ಸಭೆ, ಒಂದು ದೊಡ್ಡ ಕಮ್ಯೂನಿಟಿ ಸೆಂಟರ್ ಹಾಲ್ನಲ್ಲಿ ನಡೆಯಿತು. ಸಭೆಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಸೇರಿದ್ರು. ಪತ್ರಿಕೆಯವರೂ ಹೆಚ್ಚಾಗಿ ಇದ್ದರು. ಪತ್ರಿಕೆಗಳಲ್ಲಿ ಸುಬ್ರಮಣಿಯನ್ ಸ್ವಾಮಿ ಅವರ ಮಾತು ದೊಡ್ಡ ಸುದ್ದಿಯಾಯ್ತು. ತಮ್ಮ ಭಾಷಣದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಜಾರ್ಜ್ ಬಗ್ಗೆ ತಮ್ಮ ಕಹಿಯನ್ನಾಗಲಿ ಅಥವಾ ಆನಂದ್ ಬಗ್ಗೆ ಅಪಸ್ವರವನ್ನಾಗಲಿ ಎತ್ತಲಿಲ್ಲ! ಅವರು ಮೋಡಿ ಭಾಷಣಕಾರ. ಅವರ ವಾಗ್ಝರಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಪತ್ರಿಕೆಯವರನ್ನೂ ಸೆಳೀತಿತ್ತು.