AIನಿಂದ ಶೇ.80ರಷ್ಟು ಉದ್ಯೋಗ ಕಡಿತ; ಕಳವಳ ವ್ಯಕ್ತಪಡಿಸಿದ AI ಗುರು

Photo Credit : indiatoday.in
AI ನಿಂದ ಶೇ 80ರಷ್ಟು ನಿರುದ್ಯೋಗ ಎದುರಿಸುವ ಸಾಧ್ಯತೆಯಿರುವುದರಿಂದ ಜಾಗತಿಕವಾಗಿ ಪ್ರತಿ ಸರ್ಕಾರವೂ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸಲಿವೆ ಎಂದು ಸ್ಟುವರ್ಟ್ ರಸೆಲ್ ಎಚ್ಚರಿಸಿದ್ದಾರೆ
AI ಗುರು ಎಂದೇ ಹೆಸರಾಗಿರುವ ಸ್ಟುವರ್ಟ್ ರಸೆಲ್ ಉದ್ಯೋಗ ಮಾರುಕಟ್ಟೆಯ ಮೇಲೆ ಕೃತಕ ಬುದ್ಧಿಮತ್ತೆಯ (AI) ಸಂಭಾವ್ಯ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಹುತೇಕ ಟೆಕ್ ಕಂಪೆನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿರುವ ಸಮಯದಲ್ಲಿ AI ಒಂದು ದಿನ CEOಗಳನ್ನೂ ಬದಲಿಸಬಹುದು ಎಂದು ರಸೆಲ್ ಹೇಳಿದ್ದಾರೆ.
►ಸಾವಿರಾರು ಉದ್ಯೋಗ ಕಡಿತ
AI ಅಳವಡಿಸಿಕೊಂಡ ಬಳಿಕ ಅನೇಕ ದೊಡ್ಡ ಟೆಕ್ ಕಂಪೆನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಆದರೆ, ಈ ವಜಾಗೆ ಬದಲಾಗಿ AI ನಲ್ಲಿ ಪರಿಣತಿ ಹೊಂದಿರುವ ಹೊಸ ಕಾರ್ಮಿಕರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಕಂಪೆನಿಗಳು ಹೇಳುತ್ತಿವೆ. ಹಾಗಿದ್ದರೂ AI ಗುರು ಸ್ಟುವರ್ಟ್ ರಸೆಲ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. AI ಬಂದ ನಂತರ ಯಾರ ಉದ್ಯೋಗವೂ ಸುರಕ್ಷಿತವಲ್ಲ ಎಂದು ಅವರು ಹೇಳಿದ್ದಾರೆ.
►CEO ಅಥವಾ ಸರ್ಜನ್ ಕೆಲಸಕ್ಕೂ AI ಸೈ
“AI ವ್ಯವಸ್ಥೆಗಳು ಪ್ರಸ್ತುತ ನಾವು ಕೆಲಸ ಎಂದು ಏನನ್ನು ಕರೆಯುತ್ತೇವೆಯೋ, ಅವೆಲ್ಲವನ್ನೂ ಬದಲಿಸುವ ಸಾಮರ್ಥ್ಯ ಹೊಂದಿವೆ. ಅತಿ ನುರಿತ ಉದ್ಯೋಗಿಗಳ ಅಗತ್ಯವಿರುವ ಕ್ಷೇತ್ರದಲ್ಲೂ AI ಬದಲಾವಣೆ ತರಬಲ್ಲದು. AI ಸರ್ಜನ್ ಆಗಬಹುದು. ಸರ್ಜನ್ ಕೆಲಸವನ್ನು ಏಳು ಸೆಕೆಂಡ್ ಗಳಲ್ಲಿ AI ಕಲಿತುಕೊಳ್ಳಬಹುದು ಮತ್ತು ಮಾನವನಿಗಿಂತ ವೇಗವಾಗಿ ಮತ್ತು ಸುರಕ್ಷಿತವಾಗಿ ಕೆಲಸ ಮುಗಿಸಬಲ್ಲದು” ಎಂದು ಅವರು ಹೇಳಿದ್ದಾರೆ.
CEO ಕೆಲಸವನ್ನೂ AI ಚೆನ್ನಾಗಿ ಮಾಡಬಲ್ಲದು. ಪ್ರತಿಸ್ಪರ್ಧಿಗಳೆಲ್ಲರೂ AI ಚಾಲಿತ CEO ಬಳಸಿ ಅತ್ಯುತ್ತಮವಾಗಿ ನಿರ್ಧಾರ ಕೈಗೊಂಡು ಯಶಸ್ವಿ ಕೆಲಸ ಮಾಡುತ್ತಿರಬೇಕಾದರೆ ಮಾನವ CEO ಬಳಕೆ ಮಾಡುತ್ತೇವೆ ಎಂದು ಯಾರೂ ಹೇಳಲಾರರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“AI ಬಳಕೆಯಿಂದ ಶೇ 80ರಷ್ಟು ಉದ್ಯೋಗ ಕಳೆದುಕೊಳ್ಳುವ ಅಥವಾ ನಿರುದ್ಯೋಗವನ್ನು ಎದುರಿಸುವ ಸಾಧ್ಯತೆಯಿರುವುದರಿಂದ ಜಾಗತಿಕವಾಗಿ ಪ್ರತಿ ಸರ್ಕಾರವೂ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸಲಿವೆ” ಎಂದು ಅವರು ಹೇಳಿದ್ದಾರೆ.
►ಉದ್ಯೋಗ ಬದಲಾಗುವ ಸಾಧ್ಯತೆ
ಸ್ಟುವರ್ಟ್ ರಸೆಲ್ ರಂತೆ ಇತರ ಕೆಲವು ಪ್ರಮುಖರೂ AI ಉದ್ಯೋಗ ಕಸಿದುಕೊಳ್ಳುವ ಬಗ್ಗೆ ಮಾತಾಡಿದ್ದಾರೆ. ಅಮೆರಿಕದ ಉದ್ಯಮಿ ಮತ್ತು ವಕೀಲರು ಆಗಿರುವ ಆಂಡ್ರ್ಯೂ ಯಾಂಗ್ ಮತ್ತು ಆಂಥ್ರೋಪಿಕ್ CEO ಆಗಿರುವ ಡ್ಯಾರಿಯಿ ಅಮೊಡೈ ಪ್ರಕಾರ ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗಗಳು ಕಳೆದು ಹೋಗಲಿವೆ ಅಥವಾ ಬದಲಾಗಲಿವೆ. ಬಹುತೇಕ ತಜ್ಞರು ಉದ್ಯೋಗಗಳು ಕನಿಷ್ಠವಾಗಲಿವೆ ಎನ್ನುವ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.
►ಉದ್ಯೋಗ ಆಯ್ಕೆಯ ವಿಷಯ!
ಆದರೆ ನಿವಿಡಾದ ಜೆನ್ಸನ್ ಹುವಾಂಗ್ ಮತ್ತು ಮೆಟಾದ ಯಾನ್ ಲೆಕ್ಯುನ್ ಅವರು AI ಉದ್ಯೋಗ ಕಸಿದುಕೊಳ್ಳುವ ಬದಲಾಗಿ ಉದ್ಯೋಗದಲ್ಲಿ ಪರಿವರ್ತನೆ ತರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋಟ್ಯಾಧಿಪತಿ ಎಲಾನ್ ಮಸ್ಕ್ ಹೇಳುವ ಪ್ರಕಾರ AI ಭವಿಷ್ಯದಲ್ಲಿ ಜನರಿಗೆ ಕೆಲಸ ಮಾಡುವುದು ಆಯ್ಕೆಯ ವಿಷಯವಾಗಲಿದೆ.







