ಉತ್ತರಾಖಂಡ | ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ವಿವಾಹವಾದ ಬಿಜೆಪಿಯ ಸುರೇಶ್ ರಾಥೋಡ್!
► ಏಕರೂಪ ಸಂಹಿತೆ ಬಿಜೆಪಿ ನಾಯಕರಿಗೆ ಅನ್ವಯವಾಗುವುದಿಲ್ಲವೇ? ► ಯುಸಿಸಿ ಜಾರಿಯಾದ ಮೊದಲ ರಾಜ್ಯ ಉತ್ತರಖಂಡದಲ್ಲಿ ಇದೆಂಥಾ ತಮಾಷೆ

ಹೊಸದಿಲ್ಲಿ: ಉತ್ತರಾಖಂಡ ಯುಸಿಸಿ ಅನ್ವಯವಾಗುವ ಭಾರತದ ಮೊದಲ ರಾಜ್ಯವಾಗಿದೆ. ಅಂದರೆ ಮದುವೆ, ವಿಚ್ಛೇದನ, ಭೂಮಿ, ಆಸ್ತಿಯ ನಿಯಮಗಳನ್ನು ಸಮಾನಗೊಳಿಸಲಾಗಿದೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರಿಗೆ ಧರ್ಮಾತೀತವಾಗಿ ಯುಸಿಸಿ ಅನ್ವಯಿಸುತ್ತದೆ.
ಇದರ ಅನ್ವಯ ಬಹು ಪತ್ನಿತ್ವಕ್ಕೆ ಅವಕಾಶವಿಲ್ಲ. ಮುಸ್ಲಿಮರು ಸಹ ಎರಡಕ್ಕಿಂತ ಹೆಚ್ಚು ಮದುವೆಯಾಗಲು ಸಾಧ್ಯವಿಲ್ಲ. ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆಯಾಗುವುದಕ್ಕೆ ಅಗುವುದಿಲ್ಲ. ಹೀಗಿರುವಾಗ, ಉತ್ತರಾಖಂಡದಲ್ಲಿ ಒಂದು ಪ್ರಕರಣ ನಡೆದಿದ್ದು, ಬಿಜೆಪಿ ನಾಯಕರು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಉತ್ತರಾಖಂಡದ ಬಿಜೆಪಿ ನಾಯಕ ಸುರೇಶ್ ರಾಥೋಡ್ ಅವರು ನಟಿ ಊರ್ಮಿಳಾ ಸನಾವರ್ ಅವರನ್ನು ಎರಡನೇ ವಿವಾಹವಾಗಿದ್ದಾರೆ. ಆದರೆ ಅವರುತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿಲ್ಲ. ಈ ಕಾರಣದಿಂದ ಈ ಮದುವೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಅದು ಅಪರಾಧ ಎಂಬುದು ಸ್ಪಷ್ಟವಾಗಿದೆ. ಯುಸಿಸಿಯನ್ನು ಉಲ್ಲಂಘಿಸಲಾಗಿದೆ.
ಸುರೇಶ್ ರಾಥೋಡ್ ತಮ್ಮದೇ ಪಕ್ಷದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಸವಾಲಾಗಿದ್ದಾರೆ.
ಮದುವೆಯಾಗಿ ಹಲವು ದಿನಗಳು ಕಳೆದಿವೆ.
ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪುಷ್ಕರ್ ಸಿಂಗ್ ಧಾಮಿ ಈಗ ಏನು ಮಾಡುತ್ತಾರೆ?
ಸುರೇಶ್ ರಾಥೋಡ್ ಮತ್ತು ಊರ್ಮಿಳಾ ಅವರ ನಡುವಿನ ಪ್ರೇಮದ ವಿಷಯ ಈಗಾಗಲೇ ಸುದ್ದಿಯಾಗಿರುವ ವಿಷಯ. ಈ ವಿವಾದ 2 ವರ್ಷಗಳಿಂದ ನಡೆಯುತ್ತಿದೆ. ಮೊನ್ನೆ ರವಿವಾರ ಸಹರಾನ್‌ಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಮಾಜಿ ಶಾಸಕ ರಾಥೋಡ್ ತಮ್ಮ ಎರಡನೇ ಪತ್ನಿ ಊರ್ಮಿಳಾ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಾವಿಬ್ಬರೂ ಮದುವೆಯಾಗಿರುವುದಾಗಿಯೂ, ಪರಸ್ಪರ ಪ್ರೀತಿಸುತ್ತಿದ್ದು, ಒಟ್ಟಿಗೆ ಇರುವುದಾಗಿಯೂ ಹೇಳಿದರು.
ಆದರೆ ಇದರ ಹಿಂದಿನ ಕಥೆ ಬೇರೆಯೂ ಇದೆ.
ರಾಥೋಡ್ ನೇಪಾಳಕ್ಕೆ ಕರೆದೊಯ್ದು ಮದುವೆಯಾಗಿ ನಂತರ ತಮ್ಮೊಂದಿಗಿನ ಸಂಬಂಧ ಮುರಿದುಕೊಂಡಿದ್ದಾರೆ
ಎಂದು ಊರ್ಮಿಳಾ ಸನಾವರ್ ಹಲವು ಬಾರಿ ಆರೋಪಿಸಿದ್ದರು. ಊರ್ಮಿಳಾ ಸನಾವರ್ ಈ ಬಿಜೆಪಿ ನಾಯಕನೊಂದಿಗಿನ ಕೆಲ ಫೋಟೊಗಳನ್ನು ಸಹ ಬಿಡುಗಡೆ ಮಾಡಿದ್ದರು. ಅದರ ನಂತರ ಇದು ಹೆಚ್ಚು ಗದ್ದಲಕ್ಕೆ ಕಾರಣವಾಗಿತ್ತು.
ಹಣ ಕೇಳುತ್ತಿದ್ದಾರೆ, ಸುಲಿಗೆ ಮಾಡುತ್ತಿದ್ದಾರೆ ಎಂದು ಊರ್ಮಿಳಾ ವಿರುದ್ಧ ರಾಥೋಡ್ ಪ್ರಕರಣ ದಾಖಲಿಸಿದ್ದರು.
ಊರ್ಮಿಳಾ ಅವರು, ಬಿಜೆಪಿ ನಾಯಕ ನಾನು ಮಂಗಳಸೂತ್ರ ಧರಿಸುವಂತೆ ಮಾಡಿ, ಸಿಂಧೂರ ಹಚ್ಚಿ,
ಈಗ ನನ್ನನ್ನು ದೂರವಿಡುತ್ತಿರುವುದಾಗಿಯೂ ವೀಡಿಯೊ ಬಿಡುಗಡೆ ಮಾಡಿದ್ದರು. ಈ ಇಡೀ ನಾಟಕ ಕಳೆದ ಎರಡು ವರ್ಷಗಳಿಂದ ನಡೆಯುತ್ತಿತ್ತು.
ಈಗ ಪತ್ರಿಕಾಗೋಷ್ಠಿ ನಡೆಸಿ, ತಾವಿಬ್ಬರೂ ಮದುವೆಯಾಗಿರುವುದಾಗಿ ಈ ವಿಷಯ ಮುಗಿಸಿದ್ದಾರೆ. ಕಳೆದ ವಾರದವರೆಗೂ ರಾಥೋಡ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡಿರದ ಊರ್ಮಿಳಾ ಸನಾವರ್, ಈಗ ರಾಥೋಡ್ ಅವರೊಂದಿಗಿನ ತಮ್ಮ ಸಂಬಂಧವನ್ನು ಘೋಷಿಸಿದ್ದಾರೆ. ಬಿಜೆಪಿ ನಾಯಕ ರಾಥೋಡ್ ತಮ್ಮ ಮೊದಲ ಪತ್ನಿ ಮತ್ತು ಕುಟುಂಬದ ಮನವೊಲಿಸಿದ್ದಾಗಿ ಹೇಳಿದ್ಧಾರೆ.
ಇಬ್ಬರೂ ಬಹಿರಂಗವಾಗಿಯೇ ಜಗಳವಾಡಿ, ಗಲಾಟೆ ಮಾಡಿದ ನಂತರ ಈಗ ಪರಸ್ಪರ ಒಪ್ಪಿಕೊಂಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ಈಗ ಈ ಇಡೀ ವಿಷಯದ ಬಗ್ಗೆ ಹಲವು ಪ್ರಶ್ನೆಗಳಿವೆ.
ಏಕೆಂದರೆ ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಮೊದಲ ರಾಜ್ಯ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಮೂಲಕ ಬದಲಾವಣೆ ತರಲು ಸಿಎಂ ಪುಷ್ಕರ್ ಸಿಂಗ್ ಧಾಮಿ ಪ್ರಯತ್ನಿಸಿದ್ದರು. ಆದರೆ ಅವರಿಗೆ ಬಿಜೆಪಿ ಮಾಜಿ ಶಾಸಕ ಸುರೇಶ್ ರಾಥೋಡ್ ಅವರಿಗೆ ಸವಾಲಾಗಿದ್ದಾರೆ. ಮೊದಲ ಪತ್ನಿ ಇರುವಾಗಲೇ, ವಿಚ್ಛೇದನ ನೀಡದೆ ಅವರು ಎರಡನೇ ವಿವಾಹವಾಗಿದ್ದಾರೆ. ಯುಸಿಸಿಯಲ್ಲಿ ಇದನ್ನು ನಿಷೇಧಿಸಲಾಗಿದೆ.
ಹಾಗಿರುವಾಗ, ಸಾರ್ವಜನಿಕರಿಗೆ ಒಂದು ಮತ್ತು ಬಿಜೆಪಿ ನಾಯಕರಿಗೆ ಇನ್ನೊಂದು ಯುಸಿಸಿ ಇದೆಯೇ? ಬಿಜೆಪಿ ನಾಯಕರು ತಮ್ಮ ಸರ್ಕಾರ ಮಾಡಿದ ಕಾನೂನನ್ನು ಉಲ್ಲಂಘಿಸಿದಾಗ, ವಿರೋಧ ಪಕ್ಷಗಳಿಂದ ಏನನ್ನಾದರೂ ಏಕೆ ನಿರೀಕ್ಷಿಸಬೇಕು?
ಯುಸಿಸಿ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಸಾಧ್ಯವಿಲ್ಲ. ಮೊದಲ ಹೆಂಡತಿ ಅಥವಾ ಪತಿ ಜೀವಂತವಾಗಿದ್ದರೆ ಮತ್ತು ವಿಚ್ಛೇದನ ಪಡೆಯದಿದ್ದರೆ, ಎರಡನೇ ಮದುವೆಯಾಗುವುದು ಕಾನೂನುಬಾಹಿರವಾಗಿರುತ್ತದೆ. ವ್ಯಕ್ತಿ ಯಾವ ಧರ್ಮಕ್ಕೆ ಸೇರಿದ್ದರೂ ಇದೇ ನಿಬಂಧನೆ ಅನ್ವಯವಾಗುತ್ತದೆ.
ಇದರಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ.
ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರದ ನಿಯಮಗಳು ಎಲ್ಲಾ ಧರ್ಮದವರಿಗೂ ಒಂದೇ ಆಗಿರುತ್ತವೆ. ಯಾರಾದರೂ ಮದುವೆಯಾಗಿ ಎರಡನೇ ಮದುವೆಯಾದರೆ, ಅವರು ಐಪಿಸಿ ಸೆಕ್ಷನ್ 494 ರ ಅಡಿಯಲ್ಲಿ ತಪ್ಪಿತಸ್ಥರಾಗಬಹುದು. ಇದರಲ್ಲಿ ಜೈಲು ಅಥವಾ ದಂಡ ಎರಡನ್ನೂ ವಿಧಿಸಬಹುದು.
ಮದುವೆಯ ನೋಂದಣಿ ಕೂಡ ಬಹಳ ಮುಖ್ಯವಾಗಿದೆ. ನೋಂದಣಿ ಕಡ್ಡಾಯವಾಗಿದೆ. ನೋಂದಣಿ ಮಾಡದಿದ್ದರೆ ಮದುವೆ ಮಾನ್ಯವಾಗುವುದಿಲ್ಲ. ಎಲ್ಲಾ ನಾಗರಿಕರಿಗೆ ದತ್ತು ಸ್ವೀಕಾರಕ್ಕೆ ಸಮಾನ ಹಕ್ಕಿದೆ. ವಿಚ್ಛೇದನ ಮತ್ತು ಜೀವನಾಂಶಕ್ಕೂ ಒಂದೇ ನಿಯಮಗಳಿವೆ.
ಈಗ ಮೊದಲ ಪ್ರಶ್ನೆ ಎಂದರೆ, ಬಿಜೆಪಿ ನಾಯಕ ತನ್ನ ಮದುವೆ ನೋಂದಾಯಿಸಿದ್ದಾರೆಯೇ? ಇಲ್ಲವೆಂದಾದರೆ, ಮದುವೆ ಕಾನೂನುಬಾಹಿರ. ಅವರು ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆಯೇ ಎಂಬುದು ಕೂಡ ದೊಡ್ಡ ಪ್ರಶ್ನೆ. ಅವರು ದೂರು ನೀಡಿಲ್ಲದಿದ್ದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಏಕೆ?
ಮೊದಲ ಪತ್ನಿ ಪೊಲೀಸರಿಗೆ ದೂರು ನೀಡಬಹುದಾದರೂ, ಸ್ವತಃ ರಿಜಿಸ್ಟ್ರಾರ್, ಅಂದರೆ ಸರ್ಕಾರಿ ಆಡಳಿತ ಕೂಡ ದೂರು ನೀಡಬಹುದು. ಈಗ ಈ ವಿಷಯ ಬಹಿರಂಗವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾದರೆ, ಬಿಜೆಪಿ ಸರ್ಕಾರ ತನ್ನ ಕಾನೂನನ್ನು ತನ್ನದೇ ನಾಯಕ ಉಲ್ಲಂಘಿಸಿದ್ದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತದೆ ಮತ್ತು ಯಾವಾಗ?
ಹಾಗೇ, ಬಹುಪತ್ನಿತ್ವದಿಂದಾಗಿ ಮಹಿಳೆಯರಿಗೆ ಭಾರೀ ಅನ್ಯಾಯವಾಗುತ್ತಿದೆ. ಅದಕ್ಕಾಗಿಯೇ ಬಿಜೆಪಿ ಸರಕಾರ ಸಮಾನ ನಾಗರೀಕ ಸಂಹಿತೆ ತರುತ್ತಿದೆ. ಮಹಿಳೆಯರ ಮೇಲಾಗುತ್ತಿರುವ ಶೋಷಣೆ ನಿಲ್ಲಿಸುವುದೇ ಬಿಜೆಪಿ ಉದ್ದೇಶ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರಮಣಕಾರಿಯಾಗಿ ಪ್ರಚಾರ ಮಾಡುವ
ಬಿಜೆಪಿ ಬೆಂಬಲಿಗರು, ಆರೆಸ್ಸೆಸ್ಸಿಗರೂ ಎಲ್ಲೂ ಏನೂ ಮಾತಾಡುತ್ತಲೇ ಇಲ್ಲ ಯಾಕೆ ?
ಅನ್ಯಾಯ ಮುಸ್ಲಿಂ ಮಹಿಳೆಯರಿಗಾದರೆ ಮಾತ್ರನಾ ಬಿಜೆಪಿ, ಆರೆಸ್ಸೆಸ್ ಗೆ ನೋವಾಗೋದು? ಬಿಜೆಪಿ ಮುಖಂಡನೇ ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾದರೆ ಆ ಮೊದಲ ಪತ್ನಿಗೆ, ಆ ಹಿಂದೂ ಮಹಿಳೆಗೆ ಅನ್ಯಾಯ ಆಗಲ್ವಾ ? ಇದು ಹಿಪಾಕ್ರಸಿ ಅಲ್ವಾ ?