ಛತ್ತೀಸ್‌ಗಢದಲ್ಲಿ ಕೇರಳದ ಇಬ್ಬರು ಸನ್ಯಾಸಿನಿಯರ ಬಂಧನ: ಕಾರಣವೇನು ?
►ಪ್ರಧಾನಿ ತಕ್ಷಣ ಮಧ್ಯಪ್ರವೇಶಿಸಲು ಪತ್ರ ಬರೆದ ಪಿಣರಾಯಿ ವಿಜಯನ್ ► ರಾಹುಲ್ ಗಾಂಧಿ ಸೇರಿ ವಿಪಕ್ಷ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆ

ಛತ್ತೀಸ್ ಗಢದಲ್ಲಿ ಇಬ್ಬರು ಮಲಯಾಳಿ ಸನ್ಯಾಸಿನಿಯರನ್ನು ಬಂಧಿಸಲಾಗಿದ್ದು, ಇದಕ್ಕೆ ಕೇರಳದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಬಂಧನವನ್ನು ಖಂಡಿಸಿದ್ದಾರೆ. ಈ ಕುರಿತಂತೆ ಪ್ರತಿಭಟನೆಗಳು ನಡೆದಿವೆ. ಮುಖ್ಯಮಂತ್ರಿ ಪಿಣರಾಜಿ ವಿಜಯನ್, ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದು ಸಂಘ ಪರಿವಾರದ ಬೂಟಾಟಿಕೆಗಳ ಭಾಗವಾಗಿದೆ ಎಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಹೇಳಿದ್ದಾರೆ.
ಛತ್ತೀಸ್ ಗಢದಲ್ಲಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ ಆಫ್ ಅಸ್ಸಿಸಿಯ ಸದಸ್ಯರಾದ ತಲಶ್ಶೇರಿಯ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಅಂಗಮಾಲಿಯ ಸಿಸ್ಟರ್ ಪ್ರೀತಿ ಮೇರಿ ಎಂಬ ಇಬ್ಬರು ಮಲಯಾಳಿ ಸನ್ಯಾಸಿನಿಯರನ್ನು ಬಂಧಿಸಲಾಗಿದೆ. ಈ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರನ್ನು, ನಾರಾಯಣಪುರ ಜಿಲ್ಲೆಯ 18 ರಿಂದ 19 ವರ್ಷದೊಳಗಿನ ಮೂವರು ಮಹಿಳೆಯರು, ಒಬ್ಬ ಯುವಕನೊಂದಿಗೆ ಹೋಗುತ್ತಿದ್ದಾಗ ಬಂಧಿಸಲಾಗಿದೆ. ಅವರ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ಛತ್ತೀಸ್ ಗಢ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 1968 ರ ಅಡಿಯಲ್ಲಿ ಮಾನವ ಕಳ್ಳಸಾಗಣೆ ಮತ್ತು ಧಾರ್ಮಿಕ ಮತಾಂತರದ ಆರೋಪ ಹೊರಿಸಲಾಗಿದೆ.
ಈ ಸನ್ಯಾಸಿನಿಯರು ಮೂಲತಃ ಕೇರಳದವರು. ರಾಯ್ ಪುರ ಆರ್ಚ್‌ಡಯೋಸಿಸ್ ನ ವಿಕಾರ್ ಜನರಲ್ ಫಾದರ್ ಸೆಬಾಸ್ಟಿಯನ್ ಪೂಮಟ್ಟಮ್ ಅವರ ಪ್ರಕಾರ, ಸನ್ಯಾಸಿನಿಯರು ಮಹಿಳೆಯರನ್ನು ಆಗ್ರಾದ ಕಾನ್ವೆಂಟ್ ಗಳಲ್ಲಿ ಮನೆಕೆಲಸಕ್ಕಾಗಿ ಕರೆದೊಯ್ಯುತ್ತಿದ್ದರು. ಅವರ ಪೋಷಕರಿಂದ ಒಪ್ಪಿಗೆ ಪತ್ರಗಳು ಇದ್ದು, ಎಲ್ಲರೂ 18 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಅವರು ಹೇಳಿರುವುದು ವರದಿಯಾಗಿದೆ.
ಒಬ್ಬ ವ್ಯಕ್ತಿಯೊಂದಿಗೆ ಸನ್ಯಾಸಿನಿಯರು ಕಾಯುತ್ತಿದ್ದ ರೈಲ್ವೆ ಪ್ಲಾಟ್ ಫಾರ್ಮ್ ಗೆ ಹುಡುಗಿಯರು ಬಂದಾಗ, ರೈಲ್ವೆ ಟಿಕೆಟ್ ಪರೀಕ್ಷಕರು ಅವರ ಟಿಕೆಟ್ ಗಳ ಬಗ್ಗೆ ಕೇಳಿದರು. ಸನ್ಯಾಸಿನಿಯರ ಬಳಿ ಟಿಕೆಟ್ ಗಳಿವೆ ಎಂದು ಹುಡುಗಿಯರು ಹೇಳಿದರು. ಸ್ವಲ್ಪ ಸಮಯದ ನಂತರ, ಟಿಕೆಟ್ ಪರೀಕ್ಷಕರು ಸ್ಥಳೀಯ ಬಜರಂಗದಳ ಸದಸ್ಯರಿಗೆ ಮಾಹಿತಿ ನೀಡಿದಾಗ, ಅವರು ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದರು ಎನ್ನಲಾಗಿದೆ. ರೈಲ್ವೆ ಪೊಲೀಸರು ಸನ್ಯಾಸಿನಿಯರು, ಆ ವ್ಯಕ್ತಿ ಮತ್ತು ಮೂವರು ಮಹಿಳೆಯರನ್ನು ಬಂಧಿಸಿದರು. ಬಜರಂಗದಳ ಸದಸ್ಯರು ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ, ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದರು. ನಂತರ ಮಹಿಳೆಯರನ್ನು ಸರ್ಕಾರ ನಡೆಸುವ ಆಶ್ರಯ ಗೃಹಕ್ಕೆ ಸ್ಥಳಾಂತರಿಸಲಾಯಿತು. ಸನ್ಯಾಸಿನಿಯರು ಮತ್ತು ಆ ವ್ಯಕ್ತಿಯನ್ನು ಆಗಸ್ಟ್ 8 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ದೆಹಲಿಯ ಸನ್ಯಾಸಿನಿ ಸಿಸ್ಟರ್ ಆಶಾ ಪಾಲ್, ಬಂಧಿತ ಸನ್ಯಾಸಿನಿಯರನ್ನು ಭೇಟಿ ಮಾಡಲು ಯಾವುದೇ ಚರ್ಚ್ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ. ಯುವತಿಯರನ್ನು ಅವರ ಹೇಳಿಕೆಗಳನ್ನು ಬದಲಾಯಿಸುವಂತೆ ಒತ್ತಾಯಿಸಲಾಗಿದೆ. ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕರೆದೊಯ್ಯಲಾಗುತ್ತಿದೆ ಎಂದು ಹೇಳುವಂತೆ ಅವರನ್ನು ಒತ್ತಾಯಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಯಾವುದೇ ಬಲವಂತ ಅಥವಾ ಮತಾಂತರ ನಡೆದಿಲ್ಲ ಎಂದು ಸಾಬೀತುಪಡಿಸುವ ಎಲ್ಲಾ ಪುರಾವೆಗಳು ನಮ್ಮಲ್ಲಿವೆ ಎಂದು ಸಿಸ್ಟರ್ ಆಶಾ ಪಾಲ್ ಹೇಳಿದ್ದಾರೆ.
ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಈ ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಬಲಪಂಥೀಯ ಗುಂಪುಗಳಿಂದ ಹೆಚ್ಚುತ್ತಿರುವ ಕಿರುಕುಳ ಮತ್ತು ಸುಳ್ಳು ಆರೋಪಗಳ ಮತ್ತೊಂದು ಘಟನೆಯಾಗಿದೆ ಎಂದು ಆರೋಪಿಸಿದ್ದಾರೆ. ಗುಂಪು ಹಿಂಸಾಚಾರ, ಪೊಲೀಸ್ ಪ್ರಕರಣಗಳು ಮತ್ತು ಚರ್ಚ್ ನಡೆಸುವ ಸಂಸ್ಥೆಗಳ ಮೇಲಿನ ದಾಳಿಗಳು ಆಗಾಗ ನಡೆಯುತ್ತಿವೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಮೌನವಾಗಿರುವುದರಿಂದ ಆ ರೀತಿಯ ಘಟನೆಗಳು ಇನ್ನೂ ಹೆಚ್ಚಲು ಕಾರಣವಾಗಿದೆ ಎಂದು ಅಲ್ಲಿನ ಪಾದ್ರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಈ ಘಟನೆ ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತ ಕಿರುಕುಳದ ಅಪಾಯಕಾರಿ ನಿದರ್ಶನ ಎಂದು ಹೇಳಿದ್ದಾರೆ. ಮಾನವ ಕಳ್ಳಸಾಗಣೆ ಆರೋಪದ ಮೇಲೆ ಸನ್ಯಾಸಿನಿಯರನ್ನು ಬಂಧಿಸಿದ ನಂತರ ಕೇರಳದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಇಬ್ಬರು ಸನ್ಯಾಸಿನಿಯರ ಬಿಡುಗಡೆಗೆ ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಅವರು ಪರಿಸ್ಥಿತಿಯ ಗಂಭೀರತೆ ಮತ್ತು ಕೇರಳದಲ್ಲಿ ಉಂಟಾದ ಉದ್ವಿಗ್ನತೆ ಬಗ್ಗೆ ಒತ್ತಿ ಹೇಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕೇಂದ್ರ ಸರ್ಕಾರದ ಗೃಹ ಸಚಿವ ಮತ್ತು ಛತ್ತೀಸ್ ಗಢ ಮುಖ್ಯಮಂತ್ರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.
ಸ್ವಯಂ ಘೋಷಿತ ರಕ್ಷಕರು ಕೋಮು ಉದ್ವಿಗ್ನತೆಗೆ ಕಾರಣರಾಗುವುದು, ಯಾವುದೇ ಕಾನೂನು ಆಧಾರವಿಲ್ಲದೆ ಮತಾಂತರ ಮತ್ತು ಕಳ್ಳಸಾಗಣೆ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುವುದು ತೀವ್ರ ಕಳವಳಕಾರಿ. ಸ್ಪಷ್ಟ ದಾಖಲೆಗಳು ಮತ್ತು ಪೋಷಕರ ಒಪ್ಪಿಗೆಯ ಹೊರತಾಗಿಯೂ, ಅಧಿಕಾರಿಗಳು ಸನ್ಯಾಸಿನಿಯರು ಮತ್ತು ಆ ವ್ಯಕ್ತಿಯನ್ನು ಬಂಧಸಿದ್ದಾರೆ. ಇದು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಅವರ ಪತ್ರದಲ್ಲಿ ಹೇಳಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ರಾಜ್ಯಾಧ್ಯಕ್ಷ ಸಾದಿಕ್ ಅಲಿ ಶಿಹಾಬ್ ತಂಙಳ್ ಬಂಧನವನ್ನು ಖಂಡಿಸಿದ್ದಾರೆ. ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಗಂಭೀರ ದಾಳಿ ಮತ್ತು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದ್ದಾರೆ. ಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ ಮತ್ತು ಸಂಸದ ಜೋಸ್ ಕೆ ಮಣಿ ಕೂಡ ಪ್ರಧಾನಿಗೆ ಪತ್ರ ಬರೆದು, ಕೇಂದ್ರ ಸರ್ಕಾರ ಅವರ ಬಿಡುಗಡೆಗೆ ಕಾನೂನು ಬೆಂಬಲ ನೀಡಬೇಕೆಂದು ಕೋರಿದ್ದಾರೆ.
ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ (ಸಿಬಿಸಿಐ) ಕೂಡ ಬಂಧನವನ್ನು ಖಂಡಿಸಿದೆ. ಆರೋಪಗಳನ್ನು ಕಟ್ಟುಕಥೆ ಎಂದು ಅದು ಹೇಳಿದೆ. ಬಲಪಂಥೀಯ ಗುಂಪುಗಳು ಈ ಘಟನೆಯನ್ನು ಸೃಷ್ಟಿಸಿವೆ ಎಂದು ಅದು ಆರೋಪಿಸಿದೆ. ಹೆಚ್ಚುತ್ತಿರುವ ದಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅದು ಒತ್ತಾಯಿಸಿದೆ.
ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಈ ಘಟನೆಯನ್ನು ಟೀಕಿಸಿದ್ದಾರೆ. ಇದು ಸಂಘ ಪರಿವಾರದ ಬೂಟಾಟಿಕೆ ಎಂದು ಅವರು ಆರೋಪಿಸಿದ್ದಾರೆ. ಕೇರಳ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಈ ಬಂಧನ ಅನಾಗರಿಕ ಮತ್ತು ಕಾನೂನುಬಾಹಿರ ಎಂದಿದ್ದಾರೆ. ಕೇರಳದ ಸಂಸದರು ಸಂಸತ್ತಿನಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಲು ಮುಂದಾಗಿದ್ದಾರೆ. ಬೆನ್ನಿ ಬೆಹನನ್, ಹೈಬಿ ಈಡನ್ ಮತ್ತು ಆಂಟೊ ಆಂಟನಿ ಅವರು ಲೋಕಸಭೆಯಲ್ಲಿ ನಿಲುವಳಿ ಸೂಚನೆಗೆ ನೋಟಿಸ್ ನೀಡಿದ್ದಾರೆ.
ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (UCF) ಮಾಹಿತಿ ಪ್ರಕಾರ, ಕ್ರಿಶ್ಚಿಯನ್ನರನ್ನು ಗುರಿಯಾಗಿಸಿ ನಡೆಯುವ ಘಟನೆಗಳು ಹೆಚ್ಚುತ್ತಲೇ ಇವೆ. 2014 ರಲ್ಲಿ ಅಂಥ 127 ಪ್ರಕರಣಗಳು ವರದಿಯಾಗಿದ್ದವು. 2024 ರಲ್ಲಿ 834 ಕ್ಕೆ ಏರಿದೆ. ಇದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ವ್ಯವಸ್ಥಿತ ಮತ್ತು ಹೆಚ್ಚುತ್ತಿರುವ ಅಪಾಯ ಎಂದು ಅನೇಕರು ಅಭಿಪ್ರಾಯಪಡುತ್ತಾರೆ.







