“ಆತನ ಭುಜದಲ್ಲಿ 90 ಗುಂಡುಗಳಿದ್ದವು”
ಮಣಿಪುರ ಶಾಲಾ ವಿದ್ಯಾರ್ಥಿಗಳಿಗೆ ಗುಂಡು ಹೊಡೆದ ಕೇಂದ್ರ ಭದ್ರತಾ ಪಡೆಗಳ ವಿರುದ್ಧ ಆರೋಪ

Photocredit : newslaundry.com
ಇಂಫಾಲ: ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಅವರು ಜಲಫಿರಂಗಿಗಳನ್ನು ಬಳಸಬಹುದಿತ್ತು ಅಥವಾ ಲಾಠಿ ಚಾರ್ಜ್ ಮಾಡಬಹುದಿತ್ತು. ಆದರೆ, ಅವರೇಕೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲು ಗುಂಡಿನ ಗನ್ ಗಳನ್ನು ಬಳಸಬೇಕಿತ್ತು? ದಿಲ್ಲಿ, ಮುಂಬೈ ಅಥವಾ ಭಾರತದ ಇನ್ನಿತರ ಮುಖ್ಯ ಭೂಮಿಕೆಯಲ್ಲಿನ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಅವರೇನಾದರೂ ಗುಂಡಿನ ಗನ್ ಗಳನ್ನು ಬಳಸಿದ್ದರಾ? ಇಲ್ಲವಾದರೆ ಮಣಿಪುರದಲ್ಲೇಕೆ?”
ಅಕ್ಟೋಬರ್ 1ರಂದು Newslaundry ಸುದ್ದಿ ಸಂಸ್ಥೆಯೊಂದಿಗೆ ಹೀಗೆ ಮಾತನಾಡುತ್ತಿದ್ದ ಸೋಮೊಕಾಂತ ಲೊಯಿತಾಂಗ್ಬಾಮ್ ಧ್ವನಿಯಲ್ಲಿ ಸಿಟ್ಟು ಮತ್ತು ದುಃಖದಿಂದ ತುಂಬಿ ತುಳುಕುತ್ತಿತ್ತು. ಮೂರು ದಿನಗಳ ಹಿಂದೆ ಅವರ ಪುತ್ರ ಹಾಗೂ 17 ವರ್ಷದ ಕಿಶನ್ ಮೇಲೆ ತೀರಾ ಹತ್ತಿರದಿಂದ ಗುಂಡಿನ ಗನ್ ನಿಂದ ದಾಳಿ ನಡೆಸಲಾಗಿತ್ತು. ಇದರಿಂದ ಕಿಶನ್ ನ ಬಲ ಭುಜವು ಛಿದ್ರಗೊಂಡಿದೆ.
“ಈ ವಿದ್ಯಾರ್ಥಿಗಳೇನಾದರೂ ದೇಶದ ಇತರ ಭಾಗದ ವಿದ್ಯಾರ್ಥಿಗಳಿಗಿಂತ ಭಿನ್ನರೆ? ಅವರೂ ಭಾರತೀಯರಲ್ಲವೆ?” ಎಂದು ಸೋಮೊಕಾಂತ ಸಿಟ್ಟಿನಿಂದ ಪ್ರಶ್ನಿಸುತ್ತಿದ್ದರು.
ಜುಲೈ 6ರಂದು ಮಣಿಪುರದಲ್ಲಿ ಕಾಣೆಯಾಗಿದ್ದ 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಮೃತ್ಯುವಿನ ವಿರುದ್ಧ ಪ್ರತಿಭಟಿಸುತ್ತಿದ್ದ ಶಾಲಾ ವಿದ್ಯಾರ್ಥಿಗಳ ಗುಂಪಿನಲ್ಲಿ ಕಿಶನ್ ಕೂಡಾ ಭಾಗವಹಿಸಿದ್ದ. ಕಾಣೆಯಾಗಿದ್ದ ವಿದ್ಯಾರ್ಥಿಗಳ ಮೃತ ದೇಹಗಳ ಭಾವಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿ, ಅವರಿಬ್ಬರನ್ನು ಅಪಹರಿಸಿ, ಹತ್ಯೆಗೈಯ್ಯಲಾಗಿದೆ ಎಂಬ ವರದಿಗಳನ್ನೂ ಆ ಪೋಸ್ಟ್ ನೊಂದಿಗೆ ಲಗತ್ತಿಸಲಾಗಿತ್ತು.
ಮುಖ್ಯಮಂತ್ರಿ ಬಿರೇನ್ ಎನ್. ಸಿಂಗ್ ಕೂಡಲೇ ಈ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 26 ಹಾಗೂ 27ರಂದು ವಿದ್ಯಾರ್ಥಿಗಳು ಕ್ಷಿಪ್ರ ಪ್ರತಿಭಟನೆಯನ್ನು ಆಯೋಜಿಸಿದ್ದರು. ಶಾಲಾ ಸಮವಸ್ತ್ರ ಧರಿಸಿ, ಮುಖ್ಯಮಂತ್ರಿ ಬಿರೇನ್ ಎನ್. ಸಿಂಗ್ ನಿವಾಸದತ್ತ ಮೆರವಣಿಗೆ ಹೊರಟಿದ್ದ ಬಹುತೇಕ ವಿದ್ಯಾರ್ಥಿಗಳನ್ನು ಪೊಲೀಸರು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ದಾರಿ ಮಧ್ಯದಲ್ಲಿ ತಡೆದಿದ್ದರು. ವಿದ್ಯಾರ್ಥಿಗಳ ಪ್ರಕಾರ, ಅವರನ್ನು ಚದುರಿಸಲು ಭದ್ರತಾ ಪಡೆಗಳು ರಬ್ಬರ್ ಗುಂಡುಗಳು, ಹುಸಿ ಬಾಂಬ್ ಗಳು, ಅಶ್ರುವಾಯು ಹಾಗೂ ಗುಂಡಿನ ಗನ್ ಗಳನ್ನು ಬಳಸಿದರು ಎಂದು ಆರೋಪಿಸಿದ್ದಾರೆ.
ಈ ದಾಳಿಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕಿಶನ್ ಒಳಗೊಂಡಂತೆ ಎಂಟು ಮಂದಿ ವಿದ್ಯಾರ್ಥಿಗಳು ಗುಂಡಿನ ಗನ್ ದಾಳಿಯಿಂದ ಗಾಯಗೊಂಡಿದ್ದಾರೆ. ಆ ಎಲ್ಲ ಎಂಟು ವಿದ್ಯಾರ್ಥಿಗಳು ಅಪ್ರಾಪ್ತರಾಗಿದ್ದಾರೆ.
ಕಿಶನ್ ಇಂಫಾಲದ ಯೈರಿಪೋಕ್ ನ ತಂಬಲ್ನು ಪ್ರೌಢ ಶಾಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ತಜ್ಞ ಭದ್ರತಾ ಪಡೆಯಾದ ಕ್ಷಿಪ್ರ ಕಾರ್ಯಪಡೆಯ ಸದಸ್ಯನೊಬ್ಬ ತನ್ನ ಪುತ್ರನ ಮೇಲೆ ಗುಂಡಿನ ಗನ್ ನಿಂದ ದಾಳಿ ನಡೆಸಿದ್ದಾನೆ ಎಂದು ಆತನ ತಂದೆಯು ಆರೋಪಿಸಿದ್ದಾರೆ.
“ನನ್ನ ಪುತ್ರನು ಇಂಫಾಲ ಪಶ್ಚಿಮದ ಮೊಯಿರಾಂಗ್ ಖೋಮ್ ಪ್ರದೇಶದಲ್ಲಿ ಇನ್ನಿತರ ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸುತ್ತಿದ್ದ. ಆತ ಪ್ರತಿಭಟನೆಯಲ್ಲಿ ಭಾಗವಹಿಸಲು ಮಧ್ಯಾಹ್ನ ತೆರಳಿದ್ದ ಹಾಗೂ ಈ ಘಟನೆಯು ಸುಮಾರು 2.30ರ ವೇಳೆಗೆ ನಡೆದಿದೆ” ಎಂದು ಸೋಮೊಕಾಂತ ತಿಳಿಸಿದ್ದಾರೆ. “ವಿದ್ಯಾರ್ಥಿಗಳನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಹಾಗೂ ಹುಸಿ ಬಾಂಬ್ ಗಳೊಂದಿಗೆ ದಾಳಿ ನಡೆಸಿವೆ. ಆಗ ಹಲವಾರು ವಿದ್ಯಾರ್ಥಿಗಳು ಪ್ರತಿಭಟನಾ ಸ್ಥಳದಿಂದ ಪರಾರಿಯಾಗಿ ಅವಿತುಕೊಂಡಿದ್ದಾರೆ. ನನ್ನ ಪುತ್ರ ಕೂಡಾ ಮನೆಯೊಂದರಲ್ಲಿ ಅವಿತುಕೊಂಡಿದ್ದ. ಅಶ್ರುವಾಯು ದಾಳಿಯ ಶಬ್ದ ಕೇಳುವುದು ನಿಂತ ನಂತರ, ಹೊರಗೆ ಬಂದಿರುವ ಅವರೆಲ್ಲ ಮನೆಗೆ ಮರಳುವ ಯೋಜನೆಯಲ್ಲಿದ್ದರು. ನನ್ನ ಪುತ್ರನು ಹೊರಗೆ ರಸ್ತೆಯ ಮೇಲೆ ಬಂದಾಗ, ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿಯನ್ನು ನೋಡಿದ್ದಾನೆ. ಈ ಪೈಕಿ ಓರ್ವ ಸಿಬ್ಬಂದಿ ಆತನನ್ನು ಸೆರೆ ಹಿಡಿದಿದ್ದು, ಆತನ ಭುಜಕ್ಕೆ ತೀರಾ ಸನಿಹದಿಂದ ಗುಂಡು ಹೊಡೆದಿದ್ದಾನೆ” ಎಂದು ಅವರು ಆರೋಪಿಸಿದ್ದಾರೆ.
ಕೂಡಲೇ ಕಿಶನ್ ನನ್ನು ತುರ್ತು ಚಿಕಿತ್ಸೆಗಾಗಿ ಶಿಜಾ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಆತ ತುರ್ತು ನಿಗಾ ಘಟಕದಲ್ಲಿ ನಾಲ್ಕು ದಿನ ಕಳೆದಿದ್ದಾನೆ.
ಕಿಶನ್ ಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರಾದ ಡಾ. ಇಂದ್ರನೀಲ್ ದತ್ತಾ, ಸುರೂಪಿ ಹಾಗೂ ಮರುನಿರ್ಮಾಣದ ಶಸ್ತ್ರಚಿಕಿತ್ಸಕರಾಗಿದ್ದಾರೆ. “ಇದು ಗಂಭೀರ ಗಾಯವಾಗಿದ್ದು, ಕಿಶನ್ ಭುಜವು ಛಿದ್ರವಾಗಿದೆ” ಎಂದು ದತ್ತಾ ಹೇಳಿದ್ದಾರೆ.
“ಆತನ ಭುಜದಲ್ಲಿ 90 ಗುಂಡುಗಳಿದ್ದವು. ಈ ಪೈಕಿ 60 ಗುಂಡುಗಳನ್ನು ಹೊರ ತೆಗೆದಿದ್ದೇವೆ” ಎಂದು Newslaundry ಸುದ್ದಿ ಸಂಸ್ಥೆಗೆ ಡಾ. ದತ್ತಾ ಫೋನ್ ಕರೆಯ ಮೂಲಕ ಮಾಹಿತಿ ನೀಡಿದ್ದಾರೆ. “ಇನ್ನೂ ಮೂವತ್ತು ಗುಂಡುಗಳು ಉಳಿದಿದ್ದು, ಅವೆಲ್ಲ ತೀರಾ ಆಳಕ್ಕೆ ಹೊಕ್ಕಿವೆ ಮತ್ತು ಅವನ್ನು ಹೊರ ತೆಗೆಯಲು ಸುದೀರ್ಘಾವಧಿ ಆಗುತ್ತಿತ್ತು. ನಮಗೆ ಶಸ್ತ್ರಚಿಕಿತ್ಸೆ ನೆರವೇರಿಸಲು ಮೂರು ಗಂಟೆಗಳ ಅವಧಿ ತಗುಲಿತು. ಆತನ ಭುಜದ ಕೀಲು ಸಂಪೂರ್ಣವಾಗಿ ಹರಿದು ಹೋಗಿದೆ. ಎಲ್ಲ ಮಾಂಸ ಖಂಡಗಳೂ ಹರಿದು ಹೋಗಿವೆ. ಅದು ಭಯಾನಕ ಗಾಯವಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಕಿಶನ್ ಗೆ ಹಾಕಿರುವ ಪ್ಲಾಸ್ಟರ್ ಅನ್ನು ಆರು ವಾರಗಳ ನಂತರ ತೆಗೆದ ನಂತರ ಉಳಿದ 30 ಗುಂಡುಗಳನ್ನು ಹೊರ ತೆಗೆಯಲಾಗುವುದು. ಕಿಶನ್ ಗುಣಮುಖನಾಗಲು ಕನಿಷ್ಠ ಆರು ತಿಂಗಳ ಅವಧಿ ಅಗತ್ಯವಿದ್ದು, ಆತ ಸಂಪೂರ್ಣವಾಗಿ ಗುಣಮುಖನಾಗುತ್ತಾನೆ ಎಂಬ ಬಗ್ಗೆ ಯಾವುದೇ ಖಾತ್ರಿಯಿಲ್ಲ” ಎಂದೂ ಅವರು ಹೇಳಿದ್ದಾರೆ.
ಸೆಪ್ಟೆಂಬರ್ 26ರಂದು ಕ್ಷಿಪ್ರ ಕಾರ್ಯಪಡೆಯ ಯೋಧರು 17 ವರ್ಷದ ಸೋಯಬಾಮ್ ಉತ್ತಮ್ ತಲೆಗೂ 100 ಗುಂಡೇಟುಗಳನ್ನು ಹೊಡೆದರು ಎಂದು ಆರೋಪಿಸಲಾಗಿದೆ.
ಉತ್ತಮ್ ರಾಷ್ಟ್ರೀಯ ಮಟ್ಟದ ಉಷು ಆಟಗಾರನಾಗಿದ್ದಾನೆ. ಕೆಲವು ತಿಂಗಳುಗಳ ಹಿಂದಷ್ಟೇ ಇಂಫಾಲದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆತ, ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲೂ ಪ್ರಯತ್ನಿಸಿದ್ದ.
ಈ ಕುರಿತು Newslaundry ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಉತ್ತಮ್ ನ ಹಿರಿಯ ಸಹೋದರ ಸೋಯಬಾಮ್ ಕಾಂಗ್ಲೆಯೆನ್ ಗಾಂಬಾ, ಉತ್ತಮ್ ಸೆಪ್ಟೆಂಬರ್ 26ರಂದು ಸುಮಾರು ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ. ಈ ಪ್ರತಿಭಟನೆಯು ಮಧ್ಯರಾತ್ರಿಯವರೆಗೂ ನಡೆದಿತ್ತು. ಉತ್ತಮ್ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಗಾಯಗೊಂಡ ಎಂದು ತಿಳಿಸಿದ್ದಾರೆ.
“ ಭದ್ರತಾ ಪಡೆಗಳು ಅಶ್ರುವಾಯು ಹಾಗೂ ಹುಸಿ ಬಾಂಬ್ ಗಳನ್ನು ಸಿಡಿಸಲು ತೊಡಗಿದಾಗ, ಆತ ಸಿಂಗ್ಜಮೇಯಿಯ ಸಪಮ್ ಲೇಯ್ಕಯಿ ಪ್ರದೇಶದಲ್ಲಿ ಪ್ರತಿಭಟಿಸುತ್ತಿದ್ದ. ಆ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರತಿಭಟನಾ ಸ್ಥಳದಿಂದ ಪರಾರಿಯಾಗಿದ್ದ ಆತ, ಮನೆಯೊಂದರ ಕಾಂಪೌಂಡ್ ಒಳಗೆ ಅವಿತುಕೊಂಡಿದ್ದ. ಆದರೆ, ಪ್ರತಿಭಟನಾಕಾರರಿಗಾಗಿ ಹುಡುಕುತ್ತಿದ್ದ ಕ್ಷಿಪ್ರ ಕಾರ್ಯಪಡೆಯ ಕಣ್ಣಿಗೆ ಆತ ಬಿದ್ದ. ಅವರು ಆತನ ಮೇಲೆ ಗುಂಡಿನ ಗನ್ ನಿಂದ ದಾಳಿ ನಡೆಸಿದರು. ಅದರಿಂದ ಆತ ತೀವ್ರ ರಕ್ತಸ್ರಾವಕ್ಕೊಳಗಾದ. ಅದೃಷ್ಟವಶಾತ್, ಆತ ಅವಿತು ಕುಳಿತಿದ್ದ ಮನೆಯ ಮಾಲಕರು ಆತನ ನೆರವಿಗೆ ಧಾವಿಸಿದರು. ಅವರು ಮೊದಲು ಆತನಿಗೆ ಪ್ರಥಮ ಚಿಕಿತ್ಸೆ ನೀಡಿ, ನಂತರ ರಾಜ್ ಮೆಡಿಸಿಟಿ ಆಸ್ಪತ್ರೆಗೆ ರವಾನಿಸಿದರು” ಎಂದು ಅವರು ತಿಳಿಸಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಭದ್ರತಾ ಪಡೆಗಳೇಕೆ ಗುಂಡಿನ ಗನ್ ಗಳನ್ನು ಬಳಸಿದವು ಎಂದು ಸೋಮೊಕಾಂತ್ ರಂತೆಯೆ ಕಂಗ್ಲೆಯೆನ್ ಗಾಂಬಾ ಕೂಡಾ ಪ್ರಶ್ನಿಸಿದ್ದಾರೆ.
“ಅವರು ಅಶ್ರುವಾಯು ಫಿರಂಗಿಗಳನ್ನು ಬಳಸಬಹುದಾಗಿತ್ತು. ಅವರ ಮೇಲೆ ಮಾರಕ ಆಯುಧಗಳಿಂದ ದಾಳಿ ನಡೆಸಬೇಕಾದ ಅಗತ್ಯವಿರಲಿಲ್ಲ. ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಇಂಥ ಆಯುಧಗಳಿಂದ ದಾಳಿ ನಡೆಸಿರುವುದು ಅವರ ಕಡೆಯಿಂದ ಸಂಪೂರ್ಣ ಅನ್ಯಾಯಯುತವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರತಾ ಪಡೆಗಳ ದಾಳಿಯಲ್ಲಿ ಎಂಟು ಮಂದಿ ಗುಂಡಿನ ಗನ್ ದಾಳಿಗೆ ತುತ್ತಾಗಿದ್ದು, ಅವರೆಲ್ಲರೂ ಅಪ್ರಾಪ್ತರಾಗಿದ್ದಾರೆ. ಕಿಶನ್ ಮತ್ತು ಉತ್ತಮ್ ರನ್ನು ಹೊರತುಪಡಿಸಿ, ನಾಂಗ್ ತೋಂಬಮ್ ಕಿಂಗ್ಸನ್ (16)ಗೆ ಹೊಟ್ಟೆಯಲ್ಲಿ ಗಾಯವಾಗಿದೆ. ಲೈಶ್ರಮ್ ಬಿಶ್ವನಾಥ್ (17)ಗೆ ಮುಖದಲ್ಲಿ ಗಾಯಗಳಾಗಿವೆ. ಥೋಕ್ ಚೋಮ್ ಲೆಮೆನ್ ಸನ್ (15)ಗೆ ಎದೆಗೂಡಿನಲ್ಲಿ ಗಾಯವಾಗಿದೆ. ತಖೆಲ್ಲಾಂಬಮ್ ಪಿಪಿನ್(15)ಗೆ ತಲೆ ಮತ್ತು ಕಾಲಿನಲ್ಲಿ, ಲ್ಯಾಂಗಮ್ ರೊಮಾಕಾಂತ(16)ಗೆ ಪಕ್ಕೆಲುಬು ಹಾಗೂ ಬೆನ್ನಿನಲ್ಲಿ ಹಾಗೂ ನಂಬಮ್ ಮನಾವೊ(16)ಗೆ ಮುಖ, ಕುತ್ತಿಗೆ ಹಾಗೂ ತಲೆಗೆ ಗಾಯವಾಗಿದೆ. ಈ ಎಲ್ಲ ಆರು ಮಂದಿಯನ್ನು ಶಿಜಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Newslaundry ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಕಿಂಗ್ ಸನ್ ಸೋದರ ಸಂಬಂಧಿ ನಾಂಗ್ ತಾಂಬಮ್, ಕಿಂಗ್ ಸನ್ ದೇಹದಿಂದ 25 ಗುಂಡುಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಕಿಂಗ್ ಸನ್ ಸೋದರಿ ರೋನಿಕಾ, “ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವಾಗ ಸಮವಸ್ತ್ರದಲ್ಲಿದ್ದರು. ಅವರು ನಿಶ್ಯಸ್ತ್ರರಾಗಿದ್ದರು. ಈ ಪೈಕಿ ಶೇ. 90ರಷ್ಟು ಮಂದಿ ಅಪ್ರಾಪ್ತರಾಗಿದ್ದರು. ಹೀಗಿದ್ದೂ, ಭದ್ರತಾ ಪಡೆಗಳು ಅವರ ಮೇಲೆ ಗುಂಡಿನ ಗನ್ ನಿಂದ ದಾಳಿ ನಡೆಸಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಶ್ವನಾಥ್ ಸಹೋದರ ಲ್ಯಾಂಕ್ ಸೆಂಬಾ, “ನನ್ನ ಸೋದರನಿಗೆ ಕ್ಷಿಪ್ರ ಕಾರ್ಯಪಡೆಯು ಗುಂಡೇಟು ಹೊಡೆದಿದೆ. ಅವರು ವಿದ್ಯಾರ್ಥಿಗಳ ಮೇಲೆ ನೇರವಾಗಿಯೇ ಗುಂಡಿನ ದಾಳಿ ನಡೆಸುತ್ತಿದ್ದರು. ಅವರಿಗೆ ಗುಂಡಿನ ಗನ್ ಹಾಗೂ ಮಾರಕ ಆಯುಧಗಳಿಂದ ದಾಳಿ ನಡೆಸಲು ಅನುಮತಿ ನೀಡಿದವರು ಯಾರು? ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಪೈಕಿ ಕೆಲವರು 15 ವರ್ಷಕ್ಕಿಂತ ಕಿರಿಯರು. ಜನಸಂದಣಿಯನ್ನು ನಿಯಂತ್ರಿಸಬೇಕು ಎಂಬುದು ನಮಗೆ ಅರ್ಥವಾಗುತ್ತದೆ. ಆದರೆ, ಅವರು ಈ ಕೆಲಸವನ್ನು ಜಲ ಫಿರಂಗಿ ಹಾಗೂ ಅಶ್ರುವಾಯು ಮೂಲಕ ಸುಲಭವಾಗಿ ಮಾಡಬಹುದಿತ್ತು. ಮಕ್ಕಳನ್ನು ನಿಯಂತ್ರಿಸಲು ಗುಂಡಿನ ಬಳಸುವುದು ಸರಿಯಾದ ದಾರಿಯಲ್ಲ” ಎಂದು ಕಿಡಿ ಕಾರಿದ್ದಾರೆ.
ಪ್ರತಿಭಟನಾಕಾರರನ್ನು ಗಾಯಗೊಳಿಸುತ್ತವೆ ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಪೊಲೀಸರು ಜಲ ಫಿರಂಗಿ ಹಾಗೂ ಅಶ್ರುವಾಯು ಬಳಸುವುದಕ್ಕೂ ಟೀಕೆ ವ್ಯಕ್ತವಾಗುತ್ತಿದೆ. ಗುಂಡಿನ ಗನ್ ವಿಚಾರಕ್ಕೆ ಬಂದರೆ, ಈ ಗನ್ ಅನ್ನು ಕಾಶ್ಮೀರದಲ್ಲಿ ಬಳಸಲಾಗಿದ್ದು, ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಭದ್ರತಾ ಪಡೆಗಳು ಲೋಹದ ಗುಂಡುಗಳನ್ನು ಬಳಸಿರುವುದರಿಂದ 2016ರ ಮಧ್ಯಭಾಗದಿಂದ 2018ರವರೆಗೆ ಕಾಶ್ಮೀರದಲ್ಲಿನ 1,253 ಮಂದಿ ಅಂಧರಾಗಿದ್ದಾರೆ.
ಇಂಫಾಲದಲ್ಲಿನ ಮಾನವ ಹಕ್ಕುಗಳ ಕಾರ್ಯಕರ್ತರಾದ ಬಬ್ಲೂ ಲೋಯಿಟೊಂಗ್ಬಾಮ್, ವಿದ್ಯಾರ್ಥಿಗಳು ಗುಂಪು ಸೇರುವ ಮೂಲಭೂತ ಹಕ್ಕನ್ನು ಮಾತ್ರ ಚಲಾಯಿಸಿದ್ದಾರೆ ಎಂಬುದತ್ತ ಬೊಟ್ಟು ಮಾಡಿದ್ದಾರೆ.
“ಅವರು ತಮ್ಮ ಬರ್ಬರವಾಗಿ ಹತ್ಯೆಗೀಡಾದ ತಮ್ಮ ಸಹಪಾಠಿಗಳಿಗಾಗಿನ ನ್ಯಾಯಕ್ಕಾಗಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರು. ಸಂಬಂಧಿತ ಮ್ಯಾಜಿಸ್ಟ್ರೇಟ್ ಅವರ ಪೂರ್ವ ಎಚ್ಚರಿಕೆ ಇಲ್ಲದೆ ಗುಂಡಿನ ಗನ್ ಒಳಗೊಂಡಂತೆ ಅವರ ವಿರುದ್ಧ ಭಾರಿ ಮತ್ತು ಮಾರಕ ಆಯುಧಗಳನ್ನು ಬಳಸಿರುವುದು ಪ್ರಭುತ್ವದ ಕ್ರೂರತೆಗೆ ಸಾಕ್ಷಿ. ಸದ್ಯ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ, ಈ ಕೃತ್ಯವನ್ನು ಹಿಂಸಾಚಾರದ ಸರಣಿಯನ್ನು ಪ್ರಚೋದಿಸುವ ಕೃತ್ಯವನ್ನಾಗಿ ನೋಡಬೇಕಿದೆ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.







