ಭಾರತ ಪಾಕ್ ಸಂಘರ್ಷ; ದೇಶದಲ್ಲಿ ಬಿಡುಗಡೆಯಾಗದ ದಿಲ್ಜಿತ್ ದೋಸಾಂಜ್ ನಟಿಸಿದ ʼಸರ್ದಾರ್ ಜಿ 3ʼ
ಚಿತ್ರದಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ನಟಿಸಿದ್ದಕ್ಕೆ ಆಕ್ರೋಶ

PC : imdb.com
ಗಾಯಕ, ನಟ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಸರ್ದಾರ್ ಜಿ 3 ಚಿತ್ರದಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ನಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದಿಲ್ಜಿತ್ ದೋಸಾಂಜ್ ಅವರೊಂದಿಗಿನ ಎಲ್ಲ ವೃತ್ತಿಪರ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ನಟ ಸನ್ನಿ ಡಿಯೋಲ್ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಇಮ್ತಿಯಾಜ್ ಅಲಿ ಅವರಿಗೆ ಅಧಿಕೃತವಾಗಿ ಮನವಿ ಮಾಡಿದೆ.
ಈ ಚಿತ್ರ ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಸನ್ನಿ ಡಿಯೋಲ್ ಮತ್ತು ಇಮ್ತಿಯಾಜ್ ಅಲಿ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಫೆಡರೇಷನ್, ಬಹಿಷ್ಕಾರ ಎದುರಿಸುತ್ತಿರುವ ದಿಲ್ಜಿತ್ ದೋಸಾಂಜ್ ಅವರೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಒತ್ತಾಯಿಸಿದೆ.
FWICE ಅಧಿಕೃತವಾಗಿ ಬಹಿಷ್ಕರಿಸಿದ ಯಾವುದೇ ಕಲಾವಿದರೊಂದಿಗೆ ಹೊಂದಿರುವ ಸಂಬಂಧದಿಂದ ಹಿಂದೆ ಸರಿಯುವಂತೆ ಬಲವಾಗಿ ಮನವಿ ಮಾಡುತ್ತೇವೆ. ನಮ್ಮ ಉದ್ಯಮ ಮತ್ತು ರಾಷ್ಟ್ರದ ಘನತೆಯನ್ನು ಎತ್ತಿಹಿಡಿಯುವುದು ವೃತ್ತಿಪರ ಅಥವಾ
ವಾಣಿಜ್ಯ ಹಿತಾಸಕ್ತಿಗಳಿಗಿಂತ ಶ್ರೇಷ್ಠ ಎಂದು ಇಬ್ಬರಿಗೂ ಪತ್ರದಲ್ಲಿ ಹೇಳಲಾಗಿರುವುದು ವರದಿಯಾಗಿದೆ.
ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಸರ್ದಾರ್ ಜಿ 3 ರ ಟ್ರೇಲರ್ ಬಿಡುಗಡೆಯಾದ ಬಳಿಕ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತಲೆದೋರಿರುವುದರ ಹೊರತಾಗಿಯೂ ಚಿತ್ರದಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಇರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ.ಇನ್ನು ಮುಂದೆ ದಿಲ್ಜಿತ್ ದೋಸಾಂಜ್ ಒಳಗೊಂಡ ಯಾವುದೇ ಸಂಗೀತ ಕಚೇರಿಗಳು, ಸಿನಿಮಾಗಳನ್ನು ಬೆಂಬಲಿಸುವುದಿಲ್ಲ ಎಂದು ಫೆಡರೇಶನ್ ಹೇಳಿದೆ.
ಏಪ್ರಿಲ್ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಿ ಕಲಾವಿದರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತ ದೇಶದಲ್ಲಿ ನಿಷೇಧಿಸಿತ್ತು. ಅವರು ಭಾರತೀಯ ಪ್ರದರ್ಶನಗಳು ಮತ್ತು ಸಿನಿಮಾಗಳಲ್ಲಿ ಭಾಗವಹಿಸುವುದನ್ನು ಕೂಡ ನಿಷೇಧಿಸಲಾಗಿತ್ತು.
ಇದರ ನಡುವೆಯೇ, ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಪೋಷಕ ಪಾತ್ರದಲ್ಲಿ ನಟಿಸಿರುವ ದಿಲ್ಜಿತ್ ದೋಸಾಂಜ್ ಅವರ ಸರ್ದಾರ್ ಜಿ 3 ಚಿತ್ರ ಬಿಡುಗಡೆ ಮಾಡುವ ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿದೆ.ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಿ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು.
ಹನಿಯಾ ಭಾರತದ ಈ ದಾಳಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದರು. ಇದು ಭಾರತದಲ್ಲಿ ಆಕ್ರೋಶ ಹುಟ್ಟುಹಾಕಿತು. ಆಕೆಯ ನಟನೆಯ ಚಿತ್ರ ಬಹಿಷ್ಕರಿಸುವ ಕರೆ ನೀಡಲಾಯಿತು. ಅದರಿಂದಾಗಿ ಚಿತ್ರದ ನಿರ್ಮಾಪಕರು ಚಿತ್ರವನ್ನು ವಿದೇಶಗಳಲ್ಲಿ ಮಾತ್ರ ಬಿಡುಗಡೆ ಮಾಡುವುದಾಗಿ ನಿರ್ಧರಿಸಿದರು.
ಶುಕ್ರವಾರ ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗಿದೆ. ಸರ್ದಾರ್ ಜಿ 3 ಚಿತ್ರದ ವಿರುದ್ಧದ ಬಹಿಷ್ಕಾರಕ್ಕೆ ದಿಲ್ಜಿತ್ ದೋಸಾಂಜ್ ಪ್ರತಿಕ್ರಿಯಿಸಿದ್ದಾರೆ. ಬಿಬಿಸಿ ಏಷ್ಯನ್ ನೆಟ್ವರ್ಕ್ಗೆ ನೀಡಿದ ಸಂದರ್ಶನದಲ್ಲಿ, ಚಿತ್ರಕ್ಕೆ ಸಹಿ ಹಾಕಿದಾಗ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿ ಚೆನ್ನಾಗಿತ್ತು ಎಂದು ಅವರು ಹೇಳಿದ್ದಾರೆ. ಚಿತ್ರವನ್ನು ಫೆಬ್ರವರಿಯಲ್ಲಿ ಚಿತ್ರೀಕರಿಸಲಾಯಿತು. ಅದರ ನಂತರ ನಮ್ಮ ನಿಯಂತ್ರಣ ಮೀರಿದ ಬಹಳಷ್ಟು ಬೆಳವಣಿಗೆಗಳಾದವು. ಪಹಲ್ಗಾಮ್ ದಾಳಿ ನಡೆದಾಗ, ನಿರ್ಮಾಪಕರಿಗೆ ಈ ಚಿತ್ರವನ್ನು ಭಾರತದಲ್ಲಿ ಇನ್ನು ಮುಂದೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿತ್ತು.
ಆದರೆ, ಅವರು ಚಿತ್ರದಲ್ಲಿ ಬಹಳಷ್ಟು ಹಣ ಹೂಡಿಕೆ ಮಾಡಿರುವುದರಿಂದ ಅದನ್ನು ವಿದೇಶದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರು. ಅವರಿಗೆ ಈಗ ಪೂರ್ತಿ ನಷ್ಟವಾಗಲಿದೆ ಎಂದು ದಿಲ್ಜಿತ್ ಹೇಳಿದ್ದಾರೆ. ನಾನು ಚಿತ್ರಕ್ಕೆ ಸಹಿ ಹಾಕಿದಾಗ, ಪರಿಸ್ಥಿತಿ ಚೆನ್ನಾಗಿತ್ತು. ಈಗ, ನಿರ್ಮಾಪಕರು ಅದನ್ನು ವಿದೇಶದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವಾಗ, ನಾನು ಅವರ ನಿರ್ಧಾರವನ್ನು ಬೆಂಬಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ದಿಲ್ಜಿತ್ ದೋಸಾಂಜ್ ತಮ್ಮ ಚಿತ್ರದ ಟ್ರೇಲರ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಾಗ ಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಚಿತ್ರದ ಬಗ್ಗೆ ಬೆರಗಿನಿಂದ ಹೇಳಿದ್ದರೆ, ಅನೆಕರು ಭಯೋತ್ಪಾದಕ ದಾಳಿಯ ನಂತರವೂ ಪಾಕಿಸ್ತಾನಿ ನಟಿಯೊಂದಿಗೆ ಕೆಲಸ ಮಾಡುವ ದಿಲ್ಜಿತ್ ಅವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಹನಿಯಾ ಆಮಿರ್ ನಟಿಸಿದ ಹಾಡಿನ ಟೀಸರ್ ಅನ್ನು ಹಂಚಿಕೊಂಡಿದ್ದ ದಿಲ್ಜಿತ್, ತೀವ್ರ ಟೀಕೆಗಳ ಬಳಿಕ ಅದನ್ನು ತೆಗೆದುಹಾಕಿದರು. ಈ ನಡುವೆ ಚಿತ್ರದಲ್ಲಿ ನಟಿಸಿದ್ದ ಇನ್ನೋರ್ವ ನಟಿ ನೀರು ಬಾಜ್ವಾ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ಪೋಸ್ಟ್ ಗಳನ್ನು ತನ್ನ ಇನ್ಸ್ಟಾಗ್ರಾಮ್ ನಿಂದ ಡಿಲೀಟ್ ಮಾಡಿದ್ದಾರೆ. ಅಲ್ಲದೇ ನಟಿ ಹನಿಯಾ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಏಪ್ರಿಲ್ನಲ್ಲಿ ಪಹಲ್ಗಾಮ್ ದಾಳಿ ನಂತರ, ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿದ ಅಬೀರ್ ಗುಲಾಲ್ ಚಿತ್ರಕ್ಕೆ ಕೂಡ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿತ್ತು.
ಒಂಭತ್ತು ವರ್ಷಗಳ ನಂತರ ಭಾರತೀಯ ಚಿತ್ರರಂಗದಲ್ಲಿ ಪಾಕಿಸ್ತಾನಿ ನಟ ಕಾಣಿಸಿಕೊಳ್ಳಬೇಕಿದ್ದ ಸಿನಿಮಾವನ್ನು ನಿಷೇಧಿಸಲಾಯಿತು. 2016 ರ ಉರಿ ದಾಳಿಯ ನಂತರ ವಿಧಿಸಲಾದ ಈ ಹಿಂದಿನ ನಿಷೇಧದಿಂದಾಗಿ ಫವಾದ್ ಖಾನ್ ಭಾರತೀಯ ಚಿತ್ರರಂಗದಿಂದ ದೂರವಿದ್ದರು. ಅವರು ವಾಪಸ್ ಮರಳಿದ ಚಿತ್ರವೂ ಪಹಲ್ಗಾಮ್ ದಾಳಿಯಿಂದಾಗಿ ನಿಷೇಧಕ್ಕೆ ಒಳಗಾಯಿತು.
ಸರ್ದಾರ್ ಜಿ 3 ಚಿತ್ರ ವಿವಾದಕ್ಕೆ ಒಳಗಾದ ಬೆನ್ನಿಗೇ ದಿಲ್ಜಿತ್ ದೊಸಾಂಜ್ ವಿರುದ್ಧ ವ್ಯಾಪಕ ಟೀಕಾ ಪ್ರಹಾರ ಕಂಡು ಬರುತ್ತಿದೆ. ಟಿವಿ ಚಾನಲ್ ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರಕ್ಕಿಂತ ಹೆಚ್ಚಾಗಿ ದಿಲ್ಜಿತ್ ವಿರುದ್ಧವೇ ಆಕ್ರೋಶ ಸ್ಪೋಟಿಸುತ್ತಿರುವಂತೆ ಕಾಣುತ್ತಿದೆ.
ಇಲ್ಲಿ ಗಮನಿಸಬೇಕಾದ ವಿಷಯ, ಸರ್ದಾರ್ ಜಿ 3 ಚಿತ್ರ ನಿರ್ಮಾಣ ಆಗಿದ್ದು ಪಹಲ್ಗಾಮ್ ಭಯೋತ್ಪಾದಕ ದಾಳಿಗಿಂತ ಮೊದಲು. ಆದರೆ ಪಹಲ್ಗಾಮ್ ದಾಳಿ ಹಾಗು ಬಳಿಕ ನಡೆದ ವಿದ್ಯಮಾನಗಳು ಭಾರತೀಯರನ್ನು ಕೆರಳಿಸಿದ್ದವು. ಅದಕ್ಕೆ ತಕ್ಕಂತೆ ಹನಿಯಾ ಕೂಡ ಭಾರತದ ವಿರುದ್ಧ ಟೀಕೆ ಮಾಡಿದ್ದರು. ಹಾಗಾಗಿ ಸಿನಿಮಾ ವಿರುದ್ಧ ಇಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ಇದಕ್ಕೆ ಸ್ಪಂದಿಸಿದ ನಿರ್ಮಾಪಕರು ತಮಗೆ ಸಾಕಷ್ಟು ನಷ್ಟವಾಗುತ್ತಿದ್ದರೂ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದರು. ಕೋಟಿಗಟ್ಟಲೆ ಸುರಿದ ಸಿನಿಮಾವನ್ನು ರಿಲೀಸ್ ಮಾಡದೇ ಇರುವುದು ನಿರ್ಮಾಪಕರ ಪಾಲಿಗೆ ಬಹಳ ನಷ್ಟದ ವಿಷಯ. ಆದರೂ ಅವರದನ್ನು ಮಾಡಿದ್ದಾರೆ.