ಕೋಮುವಾದವನ್ನು ಬಗ್ಗು ಬಡಿದು ಸರ್ವಧರ್ಮೀಯರ ಮತಗಳಿಂದ ಗೆದ್ದ ಇಕ್ರಾ ಹಸನ್
ಉತ್ತರ ಪ್ರದೇಶದ ಕೈರಾನದಲ್ಲಿ ಬಿಜೆಪಿಯನ್ನು ಸೋಲಿಸಿದ ಎಸ್ಪಿಯ ಯುವ ನಾಯಕಿ
ಇಕ್ರಾ ಹಸನ್ | PC: X/@Iqra_Munawwar_
ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದಿಲ್ಲ. ಅವರಿಗೆ ಬೇರೆ ಸಮುದಾಯದವರು ಮತ ಹಾಕುವುದಿಲ್ಲ ಎನ್ನುವುದು ಕಾಂಗ್ರೆಸ್ ಸಹಿತ ಬಹುತೇಕ ಎಲ್ಲ ಪ್ರಮುಖ ಪಕ್ಷಗಳ ವಲಯದಲ್ಲಿರುವ ಮಾತು. ಆದರೆ ಪಕ್ಷ ಟಿಕೆಟ್ ಕೊಟ್ಟರೆ, ಅಭ್ಯರ್ಥಿ ಮೇಲೆ ವಿಶ್ವಾಸ ತೋರಿಸಿದರೆ, ಪಕ್ಷದ ಸಂಘಟನೆ ಜೊತೆಗೆ ನಿಂತು ಕೆಲಸ ಮಾಡಿದರೆ, ಜನರು ಖಂಡಿತ ಬೆಂಬಲಿಸುತ್ತಾರೆ ಎನ್ನುವುದಕ್ಕೆ ಇಕ್ರಾ ಹಸನ್ ಚೌಧರಿ ಅತ್ಯುತ್ತಮ ಉದಾಹರಣೆ.
ಬಿಜೆಪಿ ಹಾಗು ಸಂಘ ಪರಿವಾರದ ಭದ್ರಕೋಟೆ ಉತ್ರಪ್ರದೇಶ ರಾಜ್ಯದಲ್ಲಿ ಇಕ್ರಾ ಹಸನ್ ಬಿಜೆಪಿಯನ್ನೇ ಸೋಲಿಸಿ ಸಂಸತ್ ಪ್ರವೇಶಿಸುತ್ತಿದ್ದಾರೆ. ಅವರು ಗೆದ್ದಿರುವ ಕೈರಾನ ಕ್ಷೇತ್ರ ಬರೀ ಮುಸ್ಲಿಂ ಬಾಹುಳ್ಯದ ಕ್ಷೇತ್ರವಲ್ಲ. ಅಲ್ಲಿನ ಸರ್ವಧರ್ಮೀಯರ ಬೆಂಬಲ ಹಾಗೂ ಆಶೀರ್ವಾದ ಪಡೆದು ಈ ಯುವ ನಾಯಕಿ ಗೆದ್ದು ಬೀಗಿದ್ದಾರೆ.
ಒಂದೊಮ್ಮೆ ಹಿಂದೂಸ್ತಾನಿ ಸಂಗೀತದ ಕಿರಾನಾ ಘರಾನಾದ ಮೂಲವೆಂಬ ಖ್ಯಾತಿಯಿದ್ದ ಕೈರಾನಾ ಈಗ, ಆಗಾಗ ಹಿಂಸಾತ್ಮಕ ಘಟನೆಗಳು ಹಾಗು ರೈತರ ಹೋರಾಟದಿಂದಲೇ ಸುದ್ದಿಯಾಗುತ್ತಿದೆ. ಇಲ್ಲಿ ಮುಸ್ಲಿಮರ ಕಿರುಕುಳದಿಂದಾಗಿ ಹಿಂದೂ ಕುಟುಂಬಗಳು ವಲಸೆ ಹೋಗುತ್ತಿವೆ ಎಂದು ಬಿಜೆಪಿ ಹಾಗು ಸಂಘ ಪರಿವಾರ ಸಾಕಷ್ಟು ಅಪಪ್ರಚಾರ ಕೂಡ ನಡೆಸಿದ್ದವು.
ಕೈರಾನದಲ್ಲಿ ನಾನೊಬ್ಬ ಸ್ತ್ರೀವಾದಿಯಾಗಿ ಚುನಾವಣೆ ಸೆಣೆಸಿ ಗೆದ್ದೆ ಎನ್ನುತ್ತಾರೆ ಇಕ್ರಾ ಹಸನ್. ಅಲ್ಲಿನ ಜನ ಮಹಿಳೆಯರನ್ನು ದುರ್ಬಲರು ಎಂಬಂತೆಯೇ ನೋಡುವುದೇ ಹೆಚ್ಚು. ಆದರೆ ನಾನು ಮಹಿಳೆಯಾಗಿ ಸಾಂಪ್ರದಾಯಿಕ ಚೌಕಟ್ಟಿಗೆ ತೀರಾ ವಿರುದ್ಧವಾಗಿ ಹೋಗದೆಯೂ ಜನರ ಕೆಲಸ ಮಾಡಿ ಕೊಡಬಲ್ಲೆ ಎಂಬ ವಿಶ್ವಾಸ ಮೂಡಿಸಿದೆ. ಹಾಗಾಗಿ ಜನರಿಗೆ ನನ್ನ ಮೇಲೆ ವಿಶ್ವಾಸ ಬಂತು ಎನ್ನುತ್ತಾರೆ ಇಕ್ರಾ ಹಸನ್
ಇಕ್ರಾ ಹಸನ್ ಚೌಧರಿ ಮಾಜಿ ರಾಜ್ಯಸಭಾ ಸದಸ್ಯರಾದ ಮುನವ್ವರ್ ಹಸನ್ ಹಾಗು ಮಾಜಿ ಲೋಕಸಭಾ ಸದಸ್ಯರಾದ ಬೇಗಂ ತಬಸ್ಸುಮ್ ಹಸನ್ ದಂಪತಿಯ ಸುಪುತ್ರಿ. ಈಕೆಯ ಸೋದರ ನಯೀಮ್ ಕೂಡ ಮೂರು ಬಾರಿ ಶಾಸಕರಾದವರು. ಹಾಗಾಗಿ ಇವರು ರಾಜಕೀಯ ಹಿನ್ನೆಲೆಯಿಂದಲೇ ಬಂದವರು.
ಈಗ ಸ್ವತಃ ಇಕ್ರಾ ಹಸನ್ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇಕ್ರಾ ದಿಲ್ಲಿಯ ಕ್ವೀನ್ ಮೇರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದು, ದಿಲ್ಲಿಯ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು. ಬಳಿಕ SOAS University of London ನಿಂದ M.Sc ಇನ್ ಇಂಟರ್ನ್ಯಾಷನಲ್ ಪಾಲಿಟಿಕ್ಸ್ ಸ್ನಾತಕೋತ್ತರ ಪದವಿ ಪಡೆದರು.
2024ರ ಲೋಕಸಭಾ ಚುನಾವಣೆಯಲ್ಲಿ, ಇಕ್ರಾ ಹಸನ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕೈರಾನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 69,116 ಮತಗಳ ಅಂತರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರದೀಪ್ ಕುಮಾರ್ ಅವರನ್ನು ಸೋಲಿಸಿ ಸಂಸತ್ತಿನ ಸದಸ್ಯರಾಗಿದ್ದಾರೆ.
ನನ್ನ ಕ್ಷೇತ್ರದಲ್ಲಿ ಕೇವಲ ಮುಸಲ್ಮಾನರ ಬೆಂಬಲದಿಂದ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ. ಎಲ್ಲ ಧರ್ಮಗಳ ಸಹೋದರ ಸಹೋದರಿಯರ ಬೆಂಬಲದೊಂದಿಗೆ ಒಬ್ಬ ಮುಸ್ಲಿಂ ಮಹಿಳೆಯಾಗಿ ಗೆಲುವು ಸಾಧಿಸುವುದು ಈ ದೇಶಕ್ಕೆ ಒಂದು ಒಂದು ಉತ್ತಮ ಸಂದೇಶವನ್ನು ರವಾನಿಸಿದೆ ಎನ್ನುತ್ತಾರೆ ಇಕ್ರಾ ಹಸನ್. ರಾಜಕೀಯಕ್ಕೆ ನಾನಿನ್ನೂ ಹೊಸಬಳು. ಕ್ರಮೇಣ , ಒಂದೊಂದೇ ವಿಷಯಗಳನ್ನು ಕಲಿತುಕೊಂಡು ನಾನು ಕ್ಷೇತ್ರದ ಜನಸಾಮಾನ್ಯರ ನಿರೀಕ್ಷೆಗಳಂತೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ.
ನಮ್ಮ ಪಕ್ಷದ ಧ್ಯೇಯವಾದ ಸಾಮಾಜಿಕ-ನ್ಯಾಯವನ್ನು ಎತ್ತಿ ಹಿಡಿಯುವುದು ನಮ್ಮ ನಾಯಕ ಅಖಿಲೇಶ್ ಯಾದವ್ ಅವರ ಅಭಿಲಾಷೆ. ಅದರಂತೆ ನಾನು ಸಂಸತ್ತಿನಲ್ಲಿ ಸಾಮಾಜಿಕ ನ್ಯಾಯದ ಧ್ವನಿಯಾಗುತ್ತೇನೆ. ಉತ್ತರ ಪ್ರದೇಶದ ಜನರು ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಇಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಹಾಗಾಗಿ ಈ ಬಿಜೆಪಿ ಸರಕಾರ ತೊಲಗುವವರೆಗೂ ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ ಇಕ್ರಾ ಹಸನ್.
ಬಿಜೆಪಿಯ ಸಂಘಟನಾ ಶಕ್ತಿ ಹಾಗು ಅದರ ಘಟಾನುಘಟಿ ನಾಯಕರೆದುರು ಸ್ಪರ್ಧಿಸುವುದು ಸುಲಭವಲ್ಲ. ಹಾಗಾಗಿ ಆರಂಭದಲ್ಲಿ ನಾನೂ ಗಾಬರಿಗೊಂಡಿದ್ದೆ. ಆದರೆ ನಮ್ಮ ಪಕ್ಷದ ಹೋರಾಟ ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗಾಗಿ ಕ್ರಮೇಣ ಗೆಲುವಿನ ಭರವಸೆ ಬಂತು. ಪಶ್ಚಿಮ ಉತ್ತರ ಪ್ರದೇಶದಲ್ಲಿ ನಮಗೆ ಗೆಲುವು ಸಿಕ್ಕಿದ್ದು ಬಹಳ ಸಂತೋಷದ ವಿಷಯವಾಗಿದೆ. ನಮ್ಮ ಕ್ಷೇತ್ರದಲ್ಲಿ ನನಗೆ ಕ್ಷತ್ರೀಯ ಸಮಾಜದಿಂದ, ಸೈನಿ ಸಮಾಜದಿಂದ, ದಲಿತ ಸಮಾಜದಿಂದ ದೊರೆತ ದೊಡ್ಡ ಬೆಂಬಲವೇ ಹಿಂದು-ಮುಸ್ಲಿಂ ತಾರತಮ್ಯದ ರಾಜಕೀಯದ ವಿರುದ್ಧದ ಭರ್ಜರಿ ಗೆಲುವಾಗಿದೆ ಎಂದು ಹೇಳುತ್ತಾರೆ ಇಕ್ರಾ ಹಸನ್ .
ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರಕಾರ ನಮಗೆ ಎಲ್ಲ ರೀತಿಯಿಂದಲೂ ಸವಾಲುಗಳನ್ನು ಒಡ್ಡಿತು. ನಮ್ಮ ಕನಿಷ್ಠ ನೂರು ಮಂದಿಯ ಮೇಲೆ ಬೇರೆ ಬೇರೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಈಗ ಗೆದ್ದ ಮೇಲೂ ಈ ಒತ್ತಡ ಕಡಿಮೆಯಾಗಿಲ್ಲ, ಬದಲಾಗಿ ಹೆಚ್ಚುತ್ತಲೇ ಇದೆ. ಆದರೆ ನಾವು ನಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಧೈರ್ಯದಿಂದ ಹೇಳುತ್ತಾರೆ ಈ ಹೊಸ ಸಂಸದೆ.
ರಾಜ್ಯಮಟ್ಟದಾಗಲಿ, ರಾಷ್ಟ್ರಮಟ್ಟದಾಗಲಿ, ನಾವು ಕಳೆದ ಹತ್ತು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಕಾರಣ, ನಮಗೆ ಇಲ್ಲಿನ ಒತ್ತಡಗಳನ್ನು, ಸವಾಲುಗಳನ್ನು ಎದುರಿಸುವ ಧೈರ್ಯವಿದೆ. ನಾವು ಹಿರಿಯರ ಮಾರ್ಗದರ್ಶನ ದೊಂದಿಗೆ, ನಮ್ಮ ಕರ್ತವ್ಯಗಳನ್ನು ತಿಳಿದುಕೊಂಡು ಸಂಸತ್ತಿನಲ್ಲಿ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ.
ನಾವು ಧ್ವನಿಯಿಲ್ಲದವರ ಧ್ವನಿಯಾಗಿ ಸಂಸತ್ತಿನಲ್ಲಿ ಅವರ ಪರವಾಗಿ ಮಾತನಾಡಲಿದ್ದೇವೆ ಎಂದು ಇಕ್ರಾ ಹಸನ್ ಭರವಸೆ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ರೈತರು ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ, ಪರ ಧ್ವನಿಯನ್ನು ಎತ್ತುತ್ತೇನೆ; ಅದರೊಂದಿಗೆ, ಒಬ್ಬ ಮಹಿಳೆಯಾಗಿ ನಾನು ಮಹಿಳಾ ಪರ ಧ್ವನಿಯಾಗಿಯೂ ಕೆಲಸ ಮಾಡುತ್ತೇನೆ.
ನಮ್ಮ ಯುವಕರ ಉದ್ಯೋಗದ ಕುರಿತು ಮಾತನಾಡಲಿದ್ದೇನೆ. ರೈತರ ಮಕ್ಕಳು ಸಾಮಾನ್ಯವಾಗಿ ಸೈನ್ಯವನ್ನು ಸೇರಿಕೊಳ್ಳುತ್ತಾರೆ. ಹಾಗಾಗಿ, ಅವರ ಹಕ್ಕಿಗಾಗಿಯೂ ಮಾತನಾಡಲಿದ್ದೇನೆ. ನನ್ನ ಕ್ಷೇತ್ರದಲ್ಲಿ ಮಹಿಳಾ ಶಾಲಾ ಕಾಲೇಜುಗಳ ಸ್ಥಾಪನೆಗೆ ಒತ್ತು ನೀಡಲಿದ್ದೇನೆ. ಹಾಗೆಯೆ ಇಲ್ಲಿನ ಹಳ್ಳಿಗಳಿಗೆ ನಗರಗಳೊಂದಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಾಗು ವಿದ್ಯುತ್ ಸಮಸ್ಯೆ ನಿವಾರಣೆಗೂ ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಜನರಿಗೆ ವಿಶ್ವಾಸ ಮೂಡಿಸಿದ್ದಾರೆ ಇಕ್ರಾ ಹಸನ್.