ಟ್ರಂಪ್ ನೆತನ್ಯಾಹು ಬಾಹ್ಯಾಕಾಶದಲ್ಲೇ ಇರಲಿ ಎಂದಿದ್ದ ಜೇನ್ ಗುಡಾಲ್

ಜಗದ್ವಿಖ್ಯಾತ ಎಥಾಲಜಿಸ್ಟ್ ಮತ್ತು ಪ್ರೈಮೇಟಾಲಜಿಸ್ಟ್ ಆಗಿದ್ದ ಡಾ. ಜೇನ್ ಗುಡಾಲ್ ಮೊನ್ನೆ ಅಕ್ಟೋಬರ್ 1 ರಂದು 91ನೇ ವಯಸ್ಸಿನಲ್ಲಿ ನಿಧನರಾದರು.
ಚಿಂಪಾಂಜಿಗಳು ಮತ್ತಿತರ ದೊಡ್ಡ ವಾನರ ಪ್ರಭೇದಗಳ ವರ್ತನೆಯ ಅಧ್ಯಯನ ಮತ್ತವುಗಳ ಸಂರಕ್ಷಣೆಗೆ ಅವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು.
ಚಿಂಪಾಂಜಿಗಳ ಅಧ್ಯಯನಕ್ಕೆ ಹೊಸ ದಾರಿ ಕಂಡುಕೊಂಡಿದ್ದ ಅವರು, ಅವು ಉಪಕರಣ ಬಳಸುವುದನ್ನು, ಭಾವನೆ ವ್ಯಕ್ತಪಡಿಸುವುದನ್ನು, ತಲೆಮಾರಿನಿಂದ ತಲೆಮಾರಿಗೆ ಜ್ಞಾನ ರವಾನಿಸುವುದನ್ನು ಗಮನಿಸಿದ್ದರು.
ಚಿಂಪಾಂಜಿಗಳ ಸಂಕೀರ್ಣ ಸಾಮಾಜಿಕ ಬಂಧ ಮತ್ತು ಪರಸ್ಪರ ಕೊಲ್ಲುವಷ್ಟು ಆಕ್ರಮಣಕಾರಿಯಾಗಬಹುದಾದ ಸಾಧ್ಯತೆ ಬಗ್ಗೆ ಗುಡಾಲ್ ಕಂಡುಕೊಂಡರು.
ಇದು ಚಿಂಪಾಂಜಿಗಳು ಮತ್ತು ಮಾನವರ ಪೂರ್ವಜರು ಒಂದೇ ವರ್ಗದವರಾಗಿರಬಹುದು ಎಂಬುದನ್ನು ತಿಳಿಸಿತು ಮತ್ತದು ತೀರಾ ಹೊಸ ಮಾಹಿತಿಯಾಗಿತ್ತು.
ಅವರ ಅವಲೋಕನಗಳು, ಮಾನವರು ಇತರ ಪ್ರಾಣಿಗಳಿಗಿಂತ ತೀರಾ ಭಿನ್ನರಾಗಿದ್ದಾರೆ ಎಂಬ ಸಾಂಪ್ರದಾಯಿಕ ದೃಷ್ಟಿಕೋನವನ್ನೇ ಮರು ವ್ಯಾಖ್ಯಾನಿಸಿದವು.
ಲಂಡನ್ ನಲ್ಲಿ ಜನಿಸಿದ್ದ ಜೇನ್ ಗುಡಾಲ್ ಕಾರ್ಯಕ್ಷೇತ್ರ ಪ್ರಮುಖವಾಗಿ ತಾಂಜಾನಿಯಾ ಆಗಿತ್ತು.
ಗುಡಾಲ್ ನಿಧನರಾಗುವ ಮುಂಚಿನ ದಿನಗಳವರೆಗೂ ಸಕ್ರಿಯರಾಗಿದ್ದರು ಮತ್ತು ಯುಎಸ್‌ನಲ್ಲಿ ಭಾಷಣ ಮಾಡಲು ಪ್ರವಾಸದಲ್ಲಿದ್ದಾಗಲೇ ಕೊನೆಯುಸಿರೆಳೆದರು.
ಈ ವರ್ಷದ ಆರಂಭದಲ್ಲಿ ಅವರಿಗೆ ಅಮೆರಿಕ ಸರ್ಕಾರ ಮೆಡಲ್ ಆಫ್ ಫ್ರೀಡಂ ಪ್ರಶಸ್ತಿ ನೀಡಿ ಗೌರವಿಸಿತ್ತು. ಯುಕೆಯಲ್ಲಿ ಮಾತ್ರವಲ್ಲದೆ ಹಲವಾರು ಅಂತರರಾಷ್ಟ್ರೀಯ ಗೌರವಗಳಿಗೆ ಅವರು ಪಾತ್ರರಾಗಿದ್ದರು.
ಜೇನ್ ಗುಡಾಲ್ ಆರಂಭದಿಂದಲೂ ಸಂಪ್ರದಾಯವನ್ನು ಧಿಕ್ಕರಿಸಿದವರು. ಯಾವುದೇ ಔಪಚಾರಿಕ ವೈಜ್ಞಾನಿಕ ತರಬೇತಿಯಿಲ್ಲದೆ, ಅವರು 1960 ರಲ್ಲಿ ತಾಂಜಾನಿಯಾದ ಗೊಂಬೆ ಸ್ಟ್ರೀಮ್ ನ್ಯಾಷನಲ್ ಪಾರ್ಕ್ನಲ್ಲಿ ಚಿಂಪಾಂಜಿ ಸಮುದಾಯಗಳ ಅಧ್ಯಯನವನ್ನು ಶುರು ಮಾಡಿದರು. ಆರು ದಶಕಗಳಿಗೂ ಹೆಚ್ಚು ಕಾಲದ ಸಂಶೋಧನೆಯ ಮೂಲಕ ಗಮನ ಸೆಳೆದಿದ್ದಾರೆ.
ಡಾ. ಗುಡಾಲ್ ಅವರ ಪ್ರಭಾವ ವೈಜ್ಞಾನಿಕ ಆವಿಷ್ಕಾರವನ್ನು ಮೀರಿ ವ್ಯಾಪಿಸಿಕೊಳ್ಳುತ್ತದೆ. ಗುಡಾಲ್ ತಾವು ಅಧ್ಯಯನಿಸುತ್ತಿದ್ದ ಪ್ರಾಣಿಗಳಿಗೆ ಸಂಖ್ಯೆಗಳ ಬದಲಿಗೆ ಗ್ರೇಬಿಯರ್ಡ್, ಫಿಫಿ, ಫ್ಲೋ, ಗ್ರಬ್ ಇತ್ಯಾದಿ ಹೆಸರುಗಳನ್ನು ನೀಡಲು ನಿರ್ಧರಿಸಿದಾಗ ಕೋಲಾಹಲವೇ ಆಗಿತ್ತು.
ಅದು ವೈಜ್ಞಾನಿಕ ಸಮುದಾಯವನ್ನು, ಅದರಲ್ಲೂ ಹೆಚ್ಚಾಗಿ ಪುರುಷರನ್ನು ದಿಗ್ಭ್ರಮೆಗೆ ಈಡು ಮಾಡಿತ್ತು. ಇಂದಿಗೂ ಪ್ರಾಣಿಗಳಿಗೆ ಹೆಸರುಗಳ ಬದಲಿಗೆ ಸಂಖ್ಯೆಗಳನ್ನು ನೀಡುವ ಸಂಪ್ರದಾಯ ಚಾಲ್ತಿಯಲ್ಲಿದೆ.
ಅದು ಎಂದು ವಸ್ತುವೆಂಬಂತೆ ನೋಡಲಾಗುತ್ತದೆಯೆ ಹೊರತು, ಲಿಂಗವನ್ನಾಧರಿಸಿ ಅವನು, ಅವಳು ಎನ್ನುವ ಕ್ರಮವಿಲ್ಲ. ಇಂಥದ್ದನ್ನು ಮೀರಹೊರಟ ಜೇನ್ ನಡೆ ಅಪರೂಪದ್ದಾಗಿತ್ತು. ಪ್ರಾಣಿವರ್ತನೆ ಅಧ್ಯಯನಿಸುವವರಿಗೆ ಅವರ ಪಾಠ ದೊಡ್ಡದಿದೆ.
ತಾಳ್ಮೆಯಿಂದ, ಶಾಂತವಾಗಿ ವೀಕ್ಷಿಸುವ, ದೃಢನಿಶ್ಚಯ ಹೊಂದಿರುವ ಮತ್ತು ದೂರವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ.
ಸದ್ದಿಲ್ಲದೆ ಕುಳಿತುಕೊಳ್ಳಿ, ಕೈಯಲ್ಲಿ ನೋಟ್ ಬುಕ್ ಮತ್ತು ಪೆನ್ನು, ಕ್ಯಾಮೆರಾ ಮತ್ತು ಬೈನಾಕ್ಯುಲರ್ ಗಳನ್ನು ಸಿದ್ಧವಾಗಿರಿಸಿಕೊಳ್ಳಿ ಎಂಬ ಅವರ ಸಲಹೆ ಇವತ್ತಿನ ಸೋಷಿಯಲ್ ಮೀಡಿಯಾ ಮೋಹಿಗಳ ಪಾಲಿಗೆ ಅಸಾಧಾರಣವಾದುದು.
ಜೇನ್ ಗುಡಾಲ್ ಅವರು ತಮ್ಮ ರೂಟ್ಸ್ & ಶೂಟ್ಸ್ ಜಾಗತಿಕ ಕಾರ್ಯಕ್ರಮದ ಮೂಲಕ, ಯುವಜನರು ತಮ್ಮದೇ ಆದ ಸಮುದಾಯಗಳಲ್ಲಿ ಬದಲಾವಣೆಗೆ ಯತ್ನಿಸುವ ಒಂದು ಆಂದೋಲನವನ್ನೇ ಕಟ್ಟಿದರು.
ಆಫ್ರಿಕಾದಲ್ಲಿ 1991 ರಲ್ಲಿ ಸಣ್ಣದಾಗಿ ಶುರುವಾಗಿದ್ದ ಅದು ಈಗ 140ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ.
ರೂಟ್ಸ್ & ಶೂಟ್ಸ್, ಯುವಜನರು ತಮ್ಮ ಸಮುದಾಯಗಳಲ್ಲಿನ ಸಮಸ್ಯೆಗಳನ್ನು ಗುರುತಿಸಲು ಮತ್ತು ಅವಕ್ಕೆ ಸಂಬಂಧಿಸಿ ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ.
ಗಿಡ ನೆಡುವುದು, ತ್ಯಾಜ್ಯ ತಗ್ಗಿಸುವುದು ಅಥವಾ ವನ್ಯಜೀವಿ ರಕ್ಷಣೆಯ ಮೂಲಕ ಯುವಜನತೆ ತೊಡಗಿಸಿಕೊಳ್ಳುವಂತೆ ಮಾಡಿದೆ.
ಶ್ರೀಮಂತ ಜೀವವೈವಿಧ್ಯ ಮತ್ತು ವಿಶಿಷ್ಟ ಸ್ಥಳೀಯ ಸಂಸ್ಕೃತಿಗಳಿಂದ ಕೂಡಿದ ಮೇಘಾಲಯದಂಥ ನೆಲದಲ್ಲಿ ಜೇನ್ ಅವರ ತತ್ವ ಬಹಳ ದೊಡ್ಡ ಕೊಡುಗೆ ನೀಡುವಂತಿದೆ.
ಪ್ರಕೃತಿಯೊಂದಿಗೆ ಸಮಯ ಕಳೆದರೆ ಅದು ನಿಮ್ಮ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ ಮತ್ತು ನೀವು ಅದರ ಬಗ್ಗೆ ಕಾಳಜಿ ವಹಿಸುವಂತೆ ಮಾಡುತ್ತದೆ ಎಂಬ ತತ್ವ ಇದೆಲ್ಲದರ ಆಳದಲ್ಲಿದೆ. ಪರಿಸರ ಸಂರಕ್ಷಣೆಯಲ್ಲಿ ಸ್ಥಳೀಯ ಜ್ಞಾನದ ಪಾತ್ರವನ್ನು ಸಮರ್ಥಿಸುವವರಲ್ಲಿ ಅವರೂ ಒಬ್ಬರಾಗಿದ್ದರು.
ಸುಸ್ಥಿರವಾಗಿ ಬದುಕುವುದು ಹೇಗೆ ಎಂಬುದರ ಬಗ್ಗೆ ಆಳವಾದ ತಿಳುವಳಿಕೆ ಪ್ರಕೃತಿಗೆ ಹತ್ತಿರವಿರುವ ಸಮುದಾಯಗಳಲ್ಲಿ ಇರುತ್ತದೆ ಎಂಬುದನ್ನು ಅವರು ಒಪ್ಪಿದ್ದರು. ಅವರ ಈ ನಿಲುವು ಕೂಡ ಕುಲಗಳು ಪೂರ್ವಜರಂತೆ ಕಾಡುಗಳನ್ನು ರಕ್ಷಿಸುವ ಮೇಘಾಲಯದ ಸಂಪ್ರದಾಯಗಳನ್ನೆ ಹೋಲುತ್ತದೆ.
ಸಂರಕ್ಷಣೆ ಎನ್ನುವುದು ಕೇವಲ ಪ್ರಭೇದಗಳನ್ನು ಸಂರಕ್ಷಿಸುವುದಕ್ಕಿಂತಲೂ ಆಚೆಗೆ, ಮಾನವರು ಮತ್ತು ಪ್ರಕೃತಿಯ ನಡುವೆ, ತಲೆಮಾರುಗಳ ನಡುವೆ, ಸಂಪ್ರದಾಯ ಮತ್ತು ಆಧುನಿಕತೆಯ ನಡುವೆ ಸಂಬಂಧಗಳನ್ನು ಪೋಷಿಸುವುದಾಗಿದೆ ಎಂಬುದು ಜೇನ್ ತತ್ವವಾಗಿತ್ತು. ಬದಲಾವಣೆ ಸಾಧ್ಯ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೂ ವಹಿಸಬೇಕಾದ ಪಾತ್ರವಿದೆ ಎಂಬುದು ಅವರ ನಂಬಿಕೆಯಾಗಿತ್ತು.
ಸಣ್ಣ ಸಣ್ಣ ಕೆಲಸವೂ ದೊಡ್ಡ ಬದಲಾವಣೆ ತರುತ್ತದೆ ಎಂಬ ವಿಶ್ವಾಸದ ಹರಿವು ಅವರ ತೊಡಗಿಸಿಕೊಳ್ಳುವಿಕೆಯ ಹಿಂದೆ ಇತ್ತು. ನೀವು ಏನು ಮಾಡುತ್ತೀರಿ ಎಂಬುದು ಲೆಕ್ಕಕ್ಕೆ ಬರುತ್ತದೆ ಮತ್ತು ಯಾವ ರೀತಿಯ ಬದಲಾವಣೆ ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸಬೇಕು ಎಂಬ ಅವರ ಆಶಾವಾದ ಹವಾಮಾನ ಬದಲಾವಣೆ, ಆವಾಸಸ್ಥಾನ ನಷ್ಟ ಮತ್ತು ಜಾತಿಗಳ ಅಳಿವಿನೊಂದಿಗೆ ಹೋರಾಡುತ್ತಿರುವ ಜಗತ್ತಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.
ಡಾ. ಜೇನ್ ಗುಡಾಲ್ ಅವರ ಪರಂಪರೆ ತಾಂಜೇನಿಯಾದಲ್ಲಿ ಅವರೇನು ಮಾಡಿದ್ದಾರೆ ಎನ್ನುವುದಕ್ಕೆ ಮಾತ್ರ ಸೀಮಿತವಾಗದೆ, ಸಸಿ ನೆಟ್ಟ ಪ್ರತಿಯೊಬ್ಬರ ಮೂಲಕವೂ ವಿಸ್ತಾರ ಪಡೆಯುತ್ತದೆ. ಹತಾಶೆಗಿಂತ ಭರವಸೆಯನ್ನು ಆಯ್ಕೆ ಮಾಡುವ ಪ್ರತಿಯೊಂದು ಸಮುದಾಯದಲ್ಲಿ ಅದು ತನ್ನನ್ನು ತಾನು ತೋರಿಸಿಕೊಳ್ಳುತ್ತದೆ. ಮತ್ತು ಇದೆಲ್ಲವೂ ಬಹಳ ಹಿಂದೆಯೇ ಕಾಡಿನಲ್ಲಿ ಚಿಂಪಾಂಜಿಗಳನ್ನು ವೀಕ್ಷಿಸಲು ಮತ್ತು ಅಧ್ಯಯನ ಮಾಡಲು ಕತ್ತಲೆ ತುಂಬಿದ್ದ ಆಫ್ರಿಕನ್ ಮಳೆಕಾಡಿಗೆ ಏಕಾಂಗಿಯಾಗಿ ಹೆಜ್ಜೆ ಹಾಕಲು 26 ವರ್ಷದ ಹುಡುಗಿ ಜೇನ್ ಧೈರ್ಯ ಮಾಡಿದ ಹೊತ್ತಿಂದಲೇ ಶುರುವಾದದ್ದು.
ನಾವು ಪ್ರಕೃತಿಯ ಭಾಗವಾಗಿದ್ದೇವೆ, ಅದರಿಂದ ಹೊರತಾಗಿಲ್ಲ. ಮತ್ತು ಆ ಸತ್ಯದಲ್ಲಿ ಉತ್ತಮ ಭವಿಷ್ಯದ ಭರವಸೆ ಇದೆ ಎಂಬ ಅವರ ನಂಬಿಕೆಗಿಂತ ದೊಡ್ಡದು ಬಹುಶಃ ಬೇರೇನೂ ಇಲ್ಲ.
ಜೇನ್ ಒಬ್ಬ ಸಂರಕ್ಷಣಾವಾದಿಗಿಂತ ಹೆಚ್ಚಾಗಿ, ಎಲ್ಲಾ ಜೀವಗಳಿಗೆ ಸಹಾನುಭೂತಿಯ ದೀಪವಾಗಿದ್ದರು.
ಟ್ರಂಪ್, ಮಸ್ಕ್, ಪುಟಿನ್, ಝೀ ಜಿನ್ ಪಿಂಗ್, ನೆತನ್ಯಾಹುರಂತಹ ಸರ್ವಾಧಿಕಾರಿ ಧೋರಣೆಯ ಪುರುಷರನ್ನು ಹಾಗು ಅವರ ಬಲಪಂಥೀಯ ಸರಕಾರಗಳನ್ನು ಮತ್ತೆ ವಾಪಸ್ ಬಾರದಂತೆ ಬಾಹ್ಯಾಕಾಶಕ್ಕೆ ಕಳಿಸಿಬಿಡಬೇಕು ಎಂದು ಅವರು ಹೇಳಿರುವುದು ಈಗ ಚರ್ಚೆಯಾಗುತ್ತಿದೆ.
ಅವರ ಕೊನೆಯ ಸಂದರ್ಶನದಲ್ಲಿ ರಾಜಕೀಯ ದಬ್ಬಾಳಿಕೆ ಹಾಗು ಹವಾಮಾನ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡುವವರಿಗೆ ಜೇನ್ ಹೇಳಿರುವ ಭರವಸೆಯ ಮಾತುಗಳು ಬಹಳ ಅರ್ಥಪೂರ್ಣವಾಗಿವೆ.
"ಇವತ್ತು, ಈ ಗ್ರಹ ಅಂಧಕಾರದಲ್ಲಿರಬಹುದು, ಆದರೆ ಭರವಸೆ ಬಿಡಬೇಡಿ, ಭರವಸೆ ಬಿಟ್ಟಾಗ ನೀವು ನಿಷ್ಕ್ರಿಯರಾಗುತ್ತೀರಿ. ನೀವು ಈ ಜಗತ್ತಿನಲ್ಲಿ ಸುಂದರವಾಗಿರುವುದನ್ನು ಕಾಪಾಡಲು, ಅದನ್ನು ಮುಂದಿನ ಪೀಳಿಗೆಗಾಗಿ ಉಳಿಸಲು ಬಯಸಿದರೆ, ಇವತ್ತು ನೀವು ಅದಕ್ಕಾಗಿ ಏನು ಮಾಡುತ್ತೀರಿ ಎಂದು ನೋಡಿ. ಮಿಲಿಯಗಟ್ಟಲೆ, ಬಿಲಿಯಗಟ್ಟಲೆ ಬಾರಿ ಅದೇ ಕೆಲಸಕ್ಕಾಗಿ ಶ್ರಮ ಬೀಳುವಾಗ ಒಂದು ಸಣ್ಣ ಕೆಲಸವೂ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ."
ಎಲ್ಲಕ್ಕಿಂತ ಹೆಚ್ಚಾಗಿ ಜೇನ್ ಕಾಡನ್ನು ತೀವ್ರವಾಗಿ ಆಲಿಸಿ, ಅದರ ಧ್ವನಿಗಳನ್ನು ಜಗತ್ತಿಗೆ ವಿವರಿಸಿದ ಅದ್ಭುತ ಕಥೆಗಾರ್ತಿಯಾಗಿ ಸದಾ ನಮ್ಮೊಳಗೆ ಉಳಿಯುತ್ತಾರೆ.







