ಮಂಗಳೂರಿನಲ್ಲಿ ನಡೆದ ವಿಮಾನ ದುರಂತವನ್ನು ನೆನಪಿಸಿದ ಅಹಮದಾಬಾದ್ ವಿಮಾನ ಅವಘಡ
ಮಂಗಳೂರು ವಿಮಾನ ದುರ್ಘಟನೆಯಲ್ಲಿ ಪವಾಡ ಸದೃಶವಾಗಿ ಬದುಕಿ ಬಂದಿದ್ದ ಉಮರ್ ಫಾರೂಕ್

ಮಂಗಳೂರು: ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಗುರುವಾರ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ದುರಂತಕ್ಕೀಡಾದ ವಿಮಾನದಲ್ಲಿ 242 ಪ್ರಯಾಣಿಕರು ಇದ್ದರು. ಏರ್ ಇಂಡಿಯಾಗೆ ಸೇರಿದ AI–171 ವಿಮಾನವು ಗುರುವಾರ ಮಧ್ಯಾಹ್ನ 1.40ರ ಸುಮಾರಿಗೆ ಅಹಮದಾಬಾದ್ ವಿಮಾನನಿಲ್ದಾಣದಿಂದ ಟೇಕ್‌ಆಫ್ ಆಗಿತ್ತು. ಪತನವಾಗುವ ಸಂದರ್ಭದಲ್ಲಿ ವಿಮಾನ ನೆಲಮಟ್ಟದಿಂದ 825 ಅಡಿ ಎತ್ತರದಲ್ಲಿತ್ತು ಎಂದು ವರದಿಯಾಗಿದೆ.
ಈ ಹಿಂದೆ ಮಂಗಳೂರಿನಲ್ಲೂ ಇದೇ ರೀತಿಯ ದುರ್ಘಟನೆ ನಡೆದಿತ್ತು.
2010 ಮೇ 22 ರಂದು ದುಬೈ– ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇನಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ 158 ಪ್ರಯಾಣಿಕರು ಮೃತಪಟ್ಟಿದ್ದರು, ಕೇವಲ 8 ಜನ ಬದುಕುಳಿದಿದ್ದರು.
ಬದುಕುಳಿದ 8 ಮಂದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಉಮರ್ ಫಾರೂಕ್ ಕೂಡ ಒಬ್ಬರು. 2010 ರ ವಿಮಾನ ಅಪಘಾತದದಲ್ಲಿ ಅವರ ಮುಖ ಹಾಗೂ ಕೈ ಬೆಂಕಿಯಿಂದ ಸುಟ್ಟು ಗಾಯವಾಗಿತ್ತು. ಉಮರ್ ಫಾರೂಕ್ ಆ ಭೀಕರ ಮತ್ತು ಕರಾಳ ನೆನಪನ್ನು 'ವಾರ್ತಾಭಾರತಿ'ಯೊಂದಿಗೆ ಗುರುವಾರ ಹಂಚಿಕೊಂಡಿದ್ದಾರೆ.
"ಇವತ್ತಿನ ಘಟನೆ ನನಗೆ 2010 ರ ದುರ್ಘಟನೆಯನ್ನು ನೆನಪಿಸುತ್ತಿದೆ. ಅದನ್ನು ನೆನೆಸಿಕೊಂಡರೆ ಮಾತೇ ಬರುವುದಿಲ್ಲ. ಫ್ಲೈಟ್ ಟೇಕ್ ಆಫ್ ಆಗುವಾಗ ವಿಮಾನ ಸಿಬ್ಬಂದಿ ಹಲವಾರು ಸುರಕ್ಷತಾ ಕ್ರಮಗಳನ್ನು ಹೇಳುತ್ತಾರೆ. ಆದರೆ ಈ ರೀತಿಯ ದುರ್ಘಟನೆ ನಡೆಯುವಾಗ ಅದ್ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ದುರ್ಘಟನೆಯು ತತ್ ಕ್ಷಣ ದಲ್ಲಿ ನಡೆದುಹೋಗುತ್ತದೆ. ಆಗ ನಮಗೆ ರಕ್ಷಣೆ ಸಿಗುವ ಸಾಧ್ಯತೆ ತುಂಬಾ ಕಡಿಮೆಯಿರುತ್ತದೆ.
AI ಯುಗದಲ್ಲೂ ಕೂಡ ಇಂತಹ ದುರ್ಘಟನೆ ನಡೆಯುವುದು ಬಹಳ ಬೇಸರದ ಸಂಗತಿ. ಏವಿಯೇಷನ್ ಸಂಸ್ಥೆಗೆ ಜವಾಬ್ದಾರಿ ಎನ್ನುವುದು ಬೇಕು, ಎಲ್ಲಿ ತಾಂತ್ರಿಕ ದೋಷ ಇದೆ ಎನ್ನುವುದನ್ನು ತಿಳಿದುಕೊಂಡಿರಬೇಕು. ನಾವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ಕನಿಷ್ಠ ಆರು ಬಾರಿ ತಪಾಸಣೆ ಮಾಡುತ್ತಾರೆ. ಆದರೆ ನೂರಾರು ಜನರನ್ನ ಹೊತ್ತುಕೊಂಡು ಹೋಗುವ ವಿಮಾನವನ್ನು ಟೇಕ್ ಆಫ್ ಮಾಡುವಾಗ ಬೇಜವಾಬ್ದಾರಿ ತೋರಿಸುವುದು ಸರಿಯಲ್ಲ. ನನ್ನ ಪ್ರಕಾರ ಇದು ಸಿಬ್ಬಂದಿಯವರ ಬೇಜವಾಬ್ದಾರಿಯಿಂದ ನಡೆದ ದುರ್ಘಟನೆ. ಇದಕ್ಕೆ ಸರಿಯಾದ ತನಿಖೆ ನಡೆದು ವರದಿ ಬರಬೇಕು ಎಂದು ಉಮರ್ ಫಾರೂಕ್ ಹೇಳಿದ್ದಾರೆ.
►2010 ರ ದುರ್ಘಟನೆಯಲ್ಲಿ ನಾವು ಬಹಳ ಹೋರಾಡಿದ್ದೇವೆ, ಅದೊಂದು ಕರಾಳ ದಿನ:
ವಿಮಾನ ಲ್ಯಾಂಡ್ ಆಗುವ 15 ನಿಮಿಷಕ್ಕೂ ಮೊದಲು ನಾವೆಲ್ಲಾ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗುತ್ತೇವೆ ಎಂದು ಪೈಲಟ್ ಮಾಹಿತಿಯನ್ನು ನೀಡಿದ್ದರು. ಲ್ಯಾಂಡ್ ಆಗುವ ಸಮಯದಲ್ಲಿಯೇ ನೆಲಕ್ಕೆ ಅಪ್ಪಳಿಸಿದ ಹಾಗೆ ಅನಿಸಿತು, ಎಲ್ಲವೂ ಎರಡು ನಿಮಿಷದ ಒಳಗೆ ನಡೆಯಿತು. ದೇವರ ಕೃಪೆಯಿಂದ ಘಟನೆಯಲ್ಲಿ ನಾವು ಕೆಲವರು ಪಾರಾದೆವು. ಘಟನೆ ನಡೆಯುವ ಸಂಧರ್ಭದಲ್ಲಿ ವಿಮಾನದ ರೆಕ್ಕೆ ಮರಗಳಿಗೆ ಬಡಿದು ವಿಮಾನ ಒಡೆದು ಹೋಯಿತು, ಅದರ ಮೂಲಕ ನಾವು ಎಂಟು ಮಂದಿ ಹೊರಗೆ ಬಿದ್ದು ಬದುಕುಳಿದೆವು. ಉಳಿದವರಿಗೆ ಇದು ಸಾಧ್ಯವಾಗಲಿಲ್ಲ . ಏಕೆಂದರೆ ಬೆಂಕಿಯಿಂದಾಗಿ ವಿಮಾನದ ಒಳಗೆ ಸಂಪೂರ್ಣ ಹೊಗೆ ಆವರಿಸಿತ್ತು, ಏನೂ ಕಾಣಿಸುತ್ತಿರಲಿಲ್ಲ, ಉಸಿರುಕಟ್ಟಿ ಜೀವ ಹೋದವರ ಸಂಖ್ಯೆಯೇ ಹೆಚ್ಚು. ಸ್ಥಳೀಯರು ಬಂದು ಸಹಾಯಕ್ಕೆ ಪ್ರಯತ್ನಿಸಿದರೂ ಉಳಿದವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. 158 ಜನರು ಆ ಘಟನೆಯಲ್ಲಿ ಜೀವ ಕಳೆದುಕೊಂಡರು. ಅದೊಂದು ಕರಾಳ ದಿನವಾಗಿತ್ತು. ಆ ಘಟನೆ ಇನ್ನು ನನ್ನ ಮನಸ್ಸಿನಿಂದ ಮಾಸಿಲ್ಲ. ಅದರ ನಡುವೆಯೇ ಈ ದುರ್ಘಟನೆ ನಡೆದಿದೆ. ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುವುದು ನನ್ನ ಕೋರಿಕೆ ಎಂದು ಉಮರ್ ಫಾರೂಕ್ ಹೇಳಿದ್ದಾರೆ.
►ವಿಮಾನದಲ್ಲಿ ಪ್ರಯಾಣಿಸುವಾಗ ಭಯವಾಗುತ್ತದೆ:
ಮನಸ್ಸಿನಲ್ಲಿ ಆ ಘಟನೆ ಅಚ್ಚಳಿಯದೆ ಉಳಿದಿದೆ. ಕೆಲವು ಭಾರತೀಯ ವಿಮಾನಗಳಲ್ಲಿ ಪ್ರಯಾಣಿಸುವಾಗ ಅದರ ಸುಸ್ಥಿತಿ ಅಷ್ಟಾಗಿ ತೃಪ್ತಿದಾಯಕವಾಗಿರುವುದಿಲ್ಲ. ಹಾಗಾಗಿ ನಮ್ಮ ಪ್ರಾಣಕ್ಕೆ ಬೆಲೆ ಕೊಟ್ಟು ಒಳ್ಳೆಯ ವಿಮಾನ ನೋಡಿ ಪ್ರಯಾಣಿಸುವ ಪರಿಸ್ಥಿತಿ ನಮಗೆ ಬಂದಿದೆ. ಪ್ರಾಕೃತಿಕ ವಿಕೋಪದಿಂದ ವಿಮಾನ ಅಪಘಾತವಾಗುವುದಕ್ಕೂ, ತಾಂತ್ರಿಕ ದೋಷದಿಂದ ವಿಮಾನ ಅಪಘಾತವಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ತಾಂತ್ರಿಕ ದೋಷದಿಂದ ವಿಮಾನ ಅಪಘಾತವಾಗುವುದು ಬೇಜವಾಬ್ದಾರಿಯಿಂದ ಎಂದು ಉಮರ್ ಫಾರೂಕ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಉಮರ್ ಫಾರೂಕ್ ಸದ್ಯ ಮಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಉದ್ಯೋಗ ಮಾಡುತ್ತಿದ್ದಾರೆ.