ಅಮೆರಿಕಾ ಸರಕಾರ ಶಟ್ ಡೌನ್! ; ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೇ ಇಲ್ಲ

ಡೊನಾಲ್ಡ್ ಟ್ರಂಪ್ | Photo Credit : NDTV
ಅಮೇರಿಕದಂತಹ ಅಮೇರಿಕಾದಲ್ಲೇ ಒಂದು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೇ ಇಲ್ಲದಂತಾದರೆ ಹೇಗಾಗಬಹುದು? ಅಮೆರಿಕಾದಲ್ಲಿ ನಡೆಯುತ್ತಿರುವ ಸರಕಾರಿ ಶಟ್ಡೌನ್ ನಿಂದಾಗಿ ವಿಮಾನ ನಿಲ್ದಾಣವೊಂದಲ್ಲಿ ಸಿಬ್ಬಂದಿ ಇಲ್ಲದೇ ಕೆಲಕಾಲ ವಿಮಾನ ಹಾರಾಟ ಸ್ಥಗಿತಗೊಂಡ ಘಟನೆ ವರದಿಯಾಗಿದೆ.
ಅಮೆರಿಕಾದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನ ಹಾಲಿವುಡ್ ಬರ್ಬ್ಯಾಂಕ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುಮಾರು ಆರು ಗಂಟೆಗಳ ಕಾಲ ಏರ್ಪೋರ್ಟ್ನ ಪ್ರಮುಖ ಕಂಟ್ರೋಲ್ ಟವರ್ನ ಲ್ಲಿ ಒಬ್ಬನೇ ಒಬ್ಬ ಸಿಬ್ಬಂದಿ ಇರಲಿಲ್ಲ.
ಸೋಮವಾರ ಸಂಜೆ 4 ಗಂಟೆ 15 ನಿಮಿಷದಿಂದ ರಾತ್ರಿ 10 ಗಂಟೆವರೆಗೂ ಈ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ಖಾಲಿ ಇತ್ತು. ಕೇಂದ್ರ ಸರ್ಕಾರದಿಂದ ಸಂಬಳ ಸಿಗುತ್ತಿಲ್ಲ ಅನ್ನೋ ಕಾರಣಕ್ಕೆ ಸಾಕಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ.
ಇದರಿಂದ ಬರ್ಬ್ಯಾಂಕ್ ಏರ್ಪೋರ್ಟ್ನಿಂದ ಹೊರಡಬೇಕಿದ್ದ ವಿಮಾನಗಳು ಎರಡು ಗಂಟೆಗೂ ಹೆಚ್ಚು ವಿಳಂಬವಾದವು
► ಅಮೆರಿಕಾದಲ್ಲಿ 'ಶಟ್ಡೌನ್' ಉಂಟಾಗಲು ಕಾರಣವೇನು?
ಅಮೆರಿಕಾದಲ್ಲಿ ಈ ಸಮಸ್ಯೆ ಉಂಟಾಗಲು ಮೂಲ ಕಾರಣ ಹಣಕಾಸಿನ ಮಸೂದೆಗೆ ಒಪ್ಪಿಗೆ ಸಿಗದೇ ಇರುವುದು. ಪ್ರತಿ ವರ್ಷ ಅಕ್ಟೋಬರ್ 1 ರಿಂದ ಅಮೆರಿಕಾದಲ್ಲಿ ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತದೆ. ಅದಕ್ಕೂ ಮೊದಲು, ಸರ್ಕಾರವನ್ನು ಮುಂದುವರಿಸಲು ಅಗತ್ಯವಿರುವ ಹಣಕಾಸು ಮಸೂದೆಯನ್ನು ಅಲ್ಲಿನ ಸೆನೆಟ್ ಅನುಮೋದಿಸಬೇಕು ಮತ್ತು ಅಧ್ಯಕ್ಷರು ಸಹಿ ಹಾಕಬೇಕು.
ಆದರೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಮತ್ತು ವಿಪಕ್ಷ ಡೆಮೋಕ್ರಾಟ್ ಪಕ್ಷದ ನಡುವೆ ವೆಚ್ಚದ ಮಸೂದೆಗೆ ಸಂಬಂಧಿಸಿದಂತೆ ಒಪ್ಪಂದ ಸಾಧ್ಯವಾಗಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಹಣ ಒದಗಿಸುವ ಯಾವುದೇ ಮಸೂದೆ ಪಾಸ್ ಆಗಲಿಲ್ಲ. ಪರಿಣಾಮವಾಗಿ, ಫೆಡರಲ್ ಸರ್ಕಾರಕ್ಕೆ ಹಣಕಾಸು ಸಂಪೂರ್ಣವಾಗಿ ನಿಂತುಹೋಯಿತು, ಇದರಿಂದಾಗಿ ಶಟ್ ಡೌನ್ ಅಂದರೆ ಸ್ಥಗಿತ ಘೋಷಣೆಯಾಯಿತು.
ಒಂದು ಕಡೆ ಅಧ್ಯಕ್ಷ ಟ್ರಂಪ್ ಅಮೇರಿಕಾದ ಸ್ಟಾಕ್ ಮಾರ್ಕೆಟ್ ಅದ್ಭುತ ನೆಗೆತ ಕಂಡಿದೆ, ಆರ್ಥಿಕತೆ ಇನ್ನಿಲ್ಲದ ಬೆಳವಣಿಗೆ ಕಂಡಿದೆ ಎನ್ನುತ್ತಿರುವಾಗಲೇ ಅಲ್ಲಿನ ಇಡೀ ಸರಕಾರಿ ಯಂತ್ರ ಸ್ಥಗಿತಗೊಂಡಿರುವುದು ವಿಪರ್ಯಾಸ
ಅಮೆರಿಕಾದಲ್ಲಿ ಸರ್ಕಾರಿ ಶಟ್ಡೌನ್ ಸಂದರ್ಭದಲ್ಲಿ ಅಗತ್ಯವಲ್ಲದ ಸರ್ಕಾರಿ ನೌಕರರನ್ನು ರಜೆ ಮೇಲೆ ಮನೆಗೆ ಕಳುಹಿಸಲಾಗುತ್ತದೆ. ಆದರೆ, ವಾಯು ಸಂಚಾರ ನಿಯಂತ್ರಣ, ಗಡಿ ಭದ್ರತೆ ಮತ್ತು ಸೇನಾ ಸಿಬ್ಬಂದಿ ಮುಂತಾದ ಅಗತ್ಯ ಸೇವೆಗಳ ನೌಕರರನ್ನು ಕೆಲಸಕ್ಕೆ ಬರುವಂತೆ ಕೇಳಲಾಗುತ್ತದೆ. ಆದರೆ ಅವರಿಗೆ ಸದ್ಯಕ್ಕೆ ಸಂಬಳ ನೀಡುವುದಿಲ್ಲ. ಅವರಿಗೆ ಶಟ್ ಡೌನ್ ಮುಗಿದ ನಂತರವೇ ವೇತನ ಸಿಗುತ್ತದೆ.
ಸಂಬಳವಿಲ್ಲದ ಅನೇಕ ನೌಕರರು ಆರ್ಥಿಕ ಸಂಕಷ್ಟದಿಂದಾಗಿ ಕೆಲಸಕ್ಕೆ ಬರಲು ಸಾಧ್ಯವಾಗದಿರುವುದೇ ಅಮೆರಿಕ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಕೊರತೆಗೆ ಕಾರಣವಾಗಿದೆ.







