ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಏಕದಿನ ತಂಡ ಪ್ರಕಟ; ಶುಭಮನ್ ಗಿಲ್ ಗೆ ಏಕದಿನ ನಾಯಕತ್ವ

Photo credit: PTI
ಹೊಸದಿಲ್ಲಿ, ಅ.4: ಆಸ್ಟ್ರೇಲಿಯ ಕ್ರಿಕೆಟ್ ತಂಡದ ವಿರುದ್ಧ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ-20 ಸರಣಿಗಳಿಗಾಗಿ ಬಿಸಿಸಿಐ ಶನಿವಾರ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಈ ವರ್ಷಾರಂಭದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿ ಆಡಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಹುನಿರೀಕ್ಷಿತ ಪುನರಾಗಮನ ಮಾಡಿದ್ದಾರೆ. 2024ರ ಟಿ-20 ವಿಶ್ವಕಪ್ ನಂತರ ಈ ಇಬ್ಬರು ಟಿ-20 ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಪ್ರಕಟಿಸಿದ್ದರು. ಈ ಇಬ್ಬರ ಪುನರಾಗಮನದಿಂದ ಭಾರತ ತಂಡಕ್ಕೆ ಮತ್ತಷ್ಟು ಬಲ ಬಂದಿದೆ.
ಶುಭಮನ್ ಗಿಲ್ಗೆ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಾಗಿದ್ದು, ಶ್ರೇಯಸ್ ಅಯ್ಯರ್ಗೆ ಉಪ ನಾಯಕನ ಸ್ಥಾನ ನೀಡಲಾಗಿದೆ.
ಧ್ರುವ ಜುರೆಲ್ ಅವರು ಕೆ.ಎಲ್.ರಾಹುಲ್ ಅವರೊಂದಿಗೆ 2ನೇ ವಿಕೆಟ್ ಕೀಪರ್ ಆಗಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜುರೆಲ್ ವೆಸ್ಟ್ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದು, ಅವರು ಇನ್ನಷ್ಟೇ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಕಾಲಿಡಬೇಕಾಗಿದೆ.
ರಿಷಭ್ ಪಂತ್ ಗಾಯಗೊಂಡಿರುವ ಕಾರಣ ಸಂಜು ಸ್ಯಾಮ್ಸನ್ ಮೀಸಲು ಕೀಪರ್ ಆಗಿ ಆಯ್ಕೆಯಾಗುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸ್ಯಾಮ್ಸನ್ ಬದಲಿಗೆ ಜುರೆಲ್ಗೆ ಮಣೆ ಹಾಕಿದೆ.
ಸ್ಯಾಮ್ಸನ್ ಅವರು ಟಿ-20 ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. ಏಶ್ಯ ಕಪ್ನಲ್ಲಿ ಶುಭಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದಾಗ ಸ್ಯಾಮ್ಸನ್ಗೆ ಮಧ್ಯಮ ಸರದಿಯಲ್ಲಿ ಬ್ಯಾಟ್ ಮಾಡುವಂತೆ ತಿಳಿಸಲಾಗಿತ್ತು. ಪಾಕಿಸ್ತಾನದ ವಿರುದ್ಧ ಏಶ್ಯ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು 20 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ತಿಲಕ್ ವರ್ಮಾ ಜೊತೆ 50 ರನ್ ಸೇರಿಸಿದ್ದ ಸ್ಯಾಮ್ಸನ್ ನಿರ್ಣಾಯಕ ಕೊಡುಗೆ ನೀಡಿದ್ದರು. ಏಶ್ಯ ಕಪ್ನಲ್ಲಿ ಒಟ್ಟು 132 ರನ್ ಗಳಿಸಿದ್ದರು.
ಏಕದಿನ ಕ್ರಿಕೆಟ್ನಲ್ಲಿ ಸ್ಯಾಮ್ಸನ್ ಆಡಿರುವ 16 ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 510 ರನ್ ಗಳಿಸಿದ್ದು, ಇದರಲ್ಲಿ 3 ಅರ್ಧಶತಕ ಹಾಗೂ ಒಂದು ಶತಕ ಸೇರಿವೆ. ದಕ್ಷಿಣ ಆಫ್ರಿಕಾದ ವಿರುದ್ಧ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು.
ಏಕದಿನ ಸರಣಿಯು ಅಕ್ಟೋಬರ್ 19ರಂದು ಪರ್ತ್ನಲ್ಲಿ ಆರಂಭವಾಗಲಿದೆ. ಆ ನಂತರ ಅ.23 ಹಾಗೂ 25ರಂದು ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ಇನ್ನೆರಡು ಏಕದಿನ ಪಂದ್ಯಗಳು ನಡೆಯಲಿವೆ. 5 ಪಂದ್ಯಗಳ ಟಿ-20 ಸರಣಿಯು ಅ.29ರಿಂದ ನವೆಂಬರ್ 8ರ ತನಕ ಸಾಗಲಿದೆ. ಅ.31ರಂದು 2ನೇ, ನ.2ರಂದು 3ನೇ, ನ.6ರಂದು 4ನೇ ಹಾಗೂ ನ.8ರಂದು ಕೊನೆಯ ಪಂದ್ಯ ನಡೆಯಲಿದೆ.
ಭಾರತ ತಂಡವು 2020-21ರಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನಾಡಲು ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದಾಗ 1-2 ಅಂತರದಿಂದ ಸೋತಿತ್ತು. ಆದರೆ, ಆ ನಂತರ ನಂತರ ಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.
► ಭಾರತದ ಏಕದಿನ ತಂಡ: ಶುಭಮನ್ ಗಿಲ್(ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್(ಉಪ ನಾಯಕ), ಅಕ್ಷರ್ ಪಟೇಲ್, ಕೆ.ಎಲ್.ರಾಹುಲ್(ವಿಕೆಟ್ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಶಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮುಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಧ್ರುವ ಜುರೆಲ್(ವಿಕೆಟ್ಕೀಪರ್), ಯಶಸ್ವಿ ಜೈಸ್ವಾಲ್.
► ಭಾರತದ ಟಿ-20 ತಂಡ: ಸೂರ್ಯಕುಮಾರ್ ಯಾದವ್(ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್(ಉಪ ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ(ವಿಕೆಟ್ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರಿತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್(ವಿಕೆಟ್ಕೀಪರ್), ರಿಂಕು ಸಿಂಗ್, ವಾಶಿಂಗ್ಟನ್ ಸುಂದರ್.
► ಮುಹಮ್ಮದ್ ಶಮಿ, ರವೀಂದ್ರ ಜಡೇಜಗೆ ಅವಕಾಶ ಇಲ್ಲ
ಹಿರಿಯ ಪುರುಷರ ಆಯ್ಕೆ ಸಮಿತಿಯು ಶನಿವಾರ ಆಸ್ಟ್ರೇಲಿಯ ವಿರುದ್ಧದ ಮುಂಬರುವ ದ್ವಿಪಕ್ಷೀಯ ಸರಣಿಗೆ ಏಕದಿನ ತಂಡವನ್ನು ಪ್ರಕಟಿಸಿದ್ದು, ರೋಹಿತ್ ಶರ್ಮಾ ಬದಲಿಗೆ ಶುಭಮನ್ ಗಿಲ್ ಏಕದಿನ ಕ್ರಿಕೆಟಿಗನ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯ ತಂಡದ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದರೆ, ಭಾರತದ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಸದಸ್ಯರಾಗಿದ್ದ ರವೀಂದ್ರ ಜಡೇಜ ಹಾಗೂ ಮುಹಮ್ಮದ್ ಶಮಿ ಅವರ ಮುಂದಿನ ಹಾದಿ ಮುಚ್ಚಲ್ಪಟ್ಟಂತೆ ಕಂಡುಬಂದಿದೆ.
ವೆಸ್ಟ್ಇಂಡೀಸ್ ವಿರುದ್ಧ ಈಗ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಪ ನಾಯಕನಾಗಿ ನೇಮಕಗೊಂಡಿದ್ದ ಜಡೇಜ ಅವರು ತನ್ನ ಆಲ್ರೌಂಡ್ ಪ್ರದರ್ಶನಕ್ಕಾಗಿ ‘ಪಂದ್ಯಶ್ರೇಷ್ಠ ’ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಮಿ ಅವರು ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ನನ್ನ ಪ್ರಕಾರ ಬಂಗಾಳದ ಪರ ಒಂದು ಪಂದ್ಯ ಹಾಗೂ ದುಲೀಪ್ ಟ್ರೋಫಿಯಲ್ಲಿ ಒಂದು ಪಂದ್ಯ ಆಡಿದ್ದಾರೆ. ಅವರ ಸಾಮರ್ಥ್ಯ ನಮಗೆ ತಿಳಿದಿದೆ. ಭಾರತ ತಂಡಕ್ಕೆ ವಾಪಸಾಗಲು ಇನ್ನಷ್ಟು ದೇಶೀಯ ಪಂದ್ಯಗಳನ್ನು ಆಡುವ ಅಗತ್ಯವಿದೆ ಎಂದು ಕಳೆದ ತಿಂಗಳು ಏಶ್ಯ ಕಪ್ ತಂಡದ ಪ್ರಕಟಿಸುವಾಗ ಅಗರ್ಕರ್ ಹೇಳಿದ್ದರು.







