ಟಾಟಾ ಸ್ಟೀಲ್ ಮಾಸ್ಟರ್ಸ್: ಗುಕೇಶ್, ಎರಿಗೈಸಿಗೆ ಸೋಲು

Photo Credit: Lennart Ootes/FIDE
ಚೆನ್ನೈ, ಜ. 25: ನೆದರ್ಲ್ಯಾಂಡ್ಸ್ನ ವಿಜ್ಕ್ ಆನ್ ಝೀಯಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಮಾಸ್ಟರ್ಸ್ 2026 ಚೆಸ್ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ಶನಿವಾರ ಭಾರತೀಯ ಆಟಗಾರರು ಕಠಿಣ ಸವಾಲು ಎದುರಿಸಿದ್ದು, ಮೂವರು ಸೋಲು ಅನುಭವಿಸಿದರು.
ವಿಶ್ವ ಚಾಂಪಿಯನ್ ಡಿ. ಗುಕೇಶ್ ಸತತ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿ ತೀವ್ರ ಹಿನ್ನಡೆ ಅನುಭವಿಸಿದರು. ಅವರನ್ನು ರಷ್ಯಾ–ಡಚ್ ಆಟಗಾರ ಅನೀಶ್ ಗಿರಿ ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಸ್ಥಳೀಯ ಹೀರೋ ಗ್ರ್ಯಾಂಡ್ಮಾಸ್ಟರ್ ಜೊರ್ಡನ್ ವಾನ್ ಫೊರೀಸ್ಟ್, ಭಾರತೀಯ ಗ್ರ್ಯಾಂಡ್ಮಾಸ್ಟರ್ ಅರವಿಂದ್ ಚಿದಂಬರಂ ಅವರನ್ನು ಸೋಲಿಸಿದರು.
ಇನ್ನೊಂದು ಏಳನೇ ಸುತ್ತಿನ ಪಂದ್ಯದಲ್ಲಿ ಭಾರತೀಯ ಅರ್ಜುನ್ ಎರಿಗೈಸಿಯನ್ನು ತುರ್ಕಿಯದ 14 ವರ್ಷದ ಗ್ರ್ಯಾಂಡ್ಮಾಸ್ಟರ್ ಯಾಗಿಝ್ ಕಾನ್ ಎರ್ಡೊಗ್ಮಸ್ ಸೋಲಿಸಿದರು. ಈ ಮೂಲಕ ಎರ್ಡೊಗ್ಮಸ್ ಸತತ ಎರಡನೇ ಪಂದ್ಯವನ್ನು ಗೆದ್ದರು.
ಅದೇ ವೇಳೆ, ಇನ್ನೋರ್ವ ಭಾರತೀಯ ಆರ್. ಪ್ರಜ್ಞಾನಂದ ಜರ್ಮನಿಯ ಗ್ರ್ಯಾಂಡ್ಮಾಸ್ಟರ್ ಮಥಾಯಸ್ ಬ್ಲೂಬಾಮ್ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿದರು.
ಉಜ್ಬೆಕಿಸ್ತಾನದ ನೊಡಿರ್ಬೆಕ್ ಅಬ್ದುಸತ್ತಾರೊವ್ ಜರ್ಮನಿಯ ವಿನ್ಸೆಂಟ್ ಕೇಮರ್ ಅವರನ್ನು ಸೋಲಿಸಿ ತಮ್ಮ ಮುನ್ನಡೆಯನ್ನು ಒಂದು ಅಂಕದಿಂದ ವಿಸ್ತರಿಸಿದರು. ಈಗ ಅವರು 5.5 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಉಜ್ಬೆಕಿಸ್ತಾನದ ಜವೊಖಿರ್ ಸಿಂಡ್ರೋವ್ 4.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಗುಕೇಶ್ ಮತ್ತು ಎರಿಗೈಸಿ ತಲಾ ಮೂರು ಅಂಕಗಳೊಂದಿಗೆ ಜಂಟಿ ಐದನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ 2.5 ಅಂಕಗಳೊಂದಿಗೆ ಜಂಟಿ ಆರನೇ ಸ್ಥಾನ ಪಡೆದಿದ್ದಾರೆ. ಚಿದಂಬರಂ ಎರಡು ಅಂಕಗಳೊಂದಿಗೆ ಅಂಕಪಟ್ಟಿಯ ತಳದಲ್ಲಿದ್ದಾರೆ.







