ಅಶ್ವಿನ್ ತನ್ನ 100ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕತ್ವ ವಹಿಸಬೇಕು ಎಂದ ಗವಾಸ್ಕರ್

ರವಿಚಂದ್ರನ್ ಅಶ್ವಿನ್ | Photo: PTI
ಹೊಸದಿಲ್ಲಿ: ಧರ್ಮಶಾಲಾದಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ತನ್ನ 100ನೇ ಪಂದ್ಯವನ್ನು ಆಡಲಿರುವ ಆರ್.ಅಶ್ವಿನ್ ಭಾರತ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಬೇಕು. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಿರಿಯ ಆಫ್ ಸ್ಪಿನ್ನರ್ಗೆ ಆ ಪಂದ್ಯದಲ್ಲಿ ನಾಯಕತ್ವದ ಹೊಣೆಗಾರಿಕೆಯನ್ನು ನೀಡಬೇಕು ಲೆಜೆಂಡರಿ ಬ್ಯಾಟರ್ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
ಅಶ್ವಿನ್ ಪ್ರಸ್ತುತ ರಾಂಚಿಯಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದು ಇದು ಅವರ 99ನೇ ಟೆಸ್ಟ್ ಪಂದ್ಯವಾಗಿದೆ. 2ನೇ ಇನಿಂಗ್ಸ್ನಲ್ಲಿ 51 ರನ್ಗೆ 5 ವಿಕೆಟ್ ಪಡೆದಿರುವ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 35ನೇ ಬಾರಿ ಈ ಸಾಧನೆ ಮಾಡಿದ್ದಾರೆ.
ಭಾರತ ನಾಳೆ ಪಂದ್ಯವನ್ನು ಗೆಲ್ಲಲಿದೆ. 5ನೇ ಪಂದ್ಯ ಆಡಲು ಧರ್ಮಶಾಲಾಕ್ಕೆ ಹೋದಾಗ ರೋಹಿತ್ ನಿಮಗೆ ತಂಡವನ್ನು ಮುನ್ನಡೆಸುವ ಅವಕಾಶ ನೀಡುತ್ತಾರೆಂಬ ವಿಶ್ವಾಸ ನನಗಿದೆ. ಇದೊಂದು ಅದ್ಭುತ ನಡವಳಿಕೆಯಾಗಲಿದೆ. ಭಾರತೀಯ ಕ್ರಿಕೆಟಿಗೆ ನೀವು ನೀಡಿರುವ ಕೊಡುಗೆಗೆ ಗೌರವ ಸೂಚಕ ಇದಾಗಲಿದೆ ಎಂದು ಅಶ್ವಿನ್ರೊಂದಿಗೆ ಮಾತನಾಡುತ್ತಾ ಗವಾಸ್ಕರ್ ಹೇಳಿದರು.





