ದಕ್ಷಿಣ ಆಫ್ರಿಕಾಕ್ಕೆ 212 ರನ್ ಗಳ ಗುರಿ ನೀಡಿದ ಭಾರತ

Photo : x/@bcci
ಸೈಂಟ್ ಜಾರ್ಜ್ ಪಾರ್ಕ್ : ಇಲ್ಲಿನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 46.2 ಓವರ್ ಗಳಲ್ಲಿ 211 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ಭಾರತ ತಂಡದ ಮೇಲೆ ಹಿಡಿತ ಸಾಧಿಸಿತು. ಋತುರಾಜ್ ಋತ್ರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್ ನ ಎರಡನೇ ಎಸೆತದಲ್ಲಿ ನಾಂದ್ರೆ ಬರ್ಗರ್ ಅವರು ಋತ್ರಾಜ್ ಗಾಯಕ್ವಾಡ್ ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಭಾರತ ತಂಡದ ಮೊದಲ ವಿಕೆಟ್ ಪಡೆದರು. ಕೇವಲ 4 ರನ್ ಭಾರತ ತಂಡದ ಖಾತೆಯಲ್ಲಿದ್ದಾಗ ಉದುರಿದ ಮೊದಲ ವಿಕೆಟ್ ತಂಡಕ್ಕೆ ಆಘಾತ ನೀಡಿತು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ತಿಲಕ್ ವರ್ಮಾ, ಸಾಯಿ ಸುದರ್ಶನ್ ಜೊತೆಗೂಡಿ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. 30 ಎಸೆತಗಳಲ್ಲಿ 10 ರನ್ ಗಳಿಸಿದ ತಿಲಕ್ 11.1 ಓವರ್ ನಲ್ಲಿ ನಾಂದ್ರೆ ಬರ್ಗರ್ ಎಸೆತದಲ್ಲಿ ಬ್ಯೂರಾನ್ ಹೆಂಡ್ರಿಕ್ಸ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ನಾಯ ಕೆ ಎಲ್ ರಾಹುಲ್, ಸಾಯಿ ಸುದರ್ಶನ್ ಜೊತೆಗೂಡಿ ತಂಡದ ಕುಸಿತ ತಪ್ಪಿಸಲು ಪ್ರಯತ್ನಿಸಿದರು.
ತಮ್ಮ ಎರಡನೇ ಅಂತರರಾಷ್ಟ್ರೀಯ ಪಂದ್ಯವಾಡುತ್ತಿರುವ ಸಾಯಿ ಸುದರ್ಶನ್ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಉತ್ತಮ ಆಟ ಪ್ರದರ್ಶಿಸಿದರು. 83 ಎಸೆತ ಎದುರಿಸಿದ ಅವರು 7 ಬೌಂಡರಿಗಳೊಂದಿಗೆ 1 ಸಿಕ್ಸರ್ ಬಾರಿಸಿ 62 ರನ್ ಗಳಿಸಿದರು. ಕೆ ಎಲ್ ರಾಹುಲ್ 64 ಎಸೆತ ಎದುರಿಸಿ 7 ಬೌಂಡರಿಗಳೊಂದಿಗೆ 56 ರನ್ ಗಳಿಸಿದರು.
ಅವರಿಬ್ಬರನ್ನು ಹೊರತು ಪಡಿಸಿ ಭಾರತದ ಪರ ಬೇರೆ ಯಾವ ಬ್ಯಾಟರ್ ಗಳು 20 ರ ಗಡಿ ದಾಟಲಿಲ್ಲ. ಸಂಜು ಸ್ಯಾಮ್ಸನ್ 12, ರಿಂಕು ಸಿಂಗ್ 17, ಅಕ್ಸರ್ ಪಟೇಲ್ 7, ಕುಲ್ ದೀಪ್ ಯಾದವ್ 1, ಅರ್ಶದೀಪ್ ಸಿಂಗ್ 18, ಅವೇಶ್ ಖಾನ್ 4 ರನ್ ಗಳಿಸಿದರು. ಮುಖೇಶ್ ಕುಮಾರ್ 4 ರನ್ ಗಳಿಸಿ ಅಜೇಯರಾಗಿ ಉಳಿದರು.
ಒಂದು ಹಂತದಲ್ಲಿ 172 ರನ್ ಗೆ 7 ವಿಕೆಟ್ ಗಳಿಸಿದ್ದ ಭಾರತ ತಂಡ 200 ರ ಗಡಿ ದಾಟವುದು ಕಷ್ಟ ಸಾಧ್ಯ ಎನಿಸಿದಾಗ ಭಾರತದ ಬೌಲರ್ ಗಳು ಬ್ಯಾಟ್ ಬೀಸಿ 200 ರ ಗಡಿ ದಾಟಿಸಿದರು.
ಉತ್ತಮ ಬೌಲಿಂಗ್ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ ಭಾರತದ ಬ್ಯಾಟರ್ ಗಳು ರನ್ ಗಳಿಸಲು ಪರದಾಡುವಂತೆ ಮಾಡಿದರು. ದಕ್ಷಿಣ ಆಫ್ರಿಕಾ ಪರ ನಾಂದ್ರೆ ಬರ್ಗರ್ 3 ವಿಕೆಟ್ ಗಳಿಸಿದರು. ಒಂದು ಮೇಡನ್ ಓವರ್ ಮಾಡಿದ ಬ್ಯೂರಾನ್ ಹೆಂಡ್ರಿಕ್ಸ್ 2 ವಿಕೆಟ್ ಪಡೆದರು. ಲಿಝ್ಝಾಡ್ ವಿಲಿಯಮ್ಸ್ ಒಂದು ಮೇಡನ್ ಓವರ್ ಜೊತೆಗೆ ಒಂದು ವಿಕೆಟ್ ಪಡೆದರು. ಕೇಶವ್ ಮಹರಾಜ್ 2, ಆಡನ್ ಮಾರ್ಕ್ರಮ್ 1 ವಿಕೆಟ್ ಪಡೆದರು.







