ಮಹಿಳೆಯರ 3ನೇ ಟಿ-20 ಪಂದ್ಯ | ಬ್ಯಾಟಿಂಗ್ ಕುಸಿತ ಕಂಡರೂ ಭಾರತ ವಿರುದ್ಧ ಗೆದ್ದ ಇಂಗ್ಲೆಂಡ್

Photo Credit: Reuters
ಲಂಡನ್: ಇಂಗ್ಲೆಂಡ್ ಮಹಿಳೆಯರ ಕ್ರಿಕೆಟ್ ತಂಡವು ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ನಿರ್ಣಾಯಕ 5 ರನ್ ಅಂತರದಿಂದ ಜಯ ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ. ಸದ್ಯ ಭಾರತ ತಂಡವು ಸರಣಿಯಲ್ಲಿ 2-1ರಿಂದ ಮುನ್ನಡೆಯಲ್ಲಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 25 ಎಸೆತಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು ಭಾರೀ ಕುಸಿತ ಕಂಡಿತ್ತು. ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 300 ವಿಕೆಟ್ ಗಳ ಮೈಲಿಗಲ್ಲು ತಲುಪಿದರು. ಈ ಸಾಧನೆ ಮಾಡಿದ ಆರನೇ ಮಹಿಳಾ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾದರು.
ಸೋಫಿಯಾ ಡಂಕ್ಲೆ (75 ರನ್, 53 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಡ್ಯಾನಿ ವ್ಯಾಟ್-ಹಾಜ್(66 ರನ್, 42 ಎಸೆತ, 7 ಬೌಂಡರಿ, 3 ಸಿಕ್ಸರ್)ಮೊದಲ ವಿಕೆಟ್ಗೆ 15.1 ಓವರ್ಗಳಲ್ಲಿ 137 ರನ್ ಜೊತೆಯಾಟ ನಡೆಸಿದ ಪರಿಣಾಮ ಇಂಗ್ಲೆಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 171 ರನ್ ಗಳಿಸಿತು.
ದೀಪ್ತಿ ಶರ್ಮಾ ಅವರು ಅಗ್ರ ಸ್ಕೋರರ್ ಡಂಕ್ಲೆ ಅವರನ್ನು ಔಟ್ ಮಾಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಇಂಗ್ಲೆಂಡ್ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅಭೂತಪೂರ್ವ ಕುಸಿತ ಕಂಡಿದೆ. ಇಂಗ್ಲೆಂಡ್ ತಂಡವು ಈ ಹಂತದಲ್ಲಿ ಕೇವಲ 25 ಎಸೆತಗಳಲ್ಲಿ 31 ರನ್ ಸೇರಿಸಿ 9 ವಿಕೆಟ್ ಗಳನ್ನು ಕಳೆದುಕೊಂಡಿತು. ಪುರುಷರ ಹಾಗೂ ಮಹಿಳೆಯರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಕೆಲವೇ ಎಸೆತಗಳಲ್ಲಿ 9 ವಿಕೆಟ್ ಗಳು ಪತನವಾಗಿ ಹೊಸ ದಾಖಲೆ ನಿರ್ಮಾಣವಾಗಿದೆ.
4 ಓವರ್ಗಳಲ್ಲಿ 27 ರನ್ ಗೆ 3 ವಿಕೆಟ್ ಗಳನ್ನು ಉರುಳಿಸಿದ ದೀಪ್ತಿ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಗಳನ್ನು ಪಡೆದ ಮಹಿಳಾ ಕ್ರಿಕೆಟಿಗರ ಪಟ್ಟಿಗೆ ಸೇರಿದ್ದಾರೆ. ಈ ಪಟ್ಟಿಯಲ್ಲಿ ಜುಲನ್ ಗೋಸ್ವಾಮಿ 355 ವಿಕೆಟ್ ಗಳ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಕ್ಯಾಥರಿನ್ ಸಿವೆರ್-ಬ್ರಂಟ್(335), ಎಲ್ಲಿಸ್ ಪೆರ್ರಿ(331), ಶಬ್ನಿಮ್ ಇಸ್ಮಾಯಿಲ್(317) ಹಾಗೂ ಅನಿಸಾ ಮುಹಮ್ಮದ್(305)ಅವರಿದ್ದಾರೆ.
ದೀಪ್ತಿ ಶರ್ಮಾಗೆ ಸಾಥ್ ನೀಡಿದ ಅರುಂಧತಿ ರೆಡ್ಡಿ(3-32)ಹಾಗೂ ಶ್ರೀ ಚರಣಿ(2-43)ಐದು ವಿಕೆಟ್ ಗಳನ್ನು ಹಂಚಿಕೊಂಡರು.
ಇಂಗ್ಲೆಂಡ್ ನ 171 ರನ್ ಗೆ ಉತ್ತರವಾಗಿ ಭಾರತೀಯ ಮಹಿಳೆಯರ ತಂಡವು ನಿಗದಿತ 20 ಓವರ್ಗಳಲ್ಲಿ 166 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇವಲ 5 ರನ್ನಿಂದ ಸೋಲುಂಡಿತು. ಪ್ರಸಕ್ತ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವು ಮೊದಲ ಸೋಲು ಕಂಡಿದೆ.
ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ(56 ರನ್, 49 ಎಸೆತ, 10 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು. ಶೆಫಾಲಿ ವರ್ಮಾ(47 ರನ್, 25 ಎಸೆತ, 7 ಬೌಂಡರಿ, 2 ಸಿಕ್ಸರ್)ಅವರೊಂದಿಗೆ ಮೊದಲ ವಿಕೆಟ್ಗೆ 85 ರನ್ ಜೊತೆಯಾಟ ನಡೆಸಿದ್ದರು. ಈ ಇಬ್ಬರು ಬೇರ್ಪಟ್ಟ ನಂತರ ನಾಯಕಿ ಹರ್ಮನ್ಪ್ರೀತ್ ಕೌರ್(23 ರನ್, 17 ಎಸೆತ)ಹಾಗೂ ಜೆಮಿಮಾ ರೊಡ್ರಿಗಸ್(20 ರನ್, 15 ಎಸೆತ)ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.
ಸರಣಿಯ 4ನೇ ಪಂದ್ಯವು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ನಲ್ಲಿ ಜುಲೈ 9ರಂದು ನಡೆಯಲಿದೆ.
►ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮಹಿಳೆಯರ ತಂಡ: 20 ಓವರ್ಗಳಲ್ಲಿ 171/9
(ಸೋಫಿಯಾ ಡಂಕ್ಲೆ 75, ಡ್ಯಾನಿ ವ್ಯಾಟ್-ಹಾಜ್ 66, ದೀಪ್ತಿ ಶರ್ಮಾ 3-27, ಅರುಂಧತಿ ರೆಡ್ಡಿ 3-32)
ಭಾರತದ ಮಹಿಳೆಯರ ತಂಡ: 20 ಓವರ್ಗಳಲ್ಲಿ 166/5
(ಸ್ಮತಿ ಮಂಧಾನ 56, ಶೆಫಾಲಿ ವರ್ಮಾ 47, ಹರ್ಮನ್ಪ್ರೀತ್ ಕೌರ್ 23, ಲೌರೆನ್ ಫಿಲರ್ 2-30)
ಪಂದ್ಯಶ್ರೇಷ್ಠ: ಸೋಫಿಯಾ ಡಂಕ್ಲೆ.