Asian Games 2026 | ಬೆಳ್ಳಿ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ

ಇಲಾವೆನಿಲ್ ವಲರಿವನ್, ಸೋನಮ್ ಮಸ್ಕರ್, ವಿದರ್ಶಾ ವಿನೋದ್ (Photo: Sport Star)
ನಗೋಯಾ: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ಭಾನುವಾರ ಬೆಳ್ಳಿ ಪದಕದೊಂದಿಗೆ ತನ್ನ ಪದಕದ ಅಭಿಯಾನ ಆರಂಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಇಲಾವೆನಿಲ್ ವಲರಿವನ್, ಸೋನಮ್ ಮಸ್ಕರ್ ಮತ್ತು ವಿದರ್ಶಾ ವಿನೋದ್ ಅವರನ್ನೊಳಗೊಂಡ ಭಾರತ ತಂಡ ಎರಡನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದೆ.
ಭಾರತದ ತ್ರಿವಳಿ ಶೂಟರ್ಗಳು ಒಟ್ಟು 1898.0 ಅಂಕಗಳನ್ನು ಗಳಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಈ ವಿಭಾಗದಲ್ಲಿ 1904.2 ಅಂಕಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ ಚೀನಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರೆ, ಆತಿಥೇಯ ಜಪಾನ್ 1897.1 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ತಂಡದ ಪರ ಸೋನಮ್ 634.1 ಅಂಕಗಳನ್ನು ಗಳಿಸಿ ಭಾರತದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇಲಾವೆನಿಲ್ 633.5 ಅಂಕಗಳು ಹಾಗೂ ವಿದರ್ಶಾ 630.4 ಅಂಕಗಳು ಗಳಿಸುವ ಮೂಲಕ ಕೊಡುಗೆ ನೀಡಿದರು. ಇವರ ಒಟ್ಟಾರೆ ಪ್ರದರ್ಶನದಿಂದ ಭಾರತ 1898 ಅಂಕಗಳ ಗಡಿ ದಾಟಿ ಬೆಳ್ಳಿ ಪದಕ ಗೆಲ್ಲುವಂತಾಯಿತು.
ವೈಯಕ್ತಿಕ ವಿಭಾಗದಲ್ಲೂ ಇಲಾವೆನಿಲ್ ಮತ್ತು ಸೋನಮ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರ ಅತ್ಯುತ್ತಮ ಸ್ಕೋರ್ಗಳು ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಅಂತಿಮ ಎಂಟು ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆಯಲು ನೆರವಾದವು.
ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ಇಬ್ಬರೂ ಶೂಟರ್ಗಳು ವೈಯಕ್ತಿಕ ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.






