1,000 ಮೀ. ಓಟ: ವಿಶ್ವ ದಾಖಲೆ ಮುರಿದ ಕೀನ್ಯದ ಇಮ್ಯಾನುಯೆಲ್ ವಾನ್ಯೋನಿ

ಇಮ್ಯಾನುಯೆಲ್ ವಾನ್ಯೋನಿ |Photo Credit : @OlympicsKe
ನ್ಯೂಯಾರ್ಕ್, ಜು.11: ಮೊನಾಕೊ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಶುಕ್ರವಾರ ನಡೆದ ಪುರುಷರ 1,000 ಮೀ. ಓಟದಲ್ಲಿ ಎರಡು ನಿಮಿಷ 11.83 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಕೀನ್ಯದ ಇಮ್ಯಾನುಯೆಲ್ ವಾನ್ಯೋನಿ ವಿಶ್ವ ದಾಖಲೆಯನ್ನು ಮುರಿದರು.
27 ವರ್ಷಗಳ ಹಿಂದೆ ಇದೇ ಸ್ಪರ್ಧೆಯಲ್ಲಿ ತಮ್ಮದೇ ದೇಶದ ನೋಹ್ ಗೆನಿ ನಿರ್ಮಿಸಿದ್ದ ದಾಖಲೆಯನ್ನು ಅವರು ಅಳಿಸಿ ಹಾಕಿದರು. ನೋಹ್ಗಿಂತ 0.13 ಸೆಕೆಂಡ್ ಗಳ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದರು.
ಒಲಿಂಪಿಕ್ಸ್ನ 800 ಮೀ. ಓಟದ ಚಾಂಪಿಯನ್ ವಾನ್ಯೋನಿ, ಬ್ರಿಟನ್ನ ಜೇಕ್ ವೈಟ್ಮ್ಯಾನ್ ಹಾಗೂ ಅಲ್ಜೀರಿಯಾದ ಜಾಮೆಲ್ ಸೆಡ್ಜಾಟಿ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.
ಮಹಿಳೆಯರ 200 ಮೀ. ಓಟದಲ್ಲಿ 21.51 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಜೂಲಿಯನ್ ಅಲ್ಫ್ರೆಡ್ ಮೊದಲ ಸ್ಥಾನ ಪಡೆದರು. ಅವರು 200 ಮೀ. ಓಟದ ಇತಿಹಾಸದಲ್ಲಿ ಮೂರನೇ ಅತಿ ವೇಗದ ಸಮಯ ದಾಖಲಿಸಿದರು. ಅಮೆರಿಕದ ಗ್ಯಾಬ್ಬಿ ಥಾಮಸ್ (21.84) ಮೂರನೇ ಸ್ಥಾನ ಪಡೆದರು.
ಪುರುಷರ 100 ಮೀ. ಓಟದಲ್ಲಿ ಜಮೈಕಾದ ವಿಶ್ವ ಚಾಂಪಿಯನ್ ಒಬ್ಲಿಕ್ ಸೆವಿಲ್ಲಿ 9.88 ಸೆಕೆಂಡ್ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಅಮೆರಿಕದ ಜೋರ್ಡಾನ್ ಅಂಥೋನಿ (9.92) ಹಾಗೂ ಕ್ಯಾಮರೂನ್ನ ಇಮ್ಯಾನುಯೆಲ್ ಎಸೆಮ್ (10.00) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.






