IPL 2025 | ಲಕ್ನೊ ಸೂಪರ್ ಜೈಂಟ್ಸ್ ತಂಡದೆದುರಿನ ಚೊಚ್ಚಲ ಪಂದ್ಯದಲ್ಲಿ ಔಟಾದ ನಂತರ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ

Photo : X
ಜೈಪುರ: ಶನಿವಾರ ಲಕ್ನೊ ಸೂಪರ್ ಜೈಂಟ್ಸ್ ತಂಡದೆದುರು ನಡೆದ ಪಂದ್ಯದಲ್ಲಿ ಐಪಿಎಲ್ ಕ್ರೀಡಾಕೂಟಕ್ಕೆ ಚಾರಿತ್ರಿಕ ಪದಾರ್ಪಣೆ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, ತಾವು ಔಟಾದ ನಂತರ ಕಣ್ಣೀರು ಸುರಿಸುತ್ತಾ ಪೆವಿಲಿಯನ್ ನೆಡೆಗೆ ಹೆಜ್ಜೆ ಹಾಕಿದ ಘಟನೆ ನಡೆದಿದೆ.
ಮೊದಲ ಬ್ಯಾಟಿಂಗ್ ಮಾಡಿದ ಲಕ್ನೊ ಸೂಪರ್ ಜೈಂಟ್ಸ್ ತಂಡ ನೀಡಿದ 181 ರನ್ ಗಳ ಗುರಿಯನ್ನು ದಿಟ್ಟವಾಗಿ ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಗಳಾದ ಯಶಸ್ವಿ ಜೈಸ್ವಾಲ್ (74) ಹಾಗೂ ವೈಭವ್ ಸೂರ್ಯವಂಶಿ (34) ಮೊದಲ ವಿಕೆಟ್ ಜೊತೆಯಾಟದಲ್ಲಿ 84 ರನ್ ಗಳ ಭದ್ರ ಬುನಾದಿ ಹಾಕಿದ್ದರು. ಈ ವೇಳೆ ಲಕ್ನೊ ಸೂಪರ್ ಜೈಂಟ್ಸ್ ತಂಡದ ಆಫ್ ಸ್ಪಿನ್ನರ್ ಏಡನ್ ಮರ್ಕ್ರಮ್ ಎಸೆದ ಕಲಾತ್ಮಕ ಬಾಲ್ ಅನ್ನು ಅಂದಾಜಿಸುವಲ್ಲಿ ವಿಫಲಗೊಂಡ ವೈಭವ್ ಸೂರ್ಯವಂಶಿ, ರಿಷಭ್ ಪಂತ್ ಮಾಡಿದ ಚುರುಕಿನ ಸ್ಟಂಪ್ ಗೆ ಬಲಿಯಾದರು. ಈ ವೇಳೆ ರಾಜಸ್ತಾನ್ ರಾಯಲ್ಸ್ ತಂಡದ ಮೊತ್ತ ಒಂಭತ್ತು ಓವರ್ ಗಳಲ್ಲಿ 84 ರನ್ ಆಗಿತ್ತು.
ಚೊಚ್ಚಲ ಪಂದ್ಯದಲ್ಲೇ ಬಲಿಷ್ಠ ಹೊಡೆತಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡ ವೈಭವ್ ಸೂರ್ಯವಂಶಿ, ಉತ್ತಮ ಮೊತ್ತ ಗಳಿಸುವತ್ತ ಮುನ್ನುಗ್ಗುತ್ತಿರುವಾಗಲೇ, ರಿಷಭ್ ಪಂತ್ ಮಾಡಿದ ಚುರುಕಿನ ಸ್ಟಂಪ್ ಗೆ ಬಲಿಯಾಗಿ, ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಈ ವೇಳೆ ಅವರು ಅಕ್ಷರಶಃ ಕಣ್ಣೀರು ಸುರಿಸುತ್ತಿರುವುದು ಕಂಡು ಬಂದಿತು.
ಲಕ್ನೊ ಸೂಪರ್ ಜೈಂಟ್ಸ್ ತಂಡದ ಬೌಲರ್ ಶಾರ್ದೂಲ್ ಠಾಕೂರ್ ಎಸೆದ ಮೊದಲ ಓವರ್ ನ ಮೊದಲ ಬಾಲ್ ಅನ್ನೇ ಸಿಕ್ಸರ್ ಗೆ ಅಟ್ಟುವ ಮೂಲಕ, ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಕ್ರಿಕೆಟ್ ಜಗತ್ತಿನೆದುರು ಪ್ರದರ್ಶಿಸಿದರು. ಆದರೆ, ಆರಂಭಿಕ ಬ್ಯಾಟರ್ ಗಳಾದ ಯಶಸ್ವಿ ಜೈಸ್ವಾಲ್ (74) ಹಾಗೂ ವೈಭವ್ ಸೂರ್ಯವಂಶಿ ಹಾಕಿದ ಭದ್ರ ಬುನಾದಿಯನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ವಿಫಲಗೊಂಡಿದ್ದರಿಂದ, ರಾಜಸ್ತಾನ್ ರಾಯಲ್ಸ್ ತಂಡ ಕೇವಲ 2 ರನ್ ಗಳ ಅಂತರದಲ್ಲಿ ಪರಾಭವಗೊಂಡಿತು.
Vaibhav....you won heart today#vaibhavsuryavanshi pic.twitter.com/Xn3MwBMlgy
— SSP (@shyam_s_panwar) April 19, 2025







