ವಿದ್ಯಾರ್ಥಿ ಎಸೆದ ಜಾವೆಲಿನ್ ತಾಗಿ ಮತ್ತೋರ್ವ ವಿದ್ಯಾರ್ಥಿ ಮೃತ್ಯು
ಅಭ್ಯಾಸ ನಡೆಸುವಾಗ ನಡೆದ ಘಟನೆ

PHOTO : SAAM TV
ನವಿ ಮುಂಬೈ:ರಾಯಘಡದ ಮಂಗಾವ್ ತಾಲೂಕಿನ ಪುರಾರ್ ಎಂಬಲ್ಲಿರುವ ಐಎನ್ಟಿ ಇಂಗ್ಲಿಷ್ ಸ್ಕೂಲಿನಲ್ಲಿ ಅಭ್ಯಾಸ ಅವಧಿಯೊಂದರ ವೇಳೆ ತನ್ನ ಶೂ ಲೇಸ್ ಕಟ್ಟಲು ಬಗ್ಗಿದ ವಿದ್ಯಾರ್ಥಿಯೊಬ್ಬನಿಗೆ ಇನ್ನೊಬ್ಬ ವಿದ್ಯಾರ್ಥಿ ಎಸೆದ ಜಾವೆಲಿನ್ ತಲೆಗೆ ತಾಗಿ ಆತ ಮೃತಪಟ್ಟ ಘಟನೆ ಬುಧವಾರ ಅಪರಾಹ್ನ ನಡೆದಿದೆ.
ಮೃತ ಬಾಲಕನನ್ನು 15 ವರ್ಷದ ಹುಜೇಫಾ ದವಾರೆ ಎಂದು ಗುರುತಿಸಲಾಗಿದೆ. ತಾಲೂಕು ಮಟ್ಟದ ಸ್ಪರ್ಧೆಗಾಗಿ ಅಭ್ಯಾಸ ಮಾಡುತ್ತಿದ್ದ ಆತ ಮೊದಲು ಜಾವೆಲಿನ್ ಎಸೆದಿದ್ದ. ಅದನ್ನು ಹೆಕ್ಕಿದ ಇನ್ನೊಬ್ಬ ವಿದ್ಯಾರ್ಥಿ ಜಾವೆಲಿನ್ ಮರುಎಸೆದಿದ್ದ. ಇದನ್ನು ಅರಿಯದ ಹುಜೇಫಾ ತನ್ನ ಶೂ ಲೇಸ್ ಕಟ್ಟಲು ಬಗ್ಗಿದ್ದ ಆಗ ಆ ಜಾವೆಲಿನ್ ಆತನ ಬಲಕಣ್ಣಿನ ಬದಿಯ ಹಣೆಗೆ ಅದು ನಾಟಿತ್ತು.
ಆತನನ್ನು ತಕ್ಷಣ ಗೋರೆಗಾಂವ್ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು.
ಪೊಲೀಸರು ಶಾಲೆಯ ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದು ಸದ್ಯ ಇದನ್ನೊಂದು ಆಕಸ್ಮಿಕ ಸಾವಿನ ಪ್ರಕರಣ ಎಂದು ದಾಖಲಿಸಿದ್ದಾರೆ.
ಜಾವೆಲಿನ್ ಎಸೆದ ಬಾಲಕನನ್ನು ಆತನ ಹೆತ್ತವರ ಸಮ್ಮುಖದಲ್ಲಿ ಪ್ರಶ್ನಿಸಲಾಗುವುದು ಹಾಗೂ ಇದೊಂದು ಆಕಸ್ಮಿಕ ಘಟನೆಯೇ ಅಥವಾ ಉದ್ದೇಶಪೂರ್ವಕ ಕೃತ್ಯವೇ ಎಂದು ತಿಳಿಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.







