19 ಸಿಕ್ಸರ್ ಗಳು, 181 ರನ್!; T20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಪ್ರಿಯಾಂಶ್ ಆರ್ಯ

ಪ್ರಿಯಾಂಶ್ ಆರ್ಯ | Photo Credit : PTI
ಹೊಸದಿಲ್ಲಿ, ನ.24: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ತಂಡದ ವಿರುದ್ಧ ಮಂಗಳವಾರ ಕೇವಲ 68 ಎಸೆತಗಳಲ್ಲಿ 181 ರನ್ ಸಿಡಿಸಿದ ದಿಲ್ಲಿ ಕ್ರಿಕೆಟ್ ತಂಡದ ನಾಯಕ ಪ್ರಿಯಾಂಶ್ ಆರ್ಯ ಅವರು ಟಿ-20 ಕ್ರಿಕೆಟ್ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಆರ್ಯ ಅವರು ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಪುರುಷ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರವಾಗಿದ್ದಲ್ಲದೆ, ಕೆ.ಎಲ್. ರಾಹುಲ್ ಅವರ ಹಿಂದಿನ ದಾಖಲೆಯನ್ನು ಮುರಿದರು. ರಾಹುಲ್ 2026ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಔಟಾಗದೆ 152 ರನ್ ಗಳಿಸಿದ್ದರು.
ಆರ್ಯ ಒಂದೇ ಟಿ-20 ಇನಿಂಗ್ಸ್ ನಲ್ಲಿ ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದರು.
ಎಡಗೈ ಬ್ಯಾಟರ್ ಆರ್ಯ 19 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿ, ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ ದಿಲ್ಲಿ ತಂಡವು 5 ವಿಕೆಟ್ ಗಳ ನಷ್ಟಕ್ಕೆ 275 ರನ್ ಗಳಿಸಲು ನೆರವಾದರು. ಆರ್ಯ ಗಳಿಸಿದ 181 ರನ್ ಪುರುಷರ ಟಿ-20 ಕ್ರಿಕೆಟ್ನಲ್ಲಿ ದಾಖಲಾದ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ದಕ್ಷಿಣ ಆಫ್ರಿಕಾದ ಬ್ಯಾಟರ್ ಲುವಾನ್-ಡ್ರೆ ಪ್ರಿಟೋರಿಯಸ್ ಅವರು 2026ರ ಸಿಎಸ್ಎ ಪ್ರೊ 20 ಕಪ್ನಲ್ಲಿ ನೈಟ್ಸ್ ತಂಡದ ವಿರುದ್ಧ ಟೈಟಾನ್ಸ್ ಪರವಾಗಿ 79 ಎಸೆತಗಳಲ್ಲಿ ಔಟಾಗದೆ 188 ರನ್ ಗಳಿಸಿದ್ದರು. ಇದು ಪುರುಷರ ಟಿ-20 ಕ್ರಿಕೆಟ್ನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
►36 ಎಸೆತಗಳಲ್ಲಿ ಶತಕ, 19 ಸಿಕ್ಸರ್ ಗಳು: ಆರ್ಯ ಅಬ್ಬರದ ಪ್ರದರ್ಶನ
ತಮಿಳುನಾಡು ತಂಡವು ಬ್ಯಾಟಿಂಗ್ಗೆ ಇಳಿಸಿದ ದಿಲ್ಲಿ ತಂಡವು ಮೂರನೇ ಓವರ್ ನಲ್ಲಿ ಯಶ್ ದುಲ್ (8 ರನ್) ಅವರ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಎದುರಾಳಿ ಬೌಲರ್ ಗಳ ದಾಳಿಯನ್ನು ಪುಡಿಗೈದ ಆರ್ಯ ಅವರು ದಿಲ್ಲಿ ತಂಡ ಮತ್ತೆ ಹಿನ್ನಡೆ ಅನುಭವಿಸದಂತೆ ನೋಡಿಕೊಂಡರು.
ಆರ್ಯಗೆ ನಿತೀಶ್ ರಾಣಾ ಉತ್ತಮ ಬೆಂಬಲ ನೀಡಿದರು. ಈ ಜೋಡಿಯು ಎರಡನೇ ವಿಕೆಟ್ ಗೆ 118 ರನ್ ಸೇರಿಸಿತು. ರಾಣಾ 17 ಎಸೆತಗಳಲ್ಲಿ 18 ರನ್ ಕೊಡುಗೆ ನೀಡಿದರು. ಮತ್ತೊಂದೆಡೆ ಆರ್ಯ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದರು.
ದಿಲ್ಲಿ ತಂಡದ ನಾಯಕ ಆರ್ಯ ಕೇವಲ 36 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು. ರಾಹುಲ್ ಅವರ 152 ರನ್ಗಳ ದಾಖಲೆಯನ್ನು ಮುರಿದ ಆರ್ಯ 68 ಎಸೆತಗಳಲ್ಲಿ 181 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಒಟ್ಟು 19 ಸಿಕ್ಸರ್ ಗಳನ್ನು ಸಿಡಿಸಿದ ಆರ್ಯ ಅವರು ನ್ಯೂಝಿಲೆಂಡ್ ನ ಫಿನ್ ಅಲೆನ್ ಅವರ ದಾಖಲೆಯನ್ನು ಸರಿಗಟ್ಟಿದರು. ಅಲೆನ್ 2025ರ ಜೂನ್ ನಲ್ಲಿ ನಡೆದ ಟಿ-20 ಪಂದ್ಯವೊಂದರಲ್ಲಿ 19 ಸಿಕ್ಸರ್ ಗಳನ್ನು ಸಿಡಿಸಿದ್ದರು. ಈ ಮೂಲಕ ಆರ್ಯ ಪುರುಷರ ಟಿ-20 ಇನಿಂಗ್ಸ್ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆಯನ್ನು ಹಂಚಿಕೊಂಡಿದ್ದಾರೆ.
ಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳು
• ಲುವಾನ್-ಡ್ರೆ ಪ್ರಿಟೋರಿಯಸ್ - ಔಟಾಗದೆ 188 ರನ್ (79 ಎಸೆತ)
• ಪ್ರಿಯಾಂಶ್ ಆರ್ಯ - 181 ರನ್ (68 ಎಸೆತ)
• ಕ್ರಿಸ್ ಗೇಲ್ - ಔಟಾಗದೆ 175 ರನ್ (66 ಎಸೆತ)
• ಆರೊನ್ ಫಿಂಚ್ - 172 ರನ್ (76 ಎಸೆತ)
• ಹಂಝಾ ಖಾನ್ - ಔಟಾಗದೆ 164 ರನ್ (65 ಎಸೆತ)






