2023 ಕಠಿಣವಾಗಿತ್ತು, ತುಂಬಾ ಕಲಿತೆ: ರಿಶಭ್ ಪಂತ್

ರಿಶಭ್ ಪಂತ್ | Photo ; PTI
ಹೊಸದಿಲ್ಲಿ: ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ರಿಶಭ್ ಪಂತ್, 2023 ನನ್ನ ಪಾಲಿಗೆ ಕಠಿಣವಾಗಿತ್ತು ಹಾಗೂ ಈ ಅವಧಿಯಲ್ಲಿ ನಾನು ತುಂಬಾ ಕಲಿತೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ‘X’ನಲ್ಲಿ ಬಂದ ಸಂದೇಶವೊಂದಕ್ಕೆ ಪ್ರತಿಕ್ರಿಯಿಸಿರುವ ಪಂತ್, ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಅವಧಿಯಲ್ಲಿನ ತನ್ನ ಹೋರಾಟದ ಕತೆಯನ್ನು ಬಿಚ್ಚಿಟ್ಟಿದ್ದಾರೆ.
‘‘ಈ ವರ್ಷ ಕಠಿಣವಾಗಿತ್ತು ಮತ್ತು ನಾನು ತುಂಬಾ ಕಲಿತೆ’’ ಎಂದು ಅವರು ‘X’ನಲ್ಲಿ ಬರೆದಿದ್ದಾರೆ.
ಪಂತ್ ಭಾರತದ ಪರವಾಗಿ ಕೊನೆಯದಾಗಿ ಆಡಿದ್ದು 2022 ಡಿಸೆಂಬರ್ ನಲ್ಲಿ ಬಾಂಗ್ಲಾದೇಶದ ಮೀರ್ಪುರ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ. ಅವರು ಇತ್ತೀಚೆಗೆ, ಕೋಲ್ಕತದಲ್ಲಿ ನಡೆಯುತ್ತಿರುವ ಐಪಿಎಲ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ನ ತರಬೇತಿ ಶಿಬಿರಕ್ಕೆ ಸೇರ್ಪಡೆಗೊಂಡಿದ್ದಾರೆ.
ಆದರೆ,ಈ ಹಂತದಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳದಿರಲು ಅವರು ನಿರ್ಧರಿಸಿದ್ದಾರೆ. ಆದರೆ, 2024ರ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದಾರೆ.
ಈ ನಡುವೆ, ಮಹೇಂದ್ರ ಸಿಂಗ್ ಧೋನಿ ನಿವೃತ್ತಿಗೊಂಡರೆ 2025ರ ಐಪಿಎಲ್ ನಲ್ಲಿ ಅವರ ಸ್ಥಾನದಲ್ಲಿ ಪಂತ್ ರನ್ನು ತರುವ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಪರಿಶೀಲಿಸುತ್ತಿದೆ ಎಂಬ ಕುತೂಹಲಕಾರಿ ಹೇಳಿಕೆಯೊಂದನ್ನು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಣೆ ವಿವರಣೆಗಾರ ದೀಪ್ ದಾಸ್ ಗುಪ್ತ ನೀಡಿದ್ದಾರೆ.







