2023ರ ವಿಶ್ವಕಪ್ ನನ್ನ ವಿದಾಯದ ಟೂರ್ನಿ: ಆರ್.ಅಶ್ವಿನ್ ಸುಳಿವು

ಫೋಟೋ: Twitter
ಹೊಸದಿಲ್ಲಿ : ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯು ಭಾರತದ ಪರ ನಾನು ಆಡಲಿರುವ ಕೊನೆಯ ಟೂರ್ನಿಯಾಗಲಿದೆ ಎಂದು ಹೇಳಿರುವ ಭಾರತದ ಹಿರಿಯ ಆಫ್ ಸ್ಪಿನ್ನರ್ ಆರ್.ಅಶ್ವಿನ್ ವಿದಾಯದ ಸುಳಿವು ನೀಡಿದ್ದಾರೆ.
ಆರ್.ಅಶ್ವಿನ್ ಅವರು ಗಾಯಗೊಂಡಿದ್ದ ಆಲ್ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ಕೊನೆಯ ಗಳಿಗೆಯಲ್ಲಿ ಭಾರತದ 15 ಸದಸ್ಯರ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಿದ್ದರು. 37ರ ಹರೆಯದ ಅಶ್ವಿನ್ ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ಯಶಸ್ಸು ಕಂಡಿದ್ದರು.
ಇದು ಭಾರತದ ಪರ ನನ್ನ ಕೊನೆಯ ವಿಶ್ವಕಪ್ ಟೂರ್ನಿ ಆಗಬಹುದು. ಹೀಗಾಗಿ ಪಂದ್ಯಾವಳಿಯನ್ನು ಆನಂದಿಸುವುದು ಅತ್ಯಂತ ಮಹತ್ವದ್ದಾಗಿದೆ. ನೀವು ತಮಾಷೆ ಮಾಡುತ್ತಿದ್ದೀರಿ ಎಂದು ನಾನು ಹೇಳುತ್ತಿದ್ದೆ. ಜೀವನವು ಅಚ್ಚರಿಗಳಿಂದ ತುಂಬಿದೆ. ನಾನು ವಿಶ್ವಕಪ್ ತಂಡದಲ್ಲಿರುತ್ತೇನೆಂದು ಭಾವಿಸಿರಲಿಲ್ಲ. ನಾನು ಇಂದು ಇಲ್ಲಿದ್ದೇನೆ ಎಂದು ಸನ್ನಿವೇಶ ಖಚಿತಪಡಿಸಿದೆ. ತಂಡದ ಆಡಳಿತವು ನನ್ನ ಮೇಲೆ ವಿಶ್ವಾಸ ಇಟ್ಟಿದೆ. ಒತ್ತಡವನ್ನು ನಿಭಾಯಿಸುವುದು ನಿರ್ಣಾಯಕ ಎಂದು ಭಾರತೀಯ ತಂಡದಲ್ಲಿ ತನ್ನ ಸೇರ್ಪಡೆಯ ಕುರಿತು ಅಶ್ವಿನ್ ಹೇಳಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿ ಅಶ್ವಿನ್ ಭಾರತದ ಪರ 10 ಪಂದ್ಯಗಳನ್ನು ಆಡಿದ್ದಾರೆ. 2015ರಲ್ಲಿ ಕೊನೆಯ ಬಾರಿ ವಿಶ್ವಕಪ್ ನಲ್ಲಿ ಆಡಿದ್ದರು. ಟೂರ್ನಿಯಲ್ಲಿ ಅವರು 4.36ರ ಇಕಾನಮಿಯಲ್ಲಿ ಒಟ್ಟು 17 ವಿಕೆಟ್ ಗಳನ್ನು ಕಬಳಿಸಿದ್ದಾರೆ. 25ಕ್ಕೆ 4 ವಿಕೆಟ್ ಶ್ರೇಷ್ಠ ಸಾಧನೆಯಾಗಿದೆ.
ವಿರಾಟ್ ಕೊಹ್ಲಿ ಜೊತೆಗೆ ಅಶ್ವಿನ್ ಕೂಡ ಈಗಿನ ಭಾರತೀಯ ತಂಡದಲ್ಲಿರುವ 2011ರ ವಿಶ್ವಕಪ್ ವಿಜೇತ ತಂಡದ ಇನ್ನೋರ್ವ ಸದಸ್ಯರಾಗಿದ್ದಾರೆ.





