2024 ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ : ಸೆಖೋನ್ ರಾಷ್ಟ್ರೀಯ ದಾಖಲೆ
50 ಮೀ ರೈಫಲ್ 3 ಪೊಸಿಶನ್ ನಲ್ಲಿ ಅಖಿಲ್ಗೆ ಕಂಚು

ಅಖಿಲ್ ಶೆವರಾನ್ | PC : NRAI
ಹೊಸದಿಲ್ಲಿ : ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 2024 ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ನಲ್ಲಿ ಬುಧವಾರ ಭಾರತದ ಅಖಿಲ್ ಶೆವರಾನ್ ಪುರುಷರ 50 ಮೀಟರ್ ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅದೇ ವೇಳೆ, ಮಹಿಳೆಯರ ಸ್ಕೀಟ್ನಲ್ಲಿ ಗನೆಮತ್ ಸೆಖೋನ್ ನೂತನ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ.
ಶೆವರಾನ್ರ ಪದಕದ ನೆರವಿನಿಂದ ವಾರ್ಷಿಕ ಐಎಸ್ಎಸ್ಎಫ್ ಕ್ರೀಡಾಕೂಟದಲ್ಲಿ ಭಾರತ ಗಳಿಸಿರುವ ಪದಕಗಳ ಸಂಖ್ಯೆ ಎರಡಕ್ಕೇರಿದೆ. ಮಂಗಳವಾರ, ಸೋನಮ್ ಉತ್ತಮ್ ಮಸ್ಕರ್ ಮಹಿಳೆಯರ ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.
ಬುಧವಾರ ನಡೆದ ಪುರುಷರ 50 ಮೀಟರ್ ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲಿ, ಹಂಗೇರಿಯ ಇಸ್ಟ್ವಾನ್ ಪೆನಿ ಚಿನ್ನ ಗೆದ್ದರೆ, ಝೆಕಿಯದ ಜಿರಿ ಪ್ರೈವ್ರಸ್ಕಿ ಬೆಳ್ಳಿ ಸಂಪಾದಿಸಿದರು.
ಮಹಿಳೆಯರ ಸ್ಕೀಟ್ ವಿಭಾಗದಲ್ಲಿ, ಭಾರತದ ಗನೆಮತ್ ಸೆಖೋನ್ ಬುಧವಾರ ಫೈನಲ್ ತಲುಪಿದರು ಮತ್ತು ಈ ಪ್ರಕ್ರಿಯೆಯಲ್ಲಿ ಅವರು ನೂತನ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು. ಎರಡು ದಿನಗಳ ಅವಧಿಯಲ್ಲಿ ಅವರು 122 ಅಂಕಗಳನ್ನು ಗಳಿಸಿ ಅವರು ಫೈನಲ್ಗೆ ಅರ್ಹತೆ ಪಡೆದರು. ಜೊತೆಗೆ, ತನ್ನದೇ ದಾಖಲೆಯನ್ನು ಎರಡು ಅಂಕಗಳಿಂದ ಉತ್ತಮಪಡಿಸಿದರು.
ಅದೇ ವೇಳೆ, ಪುರುಷರ ಟ್ರ್ಯಾಪ್ನಲ್ಲಿ ವಿವಾನ್ ಕಪೂರ್ ಹಾಗೂ ಪುರುಷರ ಸ್ಕೀಟ್ನಲ್ಲಿ ಅನಂತ್ಜೀತ್ ಸಿಂಗ್ ನರುಕ ಮತ್ತು ಮೈರಜ್ ಅಹ್ಮದ್ ಖಾನ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.







