2025ರ ಆವೃತ್ತಿಯ ಡೈಮಂಡ್ ಲೀಗ್ ಫೈನಲ್ |ನೀರಜ್ ಚೋಪ್ರಾಗೆ ಕಠಿಣ ಸ್ಪರ್ಧೆ ಎದುರಾಗುವ ಸಾಧ್ಯತೆ

ನೀರಜ್ ಚೋಪ್ರಾ | PTI
ಹೊಸದಿಲ್ಲಿ, ಆ.26: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸ್ವಿಟ್ಸರ್ಲ್ಯಾಂಡ್ ನಲ್ಲಿ ಗುರುವಾರ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ನಲ್ಲಿ ಪ್ರಶಸ್ತಿಯನ್ನು ಮತ್ತೊಮ್ಮೆ ಗೆಲ್ಲಲು ಪ್ರಯತ್ನಿಸಲಿದ್ದು, ಆ್ಯಂಡರ್ಸನ್ ಪೀಟರ್ಸ್ ಹಾಗೂ ಜುಲಿಯನ್ ವೆಬೆರ್ರಿಂದ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆಯಿದೆ.
ಒಲಿಂಪಿಕ್ಸ್ ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಚೋಪ್ರಾ ಅವರು ಬ್ರಸೆಲ್ಸ್ನಲ್ಲಿ ನಡೆದ ಹಿಂದಿನ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿದಿದ್ದರು. 2022ರಲ್ಲಿ ಡೈಮಂಡ್ ಲೀಗ್ ಟ್ರೋಫಿ ಜಯಿಸಿದ್ದ ಚೋಪ್ರಾ ಅವರು 2023 ಹಾಗೂ 2024ರಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದರು.
ನಾಲ್ಕು ಅರ್ಹತಾ ಸುತ್ತುಗಳ ಪೈಕಿ ಎರಡರಲ್ಲಿ ಸ್ಪರ್ಧಿಸಿದ್ದ ಚೋಪ್ರಾ 4ನೇ ಸ್ಥಾನದೊಂದಿಗೆ ಈ ವರ್ಷದ ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಪಡೆದಿದ್ದರು.
27ರ ಹರೆಯದ ಹಾಲಿ ವಿಶ್ವ ಚಾಂಪಿಯನ್ ಚೋಪ್ರಾ ಈ ವರ್ಷ ಮೇನಲ್ಲಿ ದೋಹಾದಲ್ಲಿ ನಡೆದಿದ್ದ ಡೈಮಂಡ್ ಲೀಗ್ನಲ್ಲಿ ಮೊದಲ ಬಾರಿ 90.23 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದರು. ಆದರೆ ಜರ್ಮನಿಯ ವೆಬೆರ್ ಮೊದಲ ಸ್ಥಾನ ಪಡೆದಿದ್ದು, ಚೋಪ್ರಾ 2ನೇ ಸ್ಥಾನ ಗಿಟ್ಟಿಸಿದ್ದರು. ಚೋಪ್ರಾ ಪ್ಯಾರಿಸ್ ನಲ್ಲಿ ಜೂನ್ನಲ್ಲಿ ನಡೆದಿದ್ದ ಡೈಮಂಡ್ ಲೀಗ್ನಲ್ಲಿ 88.16 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದಿದ್ದರು.
ಚೋಪ್ರಾ ಅವರೊಂದಿಗೆ ಇತರ ಐವರು ಜಾವೆಲಿನ್ ಎಸೆತಗಾರರಾದ-ಆಂಡ್ರಿಯನ್ ಮರ್ಡಾರೆ, ಹಾಲಿ ಚಾಂಪಿಯನ್ ಪೀಟರ್ಸ್, ಕೆಶೋರ್ನ್ ವಾಲ್ಕಟ್ ಹಾಗೂ ಜುಲಿಯಸ್ ಯೆಗೊ ಅವರು ಸ್ಪರ್ಧಿಸಲಿದ್ದಾರೆ.
ಚೋಪ್ರಾ ಅವರು ಜುಲೈ 5ರಂದು ಬೆಂಗಳೂರಿನಲ್ಲಿ ಎನ್ಸಿ ಕ್ಲಾಸಿಕ್ನಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಪಂದ್ಯ ಆಡಿದ್ದರು. ಅಲ್ಲಿ ಅವರು 86.18 ಮೀ.ದೂರಕ್ಕೆ ಜಾವೆಲಿನ್ ಎಸೆದು ಪ್ರಶಸ್ತಿಯನ್ನು ಜಯಿಸಿದ್ದರು. ಚೋಪ್ರಾ ಈ ವರ್ಷ ಒಟ್ಟು 6 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದ್ದರೆ, 2 ಬಾರಿ ರನ್ನರ್-ಅಪ್ ಆಗಿದ್ದರು.
ಚೋಪ್ರಾ ಸೆಪ್ಟಂಬರ್ 13ರಿಂದ 21ರ ತನಕ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ತನ್ನ ವಿಶ್ವ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಲಿದ್ದಾರೆ.
ಡೈಮಂಡ್ ಲೀಗ್ ಜಾಗತಿಕ ಅತ್ಲೆಟಿಕ್ಸ್ನಲ್ಲಿ ಒಂದೇ ದಿನ ನಡೆಯುವ ಕ್ರೀಡಾಕೂಟವಾಗಿದೆ.
ಡೈಮಂಡ್ ಲೀಗ್ ಫೈನಲ್ನಲ್ಲಿ 32 ಸ್ಪರ್ಧೆಗಳಲ್ಲಿ ಗೆಲ್ಲುವ ತಂಡಗಳು ಚಾಂಪಿಯನ್ಸ್ ಕಿರೀಟ ಧರಿಸಲಿವೆ. ಪ್ರತಿಯೊಬ್ಬ ವಿಜೇತರು ಪ್ರತಿಷ್ಠಿತ ಡೈಮಂಡ್ ಟ್ರೋಫಿ ಸ್ವೀಕರಿಸುತ್ತಾರೆ ಹಾಗೂ ವಿಶ್ವ ಚಾಂಪಿಯನ್ಶಿಪ್ಸ್ ಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆಯುತ್ತಾರೆ.
ಪುರುಷರ ಜಾವೆಲಿನ್ ಫೈನಲ್ ಆಗಸ್ಟ್ 28ರಂದು ನಡೆಯಲಿದ್ದು, ವಿಜೇತರು 30,000 ಯು.ಎಸ್. ಡಾಲರ್ ಗೆಲ್ಲಲಿದ್ದಾರೆ. ರನ್ನರ್-ಅಪ್ 12,000 ಯು.ಎಸ್.ಡಾಲರ್ ತನ್ನದಾಗಿಸಿಕೊಳ್ಳಲಿದ್ದಾರೆ. 3ನೇ ಸ್ಥಾನ ಪಡೆಯುವ ಅತ್ಲೀಟ್ 7,000 ಯು.ಎಸ್.ಡಾಲರ್ ಸ್ವೀಕರಿಸಲಿದ್ದಾರೆ. ಈ ವರ್ಷ 32 ಸ್ಪರ್ಧೆಗಳಲ್ಲಿ 8 ಮಂದಿ ವಿಜೇತರ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದೆ.







