2026ರ ಕಾಮನ್ ವೆಲ್ತ್ ಕ್ರೀಡಾಕೂಟ | ದಿಲ್ಲಿ ತಲುಪಿದ ಕಿಂಗ್ಸ್ ಬ್ಯಾಟನ್ ರಿಲೇ

Commonwealth games 2026 (Image: X)
ಹೊಸದಿಲ್ಲಿ, ನ.11: 2026ರ ಆವೃತ್ತಿಯ ಗ್ಲಾಸ್ಗೋ ಕ್ರೀಡಾಕೂಟದ ವಿಧ್ಯುಕ್ತ ಪ್ರಕ್ರಿಯೆಯ ಭಾಗವಾಗಿ ಕಾಮನ್ ವೆಲ್ತ್ ದೇಶಗಳಾದ್ಯಂತ ಪರ್ಯಟನೆ ಆರಂಭಿಸಿರುವ ಕಿಂಗ್ಸ್ ಬ್ಯಾಟನ್ ರಿಲೇ ಮಂಗಳವಾರ ಹೊಸದಿಲ್ಲಿಗೆ ಆಗಮಿಸಿದೆ. ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಪ್ರದರ್ಶಿಸಲ್ಪಡಲಿರುವ ಬ್ಯಾಟನ್ ರಿಲೇ ಆ ನಂತರ ಅಹಮದಾಬಾದ್ ಗೆ ತೆರಳಲಿದೆ.
ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯಾ, ಭಾರತಕ್ಕೆ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೂನ್ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ(ಐಒಎ)ಅಧ್ಯಕ್ಷೆ ಪಿ.ಟಿ. ಉಷಾ ಅವರ ಸಮ್ಮುಖದಲ್ಲಿ ಕಿಂಗ್ಸ್ ಬ್ಯಾಟನ್ ರಿಲೇ ಅನಾವರಣ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ 2 ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಯೋಗೇಶ್ವರ ದತ್, 13 ಬಾರಿ ಸಿಡಬ್ಲ್ಯುಜಿ ಪದಕ ವಿಜೇತ ಅಚಂತ ಶರತ್ ಕಮಲ್ ಹಾಗೂ 10 ಬಾರಿಯ ಸಿಡಬ್ಲ್ಯುಜಿ ಪದಕ ವಿಜೇತ ಗಗನ್ ನಾರಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುಂದಿನ ವರ್ಷ ಕಾಮನ್ ವೆಲ್ತ್ ಕ್ರೀಡಾಕೂಟವನ್ನು(ಸಿಡಬ್ಲ್ಯುಜಿ)ಗ್ಲಾಸ್ಗೋ ಆಯೋಜಿಸಲಿದ್ದು, ಸ್ಪರ್ಧೆಯು ಬ್ರಿಟನ್ನಲ್ಲಿಯೇ ಮುಂದುವರಿಯಲಿದೆ. 2022ರ ಕ್ರೀಡಾಕೂಟವನ್ನು ಬರ್ಮಿಂಗ್ಹ್ಯಾಮ್ ಆಯೋಜಿಸಿತ್ತು. 2026ರ ಗೇಮ್ಸ್ ಅನ್ನು ಆಸ್ಟ್ರೇಲಿಯದ ವಿಕ್ಟೋರಿಯಾದಲ್ಲಿ ನಡೆಯಬೇಕಿತ್ತು. ಆದರೆ, ಆಸ್ಟ್ರೇಲಿಯ ಸರಕಾರವು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಗೇಮ್ಸ್ ಆಯೋಜನೆಯಿಂದ ಹಿಂದೆ ಸರಿಯಿತು.
ಬ್ಯಾಟನ್ ಅನ್ನು ಭಾರತೀಯ ಕಲಾವಿದ ಆಖಿಬ್ ವಾನಿ ವಿನ್ಯಾಸಗೊಳಿಸಿದ್ದಾರೆ. ನವೆಂಬರ್ 12-13ರಂದು ಡಿಎಲ್ಎಫ್ ಅವೆನ್ಯೂ ಸಾಕೇತ್ ಮಾಲ್ ನಲ್ಲ ಪ್ರದರ್ಶಿಸಲಾಗುವುದು. ನಂತರ ಅದು ನ.14ರಂದು ಅಹಮದಾಬಾದ್ ಗೆ ತೆರಳಲಿದ್ದು. ಅಲ್ಲಿ ಮೂರು ದಿನಗಳ ಕಾಲ(ನ.15ರಿಂದ 17)ಪ್ರದರ್ಶನಗೊಳ್ಳಲಿದೆ.
2030ರ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಏಕೈಕ ಸ್ಪರ್ಧಿ ಅಹಮದಾಬಾದ್ ಆಗಿದ್ದು, ಕಾಮನ್ ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿಯು ಭಾರತದ ಕಾಮನ್ ವೆಲ್ತ್ ಕ್ರೀಡಾಕೂಟ ಆಯೋಜಿಸುವ ಉದ್ದೇಶವನ್ನು ಶಿಫಾರಸು ಮಾಡಿತ್ತು. ಆತಿಥೇಯ ನಗರದ ಕುರಿತು ಅಂತಿಮ ನಿರ್ಧಾರವು ನ.26ರಂದು ಗ್ಲಾಸ್ಗೊದಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ.
ಭಾರತವು 2010ರಲ್ಲಿ ಕೊನೆಯ ಬಾರಿ ಹೊಸದಿಲ್ಲಿಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು.







