2026ರ ಆವೃತ್ತಿಯ IPL ಹರಾಜು: ಮ್ಯಾಕ್ಸ್ವೆಲ್, ರಸೆಲ್ ಸಹಿತ ಹಲವು ಸ್ಟಾರ್ ಆಟಗಾರರು ಅಲಭ್ಯ

Photo Credit : PTI
ಹೊಸದಿಲ್ಲಿ, ಡಿ.9: ಭಾರತೀಯ ಪ್ರೀಮಿಯರ್ ಲೀಗ್(IPL)2026ರ ಋತುವಿಗೆ ತನ್ನ ಆಟಗಾರರ ಹರಾಜು ಪ್ರಕ್ರಿಯೆಯನ್ನು ಅಬುಧಾಬಿಯಲ್ಲಿ ಡಿಸೆಂಬರ್ 16ರಂದು ಆಯೋಜಿಸಿದ್ದು, ಕಳೆದ ದಶಕದಲ್ಲಿ ಲೀಗ್ ಅನ್ನು ಪ್ರತಿನಿಧಿಸಿರುವ ಹಲವು ಸ್ಟಾರ್ ಆಟಗಾರರು ಈ ಬಾರಿ ಹರಾಜಿನ ಪಟ್ಟಿಯಲ್ಲಿಲ್ಲ.
*2026ರ IPLನಿಂದ ವಂಚಿತರಾಗಲಿರುವ ಹಲವು ಪ್ರಮುಖ ಸ್ಟಾರ್ಗಳ ಪಟ್ಟಿ ಇಲ್ಲಿದೆ...
►ಗ್ಲೆನ್ ಮ್ಯಾಕ್ಸ್ವೆಲ್
ಆಸ್ಟ್ರೇಲಿಯದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ IPL-2026ರ ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಮೂಲಕ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ನೊಂದಿಗೆ ತನ್ನ ಸುದೀರ್ಘ ನಂಟನ್ನು ತಾತ್ಕಾಲಿಕವಾಗಿ ಕಡಿದುಕೊಂಡಿದ್ದಾರೆ.
‘‘IPL ಟೂರ್ನಿಯಲ್ಲಿ ಹಲವಾರು ಸ್ಮರಣೀಯ ಋತುಗಳ ನಂತರ ಈ ವರ್ಷದ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಇದೊಂದು ಪ್ರಮುಖ ನಿರ್ಧಾರ. ಈ ಲೀಗ್ ನನಗೆ ಸಾಕಷ್ಟು ಗೌರವವನ್ನು ತಂದುಕೊಟ್ಟಿದ್ದಕ್ಕೆ ಕೃತಜ್ಞನಾಗಿದ್ದೇನೆ’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಮ್ಯಾಕ್ಸ್ವೆಲ್ ಬರೆದಿದ್ದಾರೆ.
►ಮೊಯಿನ್ ಅಲಿ
ಇಂಗ್ಲೆಂಡ್ ನ ಮಾಜಿ ಆಲ್ರೌಂಡರ್ ಮೊಯಿನ್ ಅಲಿ ಮುಂಬರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ಋತುವಿನಲ್ಲಿ ಆಡಲಿದ್ದು, ಈ ನಿರ್ಧಾರದಿಂದಾಗಿ 2026ರ ಆವೃತ್ತಿಯ ಐಪಿಎಲ್ನಿಂದ ಹೊರಗುಳಿದಿದ್ದಾರೆ.
2018ರಿಂದ ಸತತವಾಗಿ IPLನಲ್ಲಿ ಆಡಿರುವ ಮೊಯಿನ್ ಅಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಲೀಗ್ನಲ್ಲಿ ಆಡಿರುವ 73 ಪಂದ್ಯಗಳಲ್ಲಿ 1,167 ರನ್ ಗಳಿಸಿದ್ದಲ್ಲದೆ, 41 ವಿಕೆಟ್ ಗಳನ್ನು ಉರುಳಿಸಿದ್ದಾರೆ.
►ಎಫ್ ಡು ಪ್ಲೆಸಿಸ್
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್ ಡು ಪ್ಲೆಸಿಸ್ 2026ರ ಆವೃತ್ತಿಯ ಐಪಿಎಲ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಇತ್ತೀಚೆಗೆ ಘೋಷಿಸಿದ್ದಾರೆ. ಮುಂದಿನ ಋತುವಿನಲ್ಲಿ IPL ಬದಲಿಗೆ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ(ಪಿಎಸ್ಎಲ್)ಆಡುವುದಾಗಿ ಹೇಳಿದ್ದಾರೆ.
‘‘ಈ ಲೀಗ್ ನನ್ನ ಪ್ರಯಾಣದ ಬಹು ದೊಡ್ಡ ಭಾಗವಾಗಿದೆ. ವಿಶ್ವ ದರ್ಜೆಯ ಸಹ ಆಟಗಾರರೊಂದಿಗೆ, ಅದ್ಭುತ ಫ್ರಾಂಚೈಸಿಗಳಿಗಾಗಿ ಕಟ್ಟಾ ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಆಡುವ ಅದೃಷ್ಟ ಸಿಕ್ಕಿದೆ. ಭಾರತವು ನನಗೆ ಸ್ನೇಹ, ನೆನಪುಗಳ ಜೊತೆಗೆ ಪಾಠವನ್ನು ಕಲಿಸಿದೆ. ಅದು ನನ್ನನ್ನು ಕ್ರಿಕೆಟಿಗನಾಗಿ ಹಾಗೂ ವ್ಯಕ್ತಿಯಾಗಿ ರೂಪಿಸಿದೆ’’ಎಂದು 41ರ ವಯಸ್ಸಿನ ಪ್ಲೆಸಿಸ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
►ಆಂಡ್ರೆ ರಸೆಲ್
ಡಿ.16ರಂದು ನಡೆಯಲಿರುವ ಮಿನಿ ಹರಾಜಿಗಿಂತ ಮೊದಲು ವೆಸ್ಟ್ಇಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ ಭಾರತೀಯ ಪ್ರೀಮಿಯರ್ ಲೀಗ್ನಿಂದ(IPL)ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಈ ಮೂಲಕ IPL ಲೀಗ್ನೊಂದಿಗೆ ತನ್ನ 12 ವರ್ಷಗಳ ನಂಟನ್ನು ಕಡಿದುಕೊಂಡಿದ್ದಾರೆ.
‘‘ನಾನು IPLಗೆ ವಿದಾಯ ಹೇಳುವೆ.. 12 ವರ್ಷಗಳ ನೆನಪುಗಳು ಹಾಗೂ KKR ಕುಟುಂಬದಿಂದ ಲಭಿಸಿರುವ ಪ್ರೀತಿಯ ಮೂಲಕ ಐಪಿಎಲ್ನಲ್ಲಿ ಅದ್ಭುತ ಅನುಭವ ಪಡೆದಿದ್ದೇನೆ’’ ಎಂದು ರಸೆಲ್, ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
►ಆರ್. ಅಶ್ವಿನ್
ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ವರ್ಷಾರಂಭದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ತನ್ನ ನಿವೃತ್ತಿ ಪ್ರಕಟಿಸಿದ ನಂತರ ಆಗಸ್ಟ್ನಲ್ಲಿ ಐಪಿಎಲ್ಗೆ ನಿವೃತ್ತಿ ಘೋಷಿಸಿದ್ದರು.
ಅಶ್ವಿನ್ ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ನೊಂದಿಗೆ ಆಡಿದ್ದರು. ಚೆನ್ನೈ ಫ್ರಾಂಚೈಸಿಯೊಂದಿಗೆ ಎರಡು ಬಾರಿ IPL ಪ್ರಶಸ್ತಿಗಳನ್ನು ಗೆದ್ದಿದ್ದಾರೆ.







