2026ರ ಟಿ-20 ವಿಶ್ವಕಪ್ ಟೂರ್ನಿ: ಟಿಕೆಟ್ ಗಳ ಮಾರಾಟ ಆರಂಭಿಸಿದ ICC; ಟಿಕೆಟ್ ಬೆಲೆ ಎಷ್ಟು ಗೊತ್ತಾ?

Photo Credit : ICC
ಹೊಸದಿಲ್ಲಿ, ಡಿ.11: ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್ ಟೂರ್ನಿಗಾಗಿ ಟಿಕೆಟ್ ಗಳ ಮಾರಾಟ ಆರಂಭವಾಗಿದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗುರುವಾರ ಪ್ರಕಟಿಸಿದೆ.
ಪಂದ್ಯಾವಳಿಗೆ ಹೆಚ್ಚಿನ ಜನರು ಆಗಮಿಸುವಂತಾಗಲು ಆರಂಭಿಕ ಹಂತದ ಟಿಕೆಟ್ ದರವನ್ನು ಕಡಿಮೆಗೊಳಿಸಲಾಗಿದೆ.
ಟಿಕೆಟ್ ಮಾರಾಟವು ಗುರುವಾರ ಸಂಜೆ 6:45ರಿಂದ ಆರಂಭವಾಗಿದೆ. ಟಿಕೆಟ್ ದರಗಳು ಭಾರತದಲ್ಲಿ 100 ರೂ. ಹಾಗೂ ಶ್ರೀಲಂಕಾದಲ್ಲಿ 1,000 ಎಲ್ಕೆಆರ್ನಿಂದ ಆರಂಭವಾಗಲಿದೆ ಎಂದು ಐಸಿಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
10ನೇ ಆವೃತ್ತಿಯ ಟಿ-20 ಪಂದ್ಯಾವಳಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ಎಂಟು ತಾಣಗಳಲ್ಲಿ ನಡೆಯಲಿದೆ.
ಕೊಲಂಬೊದಲ್ಲಿ ಫೆಬ್ರವರಿ 7ರಂದು ನೆದರ್ಲ್ಯಾಂಡ್ಸ್ ಹಾಗೂ ಪಾಕಿಸ್ತಾನ ತಂಡಗಳು ಸ್ಪರ್ಧಾವಳಿಯ ಆರಂಭಿಕ ಪಂದ್ಯವನ್ನು ಆಡಲಿವೆ. ಆ ನಂತರ ಬಾಂಗ್ಲಾದೇಶ ತಂಡವು ಕೋಲ್ಕತಾದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಹಾಗೂ ಸಹ ಆತಿಥ್ಯವಹಿಸಿರುವ ಭಾರತ ತಂಡವು ಅಮೆರಿಕ ಕ್ರಿಕೆಟ್ ತಂಡವನ್ನು ಮುಂಬೈನಲ್ಲಿ ಮುಖಾಮುಖಿಯಾಗಲಿದೆ.
ಅಮೆರಿಕ ಹಾಗೂ ವೆಸ್ಟ್ಇಂಡೀಸ್ ನಲ್ಲಿ 2024ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ತಂಡವು ಸದ್ಯ ಹಾಲಿ ಚಾಂಪಿಯನ್ ಆಗಿದೆ.
‘‘ಟಿಕೆಟ್ ಮಾರಾಟದ ಮೊದಲ ಹಂತವು ಒಂದು ಪ್ರಮುಖ ಮೈಲಿಗಲ್ಲು. ಮೊದಲ ಹಂತದ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿದ್ದೇವೆ. 100 ರೂ. ಹಾಗೂ 1,000 ಎಲ್ಕೆಆರ್ನಿಂದ ಟಿಕೆಟ್ ದರ ಆರಂಭವಾಗಲಿದೆ. 2 ಮಿಲಿಯನ್ಗಿಂತಲೂ ಹೆಚ್ಚು ಟಿಕೆಟ್ಗಳು ಲಭ್ಯವಿದೆ. ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗಿನ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಗಾಗಿ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ’’ ಎಂದು ಐಸಿಸಿ ಸಿಇಒ ಸಂಜೋಗ್ ಗುಪ್ತಾ ತಿಳಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿದ್ದು, 55 ಪಂದ್ಯಗಳು ನಡೆಯಲಿದೆ. ಗ್ರೂಪ್ ಹಂತದ ಪಂದ್ಯಗಳ ಮೂಲಕ ಟೂರ್ನಿಯು ಆರಂಭವಾಗಲಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ, ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ, ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂ. ಮುಂಬೈನ ವಾಂಖೆಡೆ ಸ್ಟೇಡಿಯಂ, ಕೋಲ್ಕತಾದ ಈಡನ್ ಗಾರ್ಡನ್ಸ್, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಗ್ರೌಂಡ್ ಹಾಗೂ ಕ್ಯಾಂಡಿಯ ಪಲ್ಲೆಕೆಲೆ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.







