26 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಗೆ ಅರ್ಹತೆ ಪಡೆದ ಸ್ಕಾಟ್ಲ್ಯಾಂಡ್

Photo : fifa
ಹೊಸದಿಲ್ಲಿ, ನ. 19: ಡೆನ್ಮಾರ್ಕ್ ವಿರುದ್ಧದ ಅರ್ಹತಾ ಪಂದ್ಯವನ್ನು 4-2 ಗೋಲುಗಳ ಅಂತರದಿಂದ ಗೆದ್ದಿರುವ ಸ್ಕಾಟ್ಲ್ಯಾಂಡ್ ಮಂಗಳವಾರ, 2026ರ ಫುಟ್ಬಾಲ್ ವಿಶ್ವಕಪ್ ಗೆ ಅರ್ಹತೆ ಪಡೆದಿದೆ. ಗಾಯದ ಅವಧಿಯ ಆಟದ ವೇಳೆ ಅಮೋಘ ಗೋಲುಗಳನ್ನು ದಾಖಲಿಸಿದ ಕೀರನ್ ಟಯರ್ನಿ ಮತ್ತು ಕೆನಿ ಮೆಕ್ಲೀನ್ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.
ಗ್ಲಾಸ್ಗೊದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಕ್ಷಣಗಳಲ್ಲಿ ಪುಟಿದೆದ್ದ ಆಟಗಾರರು ಸ್ಕಾಟ್ಲ್ಯಾಂಡ್ಗೆ ವಿಶ್ವಕಪ್ನಲ್ಲಿ ಸ್ಥಾನ ಒದಗಿಸಿದರು. ಸ್ಕಾಟ್ಲ್ಯಾಂಡ್, 1998ರ ಬಳಿಕ ವಿಶ್ವಕಪ್ಗೆ ತೇರ್ಗಡೆಯಾಗುತ್ತಿರುವುದು ಇದು ಮೊದಲ ಬಾರಿಯಾಗಿದೆ.
90 ನಿಮಿಷಗಳ ಬಳಿಕವೂ ಪಂದ್ಯವು 2-2ರಲ್ಲಿ ಸಮಬಲದಲ್ಲಿತ್ತು. ಗ್ರೂಪ್ ‘ಸಿ’ಯ ಅಗ್ರ ಸ್ಥಾನಿಯಾಗಿ ಡೆನ್ಮಾರ್ಕ್ ವಿಶ್ವಕಪ್ಗೆ ಸ್ಥಾನ ಪಡೆಯುವುದರಲ್ಲಿತ್ತು. ಆದರೆ ಗಾಯದ ಅವಧಿಯ ಆಟದ ಮೂರನೇ ನಿಮಿಷದಲ್ಲಿ ದೀರ್ಘ ಅಂತರದಿಂದ ಗೋಲು ಬಾರಿಸಿದ ಟಯರ್ನಿ, ಸ್ಕಾಟ್ಲ್ಯಾಂಡ್ಗೆ ಮುನ್ನಡೆ ಒದಗಿಸಿದರು. ಬಳಿಕ 98ನೇ ನಿಮಿಷದಲ್ಲಿ ಮೆಕ್ಲೀನ್ ಇನ್ನೊಂದು ಗೋಲು ಬಾರಿಸಿದರು.
ಸ್ಕಾಟ್ಲ್ಯಾಂಡ್ ಪರವಾಗಿ ಮೂರನೇ ನಿಮಿಷದಲ್ಲಿ ಸ್ಕಾಟ್ ಮೆಕ್ಟಾಮಿನೇ ಗೋಲು ಗಳಿಸಿದರು. ಆದರೆ, ಬಳಿಕ ಪೆನಾಲ್ಟಿ ಸ್ಪಾಟ್ ಮೂಲಕ ಗೋಲು ದಾಖಲಿಸಿದ ಡೆನ್ಮಾರ್ಕ್ನ ರಾಸ್ಮಸ್ ಹೋಲಂಡ್ ಅಂಕಪಟ್ಟಿಯನ್ನು ಸರಿಸಮಗೊಳಿಸಿದರು.
ಆದರೆ, ರಾಸ್ಮಸ್ ಕ್ರಿಸ್ಟನ್ಸನ್ಗೆ ಎರಡನೇ ಹಳದಿ ಕಾರ್ಡ್ ಸಿಕ್ಕಿದ ಬಳಿಕ ಡೆನ್ಮಾರ್ಕ್ನ ಆಟಗಾರರ ಸಂಖ್ಯೆ 10ಕ್ಕೆ ಇಳಿಯಿತು.
78ನೇ ನಿಮಿಷದಲ್ಲಿ ಸ್ಕಾಟ್ಲ್ಯಾಂಡ್ನ ಲಾರೆನ್ಸ್ ಶ್ಯಾಂಕ್ಲ್ಯಾಂಡ್ ಗೋಲೊಂದನ್ನು ಬಾರಿಸಿ ತನ್ನ ತಂಡಕ್ಕೆ ಮುನ್ನಡೆ ದೊರಕಿಸಿದರು. ಆದರೆ ನಾಲ್ಕು ನಿಮಿಷಗಳ ಬಳಿಕ, ಡೆನ್ಮಾರ್ಕ್ ಪರವಾಗಿ ಪ್ಯಾಟ್ರಿಕ್ ಡೊರ್ಜು ಬಾರಿಸಿದ ಗೋಲು ಅಂಕಪಟ್ಟಿಯನ್ನು 2-2ರಲ್ಲಿ ಸಮಬಲದಲ್ಲಿರಿಸಿತು.
ಆದರೆ, ಅಂತಿಮ ಕ್ಷಣಗಳಲ್ಲಿ ಟಿಯರ್ನಿ ಮತ್ತು ಮೆಕ್ಲೀನ್ ಬಾರಿಸಿದ ಗೋಲುಗಳು ಸ್ಕಾಟ್ಲ್ಯಾಂಡ್ಗೆ ವಿಶ್ವಕಪ್ ಸ್ಥಾನವನ್ನು ಖಚಿತಪಡಿಸಿದವು.
ಇನ್ನೊಂದು ಪಂದ್ಯದಲ್ಲಿ ತುರ್ಕಿಯ ವಿರುದ್ಧ 2-2ರ ಡ್ರಾ ಸಾಧಿಸಿದ 2024ರ ಯುರೋ ಚಾಂಪಿಯನ್ ಸ್ಪೇನ್ ಕೂಡ ವಿಶ್ವಕಪ್ನಲ್ಲಿ ತನ್ನ ಸ್ಥಾನ ಕಾದಿರಿಸಿತು. ಮತ್ತೊಂದು ಪಂದ್ಯದಲ್ಲಿ ಲೀಕ್ಟನ್ಸ್ಟೀನ್ ತಂಡವನ್ನು 7-0 ಗೋಲುಗಳಿಂದ ಹಿಮ್ಮೆಟ್ಟಿಸಿದ 2018ರ ಸೆಮಿ ಫೈನಲಿಸ್ಟ್ ಬೆಲ್ಜಿಯಮ್ ವಿಶ್ವಕಪ್ಗೆ ಅರ್ಹತೆ ಪಡೆಯಿತು. ಇನ್ನೆರಡು ಪಂದ್ಯಗಳಲ್ಲಿ ಎದುರಾಳಿಗಳನ್ನು ಡ್ರಾಕ್ಕೆ ಹಿಡಿದಿಟ್ಟ ಸ್ವಿಟ್ಸರ್ಲ್ಯಾಂಡ್ ಮತ್ತು ಆಸ್ಟ್ರಿಯ ಕೂಡ ವಿಶ್ವಕಪ್ನಲ್ಲಿ ಸ್ಥಾನಗಳನ್ನು ಕಾದಿರಿಸಿದವು. ಆಸ್ಟ್ರೀಯ 28 ವರ್ಷಗಳ ನಂತರ ಹಾಗೂ ಸ್ವಿಟ್ಸರ್ಲ್ಯಾಂಡ್ ಸತತ ಆರನೇ ಬಾರಿ ವಿಶ್ವಕಪ್ಗೆ ಅರ್ಹತೆ ಪಡೆದಿದೆ.
2026ರ ಫಿಫಾ ವಿಶ್ವಕಪ್ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ನಡೆಯಲಿದೆ.







