2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ : 53 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಸ್ಪರ್ಧೆ?

ಕೋಲ್ಕತಾ, ನ.4: ವಿಶ್ವ ಹಾಗೂ ಒಲಿಂಪಿಕ್ಸ್ ಪದಕ ವಿಜೇತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 2026ರ ಏಶ್ಯನ್ ಗೇಮ್ಸ್ ನಂತರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್(ಐಡಬ್ಲ್ಯುಎಫ್)ತೂಕ ದರ್ಜೆಗಳಲ್ಲಿ ಬದಲಾವಣೆ ಮಾಡಿದ ನಂತರ ಮೀರಾಬಾಯಿ ಚಾನು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದು, 2024ರ ಪ್ಯಾರಿಸ್ ಗೇಮ್ಸ್‌ನಲ್ಲಿ 49 ಕೆಜಿ ವಿಭಾಗದಲ್ಲಿ 4ನೇ ಸ್ಥಾನ ಪಡೆದಿದ್ದರು. ಈ ವರ್ಷ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಚಾನು ಅಹ್ಮದಾಬಾದ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ನಾರ್ವೆಯ ಫೋರ್ಡ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಸೋಮವಾರ 49 ಕೆಜಿ ವಿಭಾಗವನ್ನು ತೆಗೆದುಹಾಕಿದ್ದು, 2025ರ ಲಾಸ್ ಏಂಜಲೀಸ್ ಗೇಮ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳಿಗೆ 53 ಕೆಜಿ ವಿಭಾಗವನ್ನು ಕನಿಷ್ಠ ತೂಕ ವಿಭಾಗವನ್ನಾಗಿ ಪರಿಗಣಿಸಿದೆ. ಪುರುಷರಿಗೆ ಕನಿಷ್ಠ ತೂಕ ವಿಭಾಗ 65 ಕೆಜಿ ಆಗಿದೆ.
ಮುಂದಿನ ವರ್ಷ ನಡೆಯಲಿರುವ ಏಶ್ಯನ್ ಗೇಮ್ಸ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಪದಕ ಗೆಲ್ಲಲು ಬಯಸಿರುವ ಮೀರಾಬಾಯಿ, 2028ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಬಯಸಿದರೆ, 53 ಕೆಜಿಗೆ ಭಡ್ತಿ ಪಡೆಯಲಿದ್ದಾರೆ.
2022ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ಗಿಂತ ಮೊದಲು ತನ್ನ ಸ್ನ್ಯಾಚ್ ಟೆಕ್ನಿಕ್ ಅನ್ನು ಪರೀಕ್ಷಿಸಲು ಸಿಂಗಾಪುರ ಇಂಟರ್‌ನ್ಯಾಶನಲ್ ಕ್ರೀಡಾಕೂಟದಲ್ಲಿ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಚಾನು ಇದೀಗ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವತ್ತ ಚಿತ್ತಹರಿಸಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಹಾಗೂ 2026ರ ಏಶ್ಯನ್ ಗೇಮ್ಸ್‌ನಲ್ಲಿ ತನ್ನ ಮೊದಲ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.







