2024ರಲ್ಲಿ 260 ಭಾರತೀಯ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣ: ಕ್ರೀಡಾ ಸಚಿವಾಲಯ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ.9: ಭಾರತದ 260 ಕ್ರೀಡಾಪಟುಗಳು 2024ರಲ್ಲಿ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಕ್ರೀಡಾ ಸಚಿವಾಲಯವು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಹಿರಂಗಪಡಿಸಿದೆ. ಹೀಗಾಗಿ ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿ(ನಾಡಾ)2024ರಲ್ಲಿ ಡೋಪಿಂಗ್ ಪ್ರಕರಣದಲ್ಲಿ ಅಗ್ರ ಸ್ಥಾನ ಪಡೆಯುವ ಸಾಧ್ಯತೆಯಿದೆ.
7,466 ಪರೀಕ್ಷೆಗಳಲ್ಲಿ 260 ಪಾಸಿಟಿವ್ ಪ್ರಕರಣಗಳಾಗಿದ್ದು, ಇದು ದೇಶದಲ್ಲಿ ದಾಖಲಾದ ಗರಿಷ್ಠ ಡೋಪಿಂಗ್ ಪ್ರಕರಣವಾಗಿದೆ. 2019ರ 224 ಸಂಖ್ಯೆಯನ್ನು ಮೀರಿದೆ.
ಜೂನ್ ನಲ್ಲಿ ಬಹಿರಂಗವಾದ ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯ ವರದಿಯ ಪ್ರಕಾರ 2023ರಲ್ಲಿ ಭಾರತದ 213 ಅತ್ಲೀಟ್ ಗಳು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು.
ಇತ್ತೀಚೆಗಿನ ವರ್ಷಗಳಲ್ಲಿ ಭಾರತೀಯ ಕ್ರೀಡಾಪಟುಗಳಲ್ಲಿ ಹೆಚ್ಚುತ್ತಿರುವ ಡೋಪಿಂಗ್ ವಿರೋಧಿ ಉಲ್ಲಂಘನೆಗಳ ಬಗ್ಗೆ ಸರಕಾರಕ್ಕೆ ಅರಿವಿದೆಯೇ? ಎಂಬ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ಗಢಿ ಅವರ ಪ್ರಶ್ನೆಗೆ ಉತ್ತರಿಸಿದ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ‘‘ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವನೆಯ ಭೀತಿಯನ್ನು ನಿಗ್ರಹಿಸಲು ಸರಕಾರ ಸಂಪೂರ್ಣ ಬದ್ದವಾಗಿದೆ’’ಎಂದು ಹೇಳಿದರು.
ಅತ್ಯಂತ ಹೆಚ್ಚು ಪಾಸಿಟಿವ್ ಕೇಸ್ ಗಳ ಪಟ್ಟಿಯಲ್ಲಿ ಅತ್ಲೀಟ್ಗಳು ಮತ್ತೊಮ್ಮೆ ಅಗ್ರ ಸ್ಥಾನದಲ್ಲಿದ್ದಾರೆ. 2023ರಲ್ಲಿ 61 ಅತ್ಲೀಟ್ಗಳು ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, 2024ರಲ್ಲಿ ಇದು 76ಕ್ಕೆ ಏರಿಕೆಯಾಗಿದೆ. ವೇಟ್ ಲಿಫ್ಟಿಂಗ್ ನಲ್ಲಿ 43, ಕುಸ್ತಿಯಲ್ಲಿ 29 ಹಾಗೂ ಬಾಕ್ಸಿಂಗ್ ನಲ್ಲಿ 17 ಪಾಸಿಟಿವ್ ಕೇಸ್ ಗಳು ದಾಖಲಾಗಿವೆ.







