ಐರ್ಲ್ಯಾಂಡ್ ವಿರುದ್ಧ 2ನೇ T20; ವೈಭವ್ ಸೂರ್ಯವಂಶಿ ಚೊಚ್ಚಲ ಪಂದ್ಯವನ್ನಾಡುವ ಸಾಧ್ಯತೆ

ವೈಭವ್ ಸೂರ್ಯವಂಶಿ | Photo Credit : PTI
ಬೆಲ್ಫಾಸ್ಟ್, ಜೂ.27: ಐರ್ಲ್ಯಾಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟಿ-20 ಪಂದ್ಯಕ್ಕಿಂತ ಮೊದಲು, 15 ವರ್ಷದ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದ ಪರ ಯಾವಾಗ ಚೊಚ್ಚಲ ಪಂದ್ಯವನ್ನಾಡುತ್ತಾರೆಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ.
ಸರಣಿಯ ಮೊದಲ ಪಂದ್ಯದಲ್ಲಿ ಯುವ ಬ್ಯಾಟಿಂಗ್ ಪ್ರತಿಭೆ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನಾಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದಿದ್ದರು. ಆದರೆ ಭಾರತ ತಂಡವು ಅನುಭವಿ ಬ್ಯಾಟಿಂಗ್ ಸರದಿಗೆ ಆದ್ಯತೆ ನೀಡಿದ ಕಾರಣ ಸೂರ್ಯವಂಶಿ ಅವಕಾಶ ವಂಚಿತರಾದರು.
ಸೂರ್ಯವಂಶಿ ರವಿವಾರ ನಡೆಯಲಿರುವ 2ನೇ ಟಿ-20 ಪಂದ್ಯದಲ್ಲಿ ಆಡುವ ಅವಕಾಶ ಪಡೆಯುತ್ತಾರೋ ಅಥವಾ ಅಭಿಮಾನಿಗಳು ಜುಲೈ 1ರಂದು ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟಿ-20 ಸರಣಿಯ ತನಕ ಕಾಯಬೇಕೋ ಎಂಬ ದೊಡ್ಡ ಪ್ರಶ್ನೆ ಉದ್ಭವಿಸಿದೆ.
ತನ್ನ ಟಿ-20 ಇತಿಹಾಸದಲ್ಲಿ ಹೀನಾಯ ಸೋಲು ಕಂಡಿರುವ ಭಾರತ ತಂಡವು 2ನೇ ಟಿ-20ಯಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ.
ಹಾಲಿ ಟಿ-20 ವಿಶ್ವಕಪ್ ಚಾಂಪಿಯನ್ ಭಾರತ ತಂಡವು 183 ರನ್ಗಳ ಗುರಿ ಬೆನ್ನಟ್ಟುವ ವೇಳೆ 148 ರನ್ಗಳಿಗೆ ಆಲೌಟ್ ಆಗಿತ್ತು. ಐರ್ಲ್ಯಾಂಡ್ ತಂಡವು ಭಾರತದ ವಿರುದ್ಧ ಮೊದಲ ಬಾರಿಗೆ ಗೆಲುವು ದಾಖಲಿಸಿದೆ.
963 ದಿನಗಳ ನಂತರ ಟಿ-20 ತಂಡಕ್ಕೆ ವಾಪಸಾಗಿದ್ದ ಶ್ರೇಯಸ್ ಅಯ್ಯರ್ಗೆ ಇದು ನಿರಾಶಾದಾಯಕ ಆರಂಭವಾಗಿದೆ. ಅಯ್ಯರ್ ಟಿ-20 ಮಾದರಿಯಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದರು.






