2ನೇ ಟ್ವೆಂಟಿ-20 : ಬಾಂಗ್ಲಾದೇಶ ವಿರುದ್ಧ ಭಾರತದ ಮಹಿಳಾ ಕ್ರಿಕೆಟ್ ತಂಡಕೆ್ಕ ರೋಚಕ ಜಯ

ಹೊಸದಿಲ್ಲಿ: ಅತ್ಯಂತ ರೋಚಕವಾಗಿ ಸಾಗಿದ ಮಹಿಳೆಯರ 2ನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧ 8 ರನ್ ಅಂತರದಿಂದ ಜಯ ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಸ್ಪಿನ್ನರ್ಗಳಾದ ದೀಪ್ತಿ ಶರ್ಮಾ ಹಾಗೂ ಶೆಫಾಲಿ ವರ್ಮಾ ಡೆತ್ ಓವರ್ನಲ್ಲಿ ಬಿಗಿ ಬೌಲಿಂಗ್ ಸಂಘಟಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು. ದೀಪ್ತಿ ಹಾಗೂ ಶೆಫಾಲಿ ನಿರ್ಣಾಯಕ ಅಂತಿಮ ಓವರ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಇಬ್ಬರ ನಿಯಂತ್ರಿತ ಬೌಲಿಂಗ್ ವ್ಯತ್ಯಾಸಕ್ಕೆ ಕಾರಣವಾಗಿದ್ದು, ತಂಡವು ಸೋಲಿನ ದವಡೆಯಿಂದ ಪಾರಾಗಲು ಸಾಧ್ಯವಾಗಿದೆ ಎಂದು ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ ಹೇಳಿದ್ದಾರೆ.
ಆಫ್ ಸ್ಪಿನ್ನರ್ ಸುಲ್ತಾನಾ ಖಾತುನ್ ಅವರ ಜೀವನಶ್ರೇಷ್ಠ ಬೌಲಿಂಗ್(3-21)ದಾಳಿಗೆ ತತ್ತರಿಸಿದ ಸ್ಟಾರ್ ಆಟಗಾರ್ತಿಯರನ್ನು ಒಳಗೊಂಡಿರುವ ಭಾರತ 8 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಲಷ್ಟೇ ಶಕ್ತವಾಯಿತು. ಮಹಿಳೆಯರ ಟಿ-೨೦ ಪಂದ್ಯಗಳಲ್ಲಿ ಬಾಂಗ್ಲಾದೇಶ ವಿರುದ್ಧ ಕನಿಷ್ಠ ಸ್ಕೋರ್ ಗಳಿಸಿತು.
ಗೆಲ್ಲಲು ಸುಲಭ ಗುರಿ ಪಡೆದಿದ್ದ ಬಾಂಗ್ಲಾದೇಶ ಭಾರೀ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ 20 ಓವರ್ಗಳಲ್ಲಿ ಕೇವಲ 87 ರನ್ಗೆ ಆಲೌಟಾಯಿತು. ಒಂದು ಹಂತದಲ್ಲಿ 86 ರನ್ಗೆ 5 ವಿಕೆಟ್ಗಳನ್ನು ಕಳೆದುಕೊಂಡಿದ್ದ ಬಾಂಗ್ಲಾದೇಶವು 8 ಎಸೆತಗಳಲ್ಲಿ ಕೇವಲ 1 ರನ್ಗೆ ಉಳಿದ ಐದು ವಿಕೆಟ್ಗಳನ್ನು ಕಳೆದುಕೊಂಡಿತು.
ಬಾಂಗ್ಲಾದ ಬ್ಯಾಟಿಂಗ್ ವೈಫಲ್ಯದಲ್ಲಿ ಭಾರತದ ಸ್ಪಿನ್ನರ್ಗಳು ಮುಖ್ಯ ಪಾತ್ರವಹಿಸಿದರು. ಆಫ್ ಸ್ಪಿನ್ನರ್ ಮಿನ್ನು ಮಣಿ(2-9), ಎಡಗೈ ಸ್ಪಿನ್ನರ್ ಅನುಷಾ(1-20) ಆರಂಭಿಕ ಮೇಲುಗೈ ಒದಗಿಸಿದರು. ದೀಪ್ತಿ ಶರ್ಮಾ(3-12) ಹಾಗೂ ಶೆಫಾಲಿ ವರ್ಮಾ(3-15) 19ನೇ ಹಾಗೂ 20ನೇ ಓವರ್ನಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಶೆಫಾಲಿ ಕೊನೆಯ ಓವರ್ನಲ್ಲಿ 1 ರನ್ ನೀಡಿ 3 ವಿಕೆಟ್ಗಳನ್ನು ಉರುಳಿಸಿದರು. ಬಾಂಗ್ಲಾದೇಶದ ರನ್ ಚೇಸಿಂಗ್ ವೇಳೆ ನಾಯಕಿ ನಿಗಾರ್ ಸುಲ್ತಾನ(38 ರನ್, 55 ಎಸೆತ)ಏಕಾಂಗಿ ಹೋರಾಟ ನೀಡಿದರು.ಸುಲ್ತಾನ ದೀಪ್ತಿ ಶರ್ಮಾಗೆ ವಿಕೆಟ್ ಒಪ್ಪಿಸಿದ ನಂತರ ಬಾಂಗ್ಲಾ ಕುಸಿತದ ಹಾದಿ ಹಿಡಿಯಿತು. ಗುರುವಾರ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ.







