2ನೇ ಅನಧಿಕೃತ ಟೆಸ್ಟ್ ಪಂದ್ಯ : ಆಸ್ಟ್ರೇಲಿಯ ‘ಎ’ ವಿರುದ್ಧ ಭಾರತ ‘ಎ’ ಗೆಲುವಿಗೆ 412 ರನ್ ಗುರಿ

PC - PTI
ಲಕ್ನೊ, ಸೆ.25: ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ‘ಎ’ ತಂಡದ ಗೆಲುವಿಗೆ ಆಸ್ಟ್ರೇಲಿಯ ‘ಎ’ ತಂಡವು 412 ರನ್ ಗುರಿ ನೀಡಿದೆ.
ಗೆಲುವಿಗೆ ಕಠಿಣ ಗುರಿ ಪಡೆದ ಭಾರತ ‘ಎ’ ತಂಡ 3ನೇ ದಿನದಾಟದಂತ್ಯಕ್ಕೆ 2 ವಿಕೆಟ್ಗಳ ನಷ್ಟಕ್ಕೆ 169 ರನ್ ಗಳಿಸಿದೆ. ಕೊನೆಯ ದಿನದಾಟವಾದ ಶುಕ್ರವಾರ ಇನ್ನೂ 243 ರನ್ ಗಳಿಸುವ ಅಗತ್ಯವಿದೆ. ಸಾಯಿ ಸುದರ್ಶನ್(ಔಟಾಗದೆ 44, 84 ಎಸೆತ)ಹಾಗೂ ಮಾನವ್ ಸುಥರ್(1) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನಿಂಗ್ಸ್ ಆರಂಭಿಸಿದ ಕೆ.ಎಲ್.ರಾಹುಲ್(74 ರನ್ಗೆ ಗಾಯಾಳು ನಿವೃತ್ತಿ, 92 ಎಸೆತ)ಹಾಗೂ ಜಗದೀಶನ್(36 ರನ್, 55 ಎಸೆತ) ಮೊದಲ ವಿಕೆಟ್ಗೆ 85 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ರಾಹುಲ್ ಗಾಯಗೊಂಡು ನಿವೃತ್ತಿಯಾಗಿದ್ದಕ್ಕೆ ಕಾರಣ ತಿಳಿದುಬಂದಿಲ್ಲ.
ಜಗದೀಶನ್ ಔಟಾದ ನಂತರ ಸುದರ್ಶನ್ ಹಾಗೂ ದೇವದತ್ತ ಪಡಿಕ್ಕಲ್ 2ನೇ ವಿಕೆಟ್ಗೆ 77 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಇದಕ್ಕೂ ಮೊದಲು 3 ವಿಕೆಟ್ಗಳ ನಷ್ಟಕ್ಕೆ 16 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ತಂಡವು ನಾಯಕ ನಾಥನ್ ಮೆಕ್ಸ್ವೀನಿ(ಔಟಾಗದೆ 85, 149 ಎಸೆತ)ಹಾಗೂ ಜೋಶ್ ಫಿಲಿಪ್(50 ರನ್, 48 ಎಸೆತ)ಅರ್ಧಶತಕಗಳ ಸಹಾಯದಿಂದ 185 ರನ್ ಗಳಿಸಿ ಆಲೌಟಾಯಿತು. ಮೊದಲ ಇನಿಂಗ್ಸ್ನಲ್ಲಿ ದೊಡ್ಡ ಮುನ್ನಡೆ ಪಡೆದ ಕಾರಣ ಭಾರತದ ಗೆಲುವಿಗೆ ಕಠಿಣ ಗುರಿ ನೀಡಿತು.
ಮೊದಲ ಇನಿಂಗ್ಸ್ನಲ್ಲಿ 420 ರನ್ ಗಳಿಸಿದ್ದ ಆಸ್ಟ್ರೇಲಿಯ ‘ಎ’ ತಂಡವು ಭಾರತ ‘ಎ’ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 194 ರನ್ಗೆ ನಿಯಂತ್ರಿಸಿತು. 226 ರನ್ ಮುನ್ನಡೆ ಪಡೆದು ಮೇಲುಗೈ ಸಾಧಿಸಿತ್ತು.
ಭಾರತದ ಬೌಲಿಂಗ್ ವಿಭಾಗದಲ್ಲಿ ಗುರ್ನೂರ್ ಬ್ರಾರ್(3-42)ಹಾಗೂ ಮಾನವ್ ಸುಥರ್(3-50)ತಲಾ ಮೂರು ವಿಕೆಟ್ಗಳನ್ನು ಪಡೆದರೆ, ಮುಹಮ್ಮದ್ ಸಿರಾಜ್(2-20)ಹಾಗೂ ಯಶ್ ಥಾಕೂರ್(2-29)ತಲಾ ಎರಡು ವಿಕೆಟ್ಗ ಳನ್ನು ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ‘ಎ’ ತಂಡ ಮೊದಲ ಇನಿಂಗ್ಸ್: 420 ರನ್
ಭಾರತ ‘ಎ’ ತಂಡ ಮೊದಲ ಇನಿಂಗ್ಸ್: 194 ರನ್
ಆಸ್ಟ್ರೇಲಿಯ ‘ಎ’ ತಂಡ 2ನೇ ಇನಿಂಗ್ಸ್: 185 ರನ್
ಭಾರತ ‘ಎ’ 2ನೇ ಇನಿಂಗ್ಸ್: 169/2







