3ನೇ ಏಕದಿನ ಪಂದ್ಯ: ಹರ್ಮನ್ಪ್ರೀತ್ ಕೌರ್ ಶತಕ
ಇಂಗ್ಲೆಂಡ್ ಗೆಲುವಿಗೆ 319 ರನ್ ಗುರಿ ನೀಡಿದ ಭಾರತದ ಮಹಿಳಾ ತಂಡ

Photo | Reuters
ಚೆಸ್ಟರ್-ಲೀ-ಸ್ಟ್ರೀಟ್: ನಾಯಕಿ ಹರ್ಮನ್ಪ್ರೀತ್ ಕೌರ್ ಶತಕ(102 ರನ್, 84 ಎಸೆತ, 14 ಬೌಂಡರಿ)ಹಾಗೂ ಜೆಮಿಮಾ ರೊಡ್ರಿಗಸ್(50 ರನ್, 45 ಎಸೆತ, 7 ಬೌಂಡರಿ)ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡವು ಆತಿಥೇಯ ಇಂಗ್ಲೆಂಡ್ ತಂಡದ ಗೆಲುವಿಗೆ 319 ರನ್ ಗುರಿ ನೀಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 318 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಸ್ಮತಿ ಮಂಧಾನ(45 ರನ್, 54 ಎಸೆತ)ಹಾಗೂ ಪ್ರತಿಕಾ ರಾವಲ್(26 ರನ್,33 ಎಸೆತ) 12.1 ಓವರ್ಗಳಲ್ಲಿ 73 ಎಸೆತಗಳಲ್ಲಿ 64 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.ಆದರೆ ಪ್ರತಿಕಾ ಹಾಗೂ ಸ್ಮತಿ 5 ಓವರ್ಗಳ ಅಂತರದಲ್ಲಿ ಔಟಾದರು. ಆಗ ನಾಯಕಿ ಕೌರ್ ಜೊತೆ ಕೈಜೋಡಿಸಿದ ಹರ್ಲೀನ್ ಡೆವೊಲ್(45 ರನ್, 65 ಎಸೆತ)3ನೇ ವಿಕೆಟ್ಗೆ 81 ರನ್ ಜೊತೆಯಾಟ ನಡೆಸಿದರು.
ಡೆವೊಲ್ ಔಟಾದ ನಂತರ ರೊಡ್ರಿಗಸ್ ಅವರೊಂದಿಗೆ 4ನೇ ವಿಕೆಟ್ಗೆ 77 ಎಸೆತಗಳಲ್ಲಿ 110 ರನ್ ಸೇರಿಸಿದ ಕೌರ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ರಿಚಾ ಘೋಷ್(ಔಟಾಗದೆ 38, 18 ಎಸೆತ) ಜೊತೆಗೆ 5ನೇ ವಿಕೆಟ್ಗೆ 32 ರನ್ ಜೊತೆಯಾಟ ನಡೆಸಿದ ಕೌರ್ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
22 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಕೌರ್ 82 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ ಏಕದಿನ ಕ್ರಿಕೆಟ್ನಲ್ಲಿ ತನ್ನ 7ನೇ ಶತಕ ಪೂರೈಸಿದರು. ಶತಕ ತಲುಪಿದ ಬೆನ್ನಿಗೇ ಸ್ಮಿತ್ಗೆ ಔಟಾದರು.
ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯವನ್ನು ಜಯಿಸಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಮುನ್ನಡೆ ಸಾಧಿಸಲಿದೆ.







