FIFA World Cup 2026 | ವಾಟರ್ ಬ್ರೇಕ್ ಗಳಿಂದ 4,764 ಕೋಟಿ ರೂ. ಆದಾಯ; ಫೈನಲ್ ಪಂದ್ಯದ ಟಿಕೆಟ್ ಗೆ 22 ಕೋಟಿ ರೂ.!

Photo Credit : x@FIFAWorldCup
FIFA ವಿಶ್ವಕಪ್ ಹಿಂದಿರುವ ಆದಾಯದ ಅಭೂತಪೂರ್ವ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕೆ?
2026ರ FIFA ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಲಾಭದಾಯಕ ಫುಟ್ಬಾಲ್ ಪಂದ್ಯಾವಳಿಯಾಗಿದೆ. ಬಹುಮಾನದ ಹಣದಿಂದ ತೊಡಗಿ ಪ್ರಸಾರ ವ್ಯವಹಾರಗಳವರೆಗೆ ಅಂಕಿ-ಅಂಶಗಳು ಅಭೂತಪೂರ್ವವಾಗಿವೆ. ಪ್ರಸಿದ್ಧ ಗೋಲ್ಡನ್ ವಿಶ್ವಕಪ್ ಟ್ರೋಫಿ ಇಂದು ಸುಮಾರು 713,000 ಡಾಲರ್ (6.8 ಕೋಟಿ ರೂ.) ಮೌಲ್ಯದ್ದಾಗಿದೆ. ಇದು ಸುಮಾರು 11 ಪೌಂಡ್ ಗಳಷ್ಟು ಅಂದರೆ, 18 ಕ್ಯಾರಟ್ ಚಿನ್ನವನ್ನು ಒಳಗೊಂಡಿದೆ. ಏರುತ್ತಿರುವ ಚಿನ್ನದ ಬೆಲೆಗಳಿಂದಾಗಿ ಅದರ ಮೌಲ್ಯವು 2022ರ ಖತರ್ ವಿಶ್ವಕಪ್ ಗಿಂತ 2.5 ಪಟ್ಟು ಹೆಚ್ಚಾಗಿದೆ. ಟ್ರೋಫಿಯು ಸಾಮಾನ್ಯವಾಗಿ ಜ್ಯೂರಿಚ್ನಲ್ಲಿರುವ FIFA ಮ್ಯೂಸಿಯಂನಲ್ಲಿ ಇರುತ್ತದೆ.
►ಬಹುಮಾನದ ಹಣ
ವಿಜೇತ ರಾಷ್ಟ್ರವು ಐತಿಹಾಸಿಕ 50 ದಶಲಕ್ಷ ಡಾಲರ್ (477 ಕೋಟಿ ರೂ.) ಬಹುಮಾನದ ಹಣವನ್ನು ಜೇಬಿಗಿಳಿಸಲಿದೆ. ನಾಕೌಟ್ ಹಂತವನ್ನು ತಲುಪುವ ತಂಡಕ್ಕೆ ಕನಿಷ್ಠ 11 ದಶಲಕ್ಷ ಡಾಲರ್ (104 ಕೋಟಿ ರೂ.) ಖಚಿತವಾಗಿದೆ. ಗುಂಪು ಹಂತದಲ್ಲಿ ಹೊರಹೋಗುವ ತಂಡಗಳು ತಲಾ 10 ದಶಲಕ್ಷ ಡಾಲರ್ (95 ಕೋಟಿ ರೂ.) ತವರಿಗೆ ಕೊಂಡೊಯ್ಯಲಿವೆ.
ಒಟ್ಟು FIFA ಬಹುಮಾನ ನಿಧಿಯು ಅಗಾಧವಾದ 871 ದಶಲಕ್ಷ ಡಾಲರ್ (8,304 ಕೋಟಿ ರೂ.) ಆಗಿದೆ. ಇದು ಕತಾರ್ನಲ್ಲಿ 2022ರಲ್ಲಿ ನಡೆದ ವಿಶ್ವಕಪ್ ನ 440 ದಶಲಕ್ಷ ಡಾಲರ್ ಗೆ ಹೋಲಿಸಿದರೆ ಬಹುತೇಕ ದ್ವಿಗುಣವಾಗಿದೆ.
ವಿಶ್ವಕಪ್ ಫೈನಲ್ ಗೆ ಪ್ರೀಮಿಯಂ ಟಿಕೆಟ್ ಗಳನ್ನು ತಲಾ 32,970 ಡಾಲರ್ ಗೆ (31.5 ಲಕ್ಷ ರೂ.) ಬಿಡುಗಡೆ ಮಾಡಲಾಗಿದೆ. ಈ ಅಂಕಿ-ಅಂಶವು ಈ ಹಿಂದೆ ಬಿಡುಗಡೆಯಾದ ಟಿಕೆಟ್ ಗಳಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. 2022ರ ಖತರ್ ವಿಶ್ವಕಪ್ ಫೈನಲ್ ನ ಅತ್ಯುತ್ತಮ ಟಿಕೆಟ್ ನ ಬೆಲೆ 1,607 ಡಾಲರ್ ಆಗಿತ್ತು.
ಮರುಮಾರಾಟ ಮಾರುಕಟ್ಟೆಯಲ್ಲಿ ಕೆಲವು ಸೀಟುಗಳ ಬೆಲೆ ತಲಾ 2.3 ದಶಲಕ್ಷ ಡಾಲರ್ (22 ಕೋಟಿ ರೂ.) ತಲುಪಿದೆ. ಅತಿ ಅಗ್ಗದ ಟಿಕೆಟ್ ಕೂಡ ಈಗ ಮರುಮಾರಾಟ ವೇದಿಕೆಗಳಲ್ಲಿ 11,000 ಡಾಲರ್ ಗೆ (10.5 ಲಕ್ಷ ರೂ.) ಮಾರಾಟವಾಗುತ್ತಿದೆ.
ಮರುಮಾರಾಟ ವಹಿವಾಟುಗಳ ಮೇಲೆ FIFA ಖರೀದಿದಾರರು ಮತ್ತು ಮಾರಾಟಗಾರರಿಗೆ ಶೇ 15ರಷ್ಟು ಶುಲ್ಕ ವಿಧಿಸುತ್ತದೆ. ಸ್ಥಳದಲ್ಲಿ ಆತಿಥ್ಯ ನೀಡುವವರು ಆನ್ ಫೀಲ್ಡ್ ಸೀಟಿಂಗ್ ನಲ್ಲಿ 12 ಜನರಿಗೆ 1 ದಶಲಕ್ಷ ಡಾಲರ್ (9.5 ಕೋಟಿ ರೂ.) ಪಾವತಿಸುತ್ತಾರೆ. ಫೈನಲ್ ಗೆ 24 ವ್ಯಕ್ತಿಗಳ ಸೂಟ್ ನ ಬೆಲೆ 1.44 ದಶಲಕ್ಷ ಡಾಲರ್ (13.7 ಕೋಟಿ ರೂ.) ಆಗಿದೆ. ಟ್ರೋಫಿ ಎತ್ತಿಕೊಳ್ಳುವ ಕ್ಷಣವನ್ನು ವೀಕ್ಷಿಸಲು ಬಯಸುವ ಅಭಿಮಾನಿಗಳು ಪ್ರತಿ ವ್ಯಕ್ತಿಗೆ 600,000 ಡಾಲರ್ (5.7 ಕೋಟಿ ರೂ.) ತೆರಬೇಕಾಗುತ್ತದೆ.
►ಮೆಸ್ಸಿ–ರೊನಾಲ್ಡೋ
ಈ ವಿಶ್ವಕಪ್ ನಲ್ಲಿ ಅಗರ್ಭ ಶ್ರೀಮಂತರಾದ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೋ ಆಡುತ್ತಿದ್ದಾರೆ. ಪ್ರಸ್ತುತ ರೊನಾಲ್ಡೋ ಅವರ ನಿವ್ವಳ ಆಸ್ತಿ 1.2 ಶತಕೋಟಿ ಡಾಲರ್ (11,437 ಕೋಟಿ ರೂ.) ಆಗಿದ್ದರೆ, ಮೆಸ್ಸಿಯ ನಿವ್ವಳ ಆಸ್ತಿ 1.1 ಶತಕೋಟಿ ಡಾಲರ್ (10,483 ಕೋಟಿ ರೂ.) ಆಗಿದೆ. ಕಳೆದ 12 ತಿಂಗಳುಗಳಲ್ಲಿ ರೊನಾಲ್ಡೋ ಅವರ ಆದಾಯ 300 ದಶಲಕ್ಷ ಡಾಲರ್ (2,859 ಕೋಟಿ ರೂ.) ಆಗಿದೆ. ಹೀಗಾಗಿ ಅವರು ಅತಿಹೆಚ್ಚು ಸಂಭಾವನೆ ಪಡೆಯುವ ವಿಶ್ವಕಪ್ ಆಟಗಾರ ಹಾಗೂ ವಿಶ್ವದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ ಆಗಿದ್ದಾರೆ.
ಮೆಟ್ಲೈಫ್ ಸ್ಟೇಡಿಯಂ ಪ್ರತಿ ವರ್ಷ ಹೆಸರಿನ ಹಕ್ಕುಗಳಿಗಾಗಿ 19 ದಶಲಕ್ಷ ಡಾಲರ್ (181 ಕೋಟಿ ರೂ.) ಪಾವತಿಸುತ್ತದೆ. ಎನ್ಎಫ್ಎಲ್ ಸ್ಥಳದ ಜೊತೆಗೆ 25 ವರ್ಷದ ಒಪ್ಪಂದವು 425 ದಶಲಕ್ಷ ಡಾಲರ್ (4,049 ಕೋಟಿ ರೂ.) ಮೌಲ್ಯದ್ದಾಗಿದೆ. FIFA ಎಲ್ಲಾ ಸ್ಟೇಡಿಯಂಗಳು ಅಸ್ತಿತ್ವದಲ್ಲಿರುವ ಪ್ರಾಯೋಜಕರನ್ನು ಸಂಪೂರ್ಣವಾಗಿ ಮರೆಮಾಡಬೇಕು ಎಂದು ಹೇಳುತ್ತದೆ. ಹೀಗಾಗಿ ಮೆಟ್ಲೈಫ್ ಸ್ಟೇಡಿಯಂ ಇದೀಗ ನ್ಯೂಯಾರ್ಕ್-ನ್ಯೂಜೆರ್ಸಿ ಸ್ಟೇಡಿಯಂ ಆಗಿದೆ. ಅಟ್ಲಾಂಟಾದ ಮರ್ಸಿಡಿಸ್-ಬೆಂಜ್ ಲೋಗೊವನ್ನು ಮಾತ್ರ ಸುರಕ್ಷಿತವಾಗಿ ಮರೆಮಾಡಲು ಸಾಧ್ಯವಾಗದ ಕಾರಣ ಉಳಿಸಿಕೊಳ್ಳಲಾಗಿದೆ.
►ಹೈಡ್ರೇಶನ್ ಬ್ರೇಕ್ ಗಳು
ಫಾಕ್ಸ್ ಸ್ಪೋರ್ಟ್ಸ್ ಕೇವಲ ಜಲ ವಿರಾಮದ ಜಾಹೀರಾತುಗಳಿಂದ ಕನಿಷ್ಠ 250 ದಶಲಕ್ಷ ಡಾಲರ್ (2,382 ಕೋಟಿ ರೂ.) ಗಳಿಸುವ ನಿರೀಕ್ಷೆಯಿದೆ. ಪ್ರತಿ ಪಂದ್ಯವು ಆಟಗಾರರ ಕಲ್ಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಎರಡು ಮೂರು ನಿಮಿಷಗಳ ವಿರಾಮಗಳನ್ನು ಒಳಗೊಂಡಿದೆ. ಆಟದ ಸಮಯದಲ್ಲಿ 30 ಸೆಕೆಂಡುಗಳ ಜಾಹೀರಾತಿನ ದರವು ತಲಾ 200,000 ಡಾಲರ್ (1.90 ಕೋಟಿ ರೂ.) ರಿಂದ 750,000 ಡಾಲರ್ (7.14 ಕೋಟಿ ರೂ.) ವರೆಗೆ ಇರುತ್ತದೆ. 104 ಪಂದ್ಯಗಳಲ್ಲಿ ಒಟ್ಟು 624 ನಿಮಿಷಗಳ ಜಲಸೇವನೆ ವಿರಾಮಗಳಿಂದ 500 ದಶಲಕ್ಷ ಡಾಲರ್ (4,764 ಕೋಟಿ ರೂ.) ಗಳಿಸಬಹುದು. ಇಡೀ ಪಂದ್ಯಾವಳಿಯ ಹಕ್ಕುಗಳಿಗಾಗಿ ಫಾಕ್ಸ್ ಸುಮಾರು 485 ದಶಲಕ್ಷ ಡಾಲರ್ (4,622 ಕೋಟಿ ರೂ.) ಪಾವತಿಸಿದೆ ಎಂದು ವರದಿಯಾಗಿದೆ.
►ಬಜೆಟ್ ಮತ್ತು ಆದಾಯ
ಈ ವಿಶ್ವಕಪ್ ಗೆ FIFAದ ಒಟ್ಟು ಬಜೆಟ್ 3.8 ಶತಕೋಟಿ ಡಾಲರ್ (36,215 ಕೋಟಿ ರೂ.) ಆಗಿದೆ. ಇದರಲ್ಲಿ ಕಾರ್ಯಾಚರಣೆಗಳ ವೆಚ್ಚಗಳಿಗಾಗಿ 1.1 ಶತಕೋಟಿ ಡಾಲರ್ (10,483 ಕೋಟಿ ರೂ.) ಮತ್ತು ಪಂದ್ಯಗಳ ಸಾಗಾಟ ವೆಚ್ಚಕ್ಕಾಗಿ 159 ದಶಲಕ್ಷ ಡಾಲರ್ (1,515 ಕೋಟಿ ರೂ.) ಮೀಸಲಿರಿಸಲಾಗಿದೆ. ಈ ನಾಲ್ಕು ವರ್ಷಗಳ ವಿಶ್ವಕಪ್ ಸೈಕಲ್ ನಲ್ಲಿ FIFA ಒಟ್ಟು 13 ಶತಕೋಟಿ ಡಾಲರ್ (1,23,910 ಕೋಟಿ ರೂ.) ಆದಾಯವನ್ನು ಯೋಜಿಸಿದೆ.
2026ರಲ್ಲಿ ಪ್ರಸಾರ ಹಕ್ಕುಗಳಿಂದ ಮಾತ್ರ 3.9 ಶತಕೋಟಿ ಡಾಲರ್ (37,173 ಕೋಟಿ ರೂ.) ಗಳಿಸುವ ನಿರೀಕ್ಷೆಯಿದೆ. ಆತಿಥ್ಯ ಮತ್ತು ಟಿಕೆಟ್ ಮಾರಾಟದಿಂದ 3 ಶತಕೋಟಿ ಡಾಲರ್ (28,592 ಕೋಟಿ ರೂ.)ಗಿಂತ ಹೆಚ್ಚಿನ ಆದಾಯ ಸಿಗಲಿದೆ. ಅಂದರೆ, ಕತಾರ್ನ 2022ರ ಸೈಕಲ್ ನಲ್ಲಿ ಗಳಿಸಿದ 7.6 ಶತಕೋಟಿ ಡಾಲರ್ ಒಟ್ಟು ಆದಾಯವನ್ನು ಇದು ಮೀರಿಸಲಿದೆ.
FIFA ಸುಮಾರು 250 ದಶಲಕ್ಷ ಡಾಲರ್ (2,382 ಕೋಟಿ ರೂ.) ಅನ್ನು ಕ್ಲಬ್ ಗಳಿಗೆ ಹಂಚಲಿದೆ. ಕ್ಲಬ್ಗಳಲ್ಲಿ ಆಡುವ ಪ್ರತಿ ಆಟಗಾರನಿಗೆ ಪ್ರತಿ ದಿನದ ಪಾವತಿ ಕನಿಷ್ಠ 5,000 ಡಾಲರ್ (4.76 ಲಕ್ಷ ರೂ.) ಇರುವ ಸಾಧ್ಯತೆಯಿದೆ. ಫ್ಲೋರಿಡಾ, ಜಾರ್ಜಿಯಾ ಮತ್ತು ಮಿಸೌರಿ ರಾಜ್ಯಗಳು ಒಟ್ಟಾಗಿ 57.8 ದಶಲಕ್ಷ ಡಾಲರ್ (551 ಕೋಟಿ ರೂ.) ತೆರಿಗೆ ಆದಾಯವನ್ನು ಮನ್ನಾ ಮಾಡಿವೆ. ಈ ವಿನಾಯಿತಿಗಳನ್ನು 2022ರಲ್ಲಿ ತಮ್ಮ ಮೂಲ ವಿಶ್ವಕಪ್ ಬಿಡ್ ಗಳ ಭಾಗವಾಗಿ ಒಪ್ಪಿಕೊಳ್ಳಲಾಗಿತ್ತು.






