ಮೂರನೇ ಪಂದ್ಯದಲ್ಲಿ 97 ರನ್ ಜಯ: ಆಸ್ಟ್ರೇಲಿಯದ ವಿರುದ್ಧ ಏಕದಿನ ಸರಣಿ ಗೆದ್ದ ಇಂಗ್ಲೆಂಡ್

Photo Credit : PTI
ಹೊಬರ್ಟ್: ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಶತಕ(133 ರನ್, 115 ಎಸೆತ. 15 ಬೌಂಡರಿ, 3 ಸಿಕ್ಸರ್)ಹಾಗೂ ವೇಗಿ ಸೋನಿ ಬೆಕರ್(4-45)ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 97 ರನ್ಗಳ ಅಂತರದಿಂದ ಗೆದ್ದುಕೊಂಡಿದೆ.
ಈ ಗೆಲುವಿನ ಮೂಲಕ ಆಂಗ್ಲರು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದ್ದಾರೆ.
ಇಂಗ್ಲೆಂಡ್ ತಂಡವು ಸತತ ಎರಡನೇ ಗೆಲುವು ದಾಖಲಿಸಿ ಸರಣಿ ವಶಪಡಿಸಿಕೊಂಡಿದೆ. ಡಕೆಟ್ ಶತಕ(133 ರನ್, 115 ಎಸೆತ)ಹಾಗೂ ವಿಲ್ ಜಾಕ್ಸ್ (59 ರನ್, 48 ಎಸೆತ)ಅರ್ಧಶತಕದ ಸಹಾಯದಿಂದ 328 ರನ್ ಕಲೆ ಹಾಕಿದ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯ ತಂಡವನ್ನು 47ನೇ ಓವರ್ನಲ್ಲಿ 231 ರನ್ಗೆ ನಿಯಂತ್ರಿಸಿ ಜಯಭೇರಿ ಬಾರಿಸಿತು. ಸೋನಿ ಬೆಕರ್ ಹೊಸ ಚೆಂಡಿನಲ್ಲಿ ಆಸೀಸ್ಗೆ ಆರಂಭಿಕ ಆಘಾತ ನೀಡಿದರು. ಬೆಕರ್ಗೆ ಲಿಯಾಮ್ ಡಾಸನ್(3-42) ಸಾಥ್ ನೀಡಿದರು.
ಇಂಗ್ಲೆಂಡ್ ತಂಡವು 15 ಓವರ್ನೊಳಗೆ 2 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತು. ಜಾಕ್ ಎಡ್ವರ್ಡ್ಸ್(4-31), ಆಫ್ ಸ್ಪಿನ್ನರ್ ಮ್ಯಾಟ್ ರೆನ್ಶಾ(3-51)ನೆರವಿನಿಂದ ಆಸ್ಟ್ರೇಲಿಯ ಮರು ಹೋರಾಟ ನೀಡಿತು. ರೆನ್ಶಾ, ಎಡಗೈ ಸ್ಪಿನ್ನರ್ ಕೂಪರ್ ಕೊನೊಲಿ ಹಾಗೂ ಅರೆಕಾಲಿಕ ಸ್ಪಿನ್ನರ್ ಟ್ರಾವಿಸ್ ಹೆಡ್ ಒಟ್ಟು ಐದು ವಿಕೆಟ್ಗಳನ್ನು ಉರುಳಿಸಿದರು.
ಮೂರನೇ ಕ್ರಮಾಂಕದ ಬ್ಯಾಟರ್ ರೆನ್ಶಾ(55 ರನ್, 70 ಎಸೆತ) ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿದರೂ ಆಸ್ಟ್ರೇಲಿಯಕ್ಕೆ ಗೆಲುವು ದಕ್ಕಲಿಲ್ಲ. ನಾಯಕ ಮಿಚೆಲ್ ಮಾರ್ಷ್(1)ಹಾಗೂ ಟ್ರಾವಿಸ್ ಹೆಡ್(4 ರನ್)ಬೇಗನೆ ಔಟಾದರು.
ಅಲೆಕ್ಸ್ ಕ್ಯಾರಿ(37 ರನ್), ಎಡ್ವರ್ಡ್ಸ್(31 ರನ್)ಒಂದಷ್ಟು ಹೋರಾಟ ನೀಡಿದರು.
ಇಂಗ್ಲೆಂಡ್ನ ಡಕೆಟ್ ‘ಪಂದ್ಯಶ್ರೇಷ್ಠ’ ಹಾಗೂ ಟಾಮ್ ಬಾಂಟನ್(ಒಟ್ಟು 190 ರನ್)‘ಸರಣಿ ಶ್ರೇಷ್ಠ’ಪ್ರಶಸ್ತಿಗೆ ಭಾಜನರಾದರು.






