ಎರಡು ಟಿ-20 ಪಂದ್ಯಗಳಲ್ಲಿ 99 ರನ್ ಸೋರಿಕೆ; ಭುವನೇಶ್ವರ್ಗೆ ಬೌಲಿಂಗ್ ಕೋಚ್ ಮೊರ್ಕೆಲ್ ಸಲಹೆ

ಭುವನೇಶ್ವರ ಕುಮಾರ್ | Photo Credit : ICC
ಹೊಸದಿಲ್ಲಿ, ಅ.26: ನಾಲ್ಕು ವರ್ಷಗಳ ಅಂತರದ ನಂತರ ಟಿ-20 ತಂಡಕ್ಕೆ ವಾಪಸಾದ ಬಳಿಕ ತಮ್ಮ ಲಯವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ಗೆ ಸಲಹೆ ನೀಡಿರುವ ಭಾರತ ತಂಡದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್, ಶಾಂತವಾಗಿರಿ, ಹೊರಗಿನ ಒತ್ತಡವನ್ನು ನಿರ್ಲಕ್ಷಿಸಿ ಹಾಗೂ ತಮ್ಮ ಪಂದ್ಯದತ್ತ ಗಮನ ನೀಡಿ ಎಂದಿದ್ದಾರೆ.
ಭುವನೇಶ್ವರ್ ಅವರ ಪುನರಾಗಮನ ಯೋಜನೆಯಂತೆ ನಡೆದಿಲ್ಲ. 36ರ ವಯಸ್ಸಿನ ಭುವನೇಶ್ವರ್ ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಟಿ-20ಯಲ್ಲಿ 49 ರನ್ ಹಾಗೂ ಎರಡನೇ ಟಿ-20 ಪಂದ್ಯದಲ್ಲಿ 50 ರನ್ ಬಿಟ್ಟುಕೊಟ್ಟಿದ್ದರು. ಎರಡು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಅವರ ಇಕಾನಮಿ ರೇಟ್ 12.37 ಆಗಿದ್ದು, ಇದು ಸರಣಿಯಲ್ಲಿ ಭಾರತೀಯ ಬೌಲರ್ಗಳ ಪೈಕಿ ಅತಿ ಗರಿಷ್ಠವಾಗಿದೆ.
ಹಿರಿಯ ವೇಗದ ಬೌಲರ್ ಬೆನ್ನಿಗೆ ನಿಂತ ಮೊರ್ಕೆಲ್, ಮೈದಾನದಲ್ಲಿ ಹೆಚ್ಚು ಅವಕಾಶ ಲಭಿಸಿದ ನಂತರ ಅವರು ಸುಧಾರಿಸಲಿದ್ದಾರೆ ಎಂದರು.
‘‘ನಾಲ್ಕು ವರ್ಷಗಳ ಕಾಲ ಟಿ-20 ತಂಡದಿಂದ ದೂರವಿದ್ದು, ಅಂತರ್ರಾಷ್ಟ್ರೀಯ ಮಟ್ಟದ ಪಂದ್ಯಕ್ಕೆ ಮರಳಿರುವ ಭುವನೇಶ್ವರ್ ಮೇಲೆ ಸಹಜವಾಗಿಯೇ ಸಾಕಷ್ಟು ನಿರೀಕ್ಷೆಗಳಿವೆ. ಅವರು ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಲ್ಲದೆ, ಚೆನ್ನಾಗಿ ಬೌಲಿಂಗ್ ಮಾಡಿದ್ದರು. ಸರಣಿಗೆ ಸಜ್ಜಾಗಲು ಸೀಮಿತ ಸಮಯ ಇರುವಾಗ ಆಟಗಾರನೊಬ್ಬ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ಸಿದ್ಧವಾಗುವುದು ಅಷ್ಟೊಂದು ಸುಲಭವಲ್ಲ’’ ಎಂದು ಮೊರ್ಕೆಲ್ ಹೇಳಿದ್ದಾರೆ.
ಭುವನೇಶ್ವರ್ ಅವರು ಆರ್ಸಿಬಿ ತಂಡವು ಸತತ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2025ರ ಋತುವಿನಲ್ಲಿ 17 ವಿಕೆಟ್ಗಳನ್ನು ಪಡೆದಿದ್ದ ಭುವಿ, 2026ರಲ್ಲಿ ಒಟ್ಟು 28 ವಿಕೆಟ್ಗಳನ್ನು ಉರುಳಿಸಿದ್ದರು.
ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ದುಬಾರಿ ಬೌಲರ್ ಎನಿಸಿಕೊಂಡಿರುವ ಭುವನೇಶ್ವರ್ಗೆ ಪುಟಿದೇಳಲು ಅಗತ್ಯವಿರುವ ಕೌಶಲಗಳು ಹಾಗೂ ಅನುಭವವಿದೆ ಎಂದು ಮೊರ್ಕೆಲ್ ಹೇಳಿದರು.






