ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಬಗ್ಗೆ ಎಬಿಡಿ ವಿಲಿಯರ್ಸ್ ಹೇಳಿದ್ದೇನು?

ಹೊಸದಿಲ್ಲಿ: ಭಾರತದ ಟೆಸ್ಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಅನುಭವಿಸಿದ ಹೀನಾಯ ಸೋಲು ಎದುರಿಸಿದ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಾರ್ಯತಂತ್ರ ಮತ್ತು ಕೋಚಿಂಗ್ ಶೈಲಿ ತೀವ್ರವಾಗಿ ವಿಮರ್ಶೆ ನಡೆಯುತ್ತಿದೆ. ಕೆಂಪು-ಚೆಂಡಿನ ಕ್ರಿಕೆಟ್ ನಲ್ಲಿ ಭಾರತ ಅನುಭವಿಸಿದ ಹಿನ್ನಡೆ, ಆಲ್‌ರೌಂಡರ್‌ಗಳಿಗೆ ಹೆಚ್ಚುತ್ತಿರುವ ಆದ್ಯತೆ ಹಾಗೂ ಸ್ಪಿನ್-ಸ್ನೇಹಿ ಪರಿಸ್ಥಿತಿಗಳಲ್ಲಿಯೂ ಕೆಲಸ ಮಾಡದ ತಂತ್ರಗಳ ಬಗ್ಗೆ ತೀವ್ರ ಟೀಕೆಗಳು ಕೇಳಿ ಬರುತ್ತಿವೆ.
ದಕ್ಷಿಣ ಆಫ್ರಿಕಾ ತಂಡವು ಆತಿಥೇಯ ಭಾರತ ತಂಡವನ್ನು ಬ್ಯಾಟಿಂಗ್ ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿಯೂ ಮೀರಿಸಿ, ಬೌಲರ್‌ಗಳು ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡರು. ಬ್ಯಾಟರ್ ಗಳು ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿಯೂ ಸ್ಥಿರ ಮತ್ತು ಸುಧಾರಿತ ತಂತ್ರಗಳನ್ನು ಪ್ರದರ್ಶಿಸಿದರು.
ಬಿಳಿ-ಚೆಂಡಿನ ಕ್ರಿಕೆಟ್ ನಲ್ಲಿ ಗಂಭೀರ್ ಅವರ ನಾಯಕತ್ವ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕಪ್ ಗೆಲುವುಗಳನ್ನು ತಂದುಕೊಟ್ಟಿದೆ. ಆದರೆ ಇದೇ ವಿಧಾನ ಟೆಸ್ಟ್ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಆಗಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ಪರಿಸ್ಥಿತಿ ಹದಗೆಡುವ ಮೊದಲು ಕಾರ್ಯತಂತ್ರದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕೆಂಬ ಒತ್ತಡ ಗಂಭೀರ್ ಮೇಲೆ ಹೆಚ್ಚಾಗುತ್ತಿದೆ.
ಈ ಮಧ್ಯೆ, ಗಂಭೀರ್ ಅವರ ಕೋಚಿಂಗ್ ಶೈಲಿಯು ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣದ ಮೇಲೆ ಬೀರಬಹುದಾದ ಪ್ರಭಾವ ಕುರಿತು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಜೊತೆ ಮಾತನಾಡಿದ ವೇಳೆ ಈ ಬಗ್ಗೆ ಮಾತನಾಡಿದ್ದಾರೆ.
“ಭಾರತೀಯ ತಂಡಕ್ಕೆ ಇದು ಕಠಿಣ ಸಮಯ. ಗಂಭೀರ್ ಭಾವನಾತ್ಮಕ ಆಟಗಾರ ಎಂಬುದು ನನಗೆ ಗೊತ್ತಿದೆ. ಕೋಚ್ ಆಗಿ ಕೂಡ ಅವರು ಅತಿ ಭಾವನಾತ್ಮಕವಾಗಿದ್ದರೆ, ಅದು ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ಬದಲಿಸುವುದಿಲ್ಲ. ಆದರೆ ತೆರೆಮರೆಯಲ್ಲಿ ಅವರು ಹೇಗಿದ್ದಾರೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ", ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
“ಕೋಚ್ ಆಗಲು ಒಂದೇ ರೀತಿಯ ಸಿದ್ಧ ಸೂತ್ರ ಎಂದೇನೂ ಇಲ್ಲ. ಕೆಲವರಿಗೆ ಮಾಜಿ ಆಟಗಾರರ ಮಾರ್ಗದರ್ಶನ ಇಷ್ಟವಾಗುತ್ತದೆ. ಕೆಲವರು ಕ್ರಿಕೆಟ್ ಆಡದಿದ್ದರೂ ತರಬೇತಿಯಲ್ಲಿ ಅನುಭವಿಗಳಾದ ಕೋಚ್‌ಗಳನ್ನು ಮೆಚ್ಚುತ್ತಾರೆ" ಎಂದು ಎಬಿಡಿ ಕೋಚಿಂಗ್ ನ ಆಯಾಮಗಳನ್ನು ತೆರೆದಿಟ್ಟಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಅಶ್ವಿನ್ ಅವರ ನಂತರದ ಪರಿವರ್ತನಾ ಹಂತದಲ್ಲಿ ಭಾರತ ಯಾವ ಆಟಗಾರರನ್ನು ಪ್ರಮುಖ ಪಾತ್ರಗಳಿಗೆ ತಯಾರು ಮಾಡಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುವ ಆಟಗಾರರು ನಿರ್ಣಾಯಕ ಕ್ಷಣಗಳಲ್ಲಿ ಒತ್ತಡಕ್ಕೆ ಮಣಿಯುತ್ತಿರುವುದು ತಂಡದ ಪ್ರದರ್ಶನವನ್ನು ದುರ್ಬಲಗೊಳಿಸಿದೆ.
ನಾಯಕ, ಕೋಚಿಂಗ್ ಸಿಬ್ಬಂದಿ ಮತ್ತು ಆಯ್ಕೆ ಸಮಿತಿ ಒಟ್ಟಾಗಿ ಕೆಲಸ ಮಾಡಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆ ಸೂಕ್ತ ಬದಲಾವಣೆಯನ್ನು ತರಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.







