ಅಭಿನವ ಬಿಂದ್ರಾ ಶೂಟಿಂಗ್ ಕೋಚ್ ಸನ್ನಿ ಥಾಮಸ್ ನಿಧನ

ಸನ್ನಿ ಥಾಮಸ್ | PC : X
ಹೊಸದಿಲ್ಲಿ: ಭಾರತೀಯ ಶೂಟಿಂಗ್ ತಂಡದ ಮಾಜಿ ಕೋಚ್ ಸನ್ನಿ ಥಾಮಸ್ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಉಸ್ತುವಾರಿಯಲ್ಲಿ ಹಲವು ಒಲಿಂಪಿಕ್ ಪದಕಗಳ ಪ್ರಾಪ್ತಿ ಸೇರಿದಂತೆ ಭಾರತವು ಹಲವು ಐತಿಹಾಸಿಕ ಸಾಧನೆಗಳನ್ನು ಮಾಡಿದೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಕೊಟ್ಟಾಯಮ್ನಲ್ಲಿ ನೆಲೆಸಿದ್ದರು. ಅವರು ಪತ್ನಿ ಕೆ.ಜೆ. ಜೋಸಮ್ಮ, ಪುತ್ರರಾದ ಮನೋಜ್ ಸನ್ನಿ ಮತ್ತು ಸನಿಲ್ ಸನ್ನಿ ಹಾಗೂ ಪುತ್ರಿ ಸೋನಿಯಾ ಸನ್ನಿಯನ್ನು ಅಗಲಿದ್ದಾರೆ.
ಮೂಲತಃ ಶೂಟರ್ ಆಗಿದ್ದ ಅವರು, 1993ರಿಂದ 2012ರವರೆಗೆ ಭಾರತೀಯ ಶೂಟರ್ಗಳಿಗೆ ಮಾರ್ಗದರ್ಶನ ಮಾಡಿದ್ದರು. ಈ ಅವಧಿಯಲ್ಲಿ ಭಾರತೀಯ ಶೂಟಿಂಗ್ ಕ್ಷೇತ್ರದಲ್ಲಿ ಸಂಭವಿಸಿದ ಹಲವು ಐತಿಹಾಸಿಕ ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದರು.
ಅವರಿಗೆ 2001ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿತ್ತು. 2004ರ ಅಥೆನ್ಸ್ ಒಲಿಂಪಿಕ್ಸ್ ವೇಳೆ ಅವರು ಭಾರತೀಯ ಕೋಚಿಂಗ್ ತಂಡದ ಸದಸ್ಯರಾಗಿದ್ದರು. ಆ ಒಲಿಂಪಿಕ್ಸ್ನಲ್ಲಿ ರಾಜ್ಯವರ್ಧನ ಸಿಂಗ್ ರಾಥೋಡ್ ಪುರುಷರ ಡಬಲ್ಸ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಆ ಮೂಲಕ ಶೂಟಿಂಗ್ನಲ್ಲಿ ಒಲಿಂಪಿಕ್ ಪದಕವೊಂದನ್ನು ಗೆದ್ದ ಮೊದಲ ಭಾರತೀಯ ಅವರಾದರು.
ಥಾಮಸ್ ರ ಕ್ರೀಡಾ ಜೀವನದ ಅತ್ಯುನ್ನತ ಘಟ್ಟ ದಾಖಲಾಗಿದ್ದು ಬೀಜಿಂಗ್ ಒಲಿಂಪಿಕ್ಸ್ನಲ್ಲಿ. ಆ ಕ್ರೀಡಾಕೂಟದಲ್ಲಿ ಅಭಿನವ ಬಿಂದ್ರಾ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಅದು ಒಲಿಂಪಿಕ್ಸ್ನಲ್ಲಿ ಭಾರತೀಯರೊಬ್ಬರು ಗೆದ್ದ ಮೊದಲ ವೈಯಕ್ತಿಕ ಚಿನ್ನವಾಯಿತು.
‘‘ಪ್ರೊಫೆಸರ್ ಸನ್ನಿ ಥಾಮಸ್ರ ನಿಧನದ ಸುದ್ದಿ ಕೇಳಿ ಅತೀವ ಬೇಸರವಾಗಿದೆ. ಅವರು ತರಬೇತುದಾರನಷ್ಟೇ ಅಗಿರಲಿಲ್ಲ, ಭಾರತೀಯ ಶೂಟರ್ಗಳ ಹಲವಾರು ತಲೆಮಾರುಗಳಿಗೆ ಅವರು ಗುರು, ಮಾರ್ಗದರ್ಶಿಮತ್ತು ತಂದೆ ಸಮಾನರಾಗಿದ್ದರು’’ ಎಂಬುದಾಗಿ ಬಿಂದ್ರಾ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಅವರ ಅವಧಿಯಲ್ಲಿ ಹಲವು ಶೂಟರ್ಗಳು ಉನ್ನತ ಎತ್ತರಕ್ಕೆ ಏರಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವಿಜಯ್ ಕುಮಾರ್, ಜಸ್ಪಾಲ್ ರಾಣಾ, ಸಮರೇಶ್ ಜಂಗ್ ಮತ್ತು ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿರುವ ಗಗನ್ ನಾರಂಗ್- ಅವರ ಪೈಕಿ ಕೆಲವರು.
ಥಾಮಸ್ರ ಮಾರ್ಗದರ್ಶನದಲ್ಲಿ, ರಾಣಾ 2006ರಲ್ಲಿ ದೋಹಾದಲ್ಲಿ ನಡೆದ ಏಶ್ಯನ್ ಗೇಮ್ಸ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದರು. ಅದೇ ವರ್ಷ ಮೆಲ್ಬರ್ನ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಜಂಗ್ ದಾಖಲೆಯ ಐದು ಚಿನ್ನದ ಪದಕಗಳನ್ನು ಜಯಿಸಿದರು.
ಥಾಮಸ್ರ ನಿಧನಕ್ಕೆ ನ್ಯಾಶನಲ್ ರೈಫಲ್ ಅಸೋಸಿಯೇಶನ್ ಆಫ ಇಂಡಿಯಾ (ಎನ್ಆರ್ಎಐ) ಅಧ್ಯಕ್ಷ ಕಲಿಕೇಶ್ ನಾರಾಯಣ ಸಿಂಗ್ ದೇವ್ ಸಂತಾಪ ವ್ಯಕ್ತಪಡಿಸಿದ್ದಾರೆ.







