ಕ್ರಿಕೆಟ್ ಆಡಿದರೆ ಪಾರ್ಶ್ವವಾಯುಗೆ ಒಳಗಾಗಬಹುದು ಎಂದು ಅಭಿಷೇಕ್ ರೆಡ್ಡಿಗೆ ವೈದ್ಯರು ಎಚ್ಚರಿಕೆ ನೀಡಿದ್ದರು!

ಅಭಿಷೇಕ್ ರೆಡ್ಡಿ | Photo Credit : X
ಹೊಸದಿಲ್ಲಿ, ನ.28: ಆಂಧ್ರಪ್ರದೇಶದ ಕ್ರಿಕೆಟಿಗ ಅಭಿಷೇಕ್ ರೆಡ್ಡಿ ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಕ್ರಿಕೆಟ್ ಮುಂದುವರಿಸುವುದರಿಂದ ಪಾರ್ಶ್ವವಾಯುವಿಗೆ ಒಳಗಾಗಬಹುದು ಎಂದು ವೈದ್ಯರು ಎಚ್ಚರಿಕೆಯನ್ನು ನೀಡಿದ್ದರು. ಆದರೆ ಅಭಿಷೇಕ್ ತಮ್ಮ ಕ್ರಿಕೆಟ್ ಕನಸುಗಳನ್ನು ಬೆನ್ನಟ್ಟಲು ದೃಢ ನಿಶ್ಚಯ ಹೊಂದಿದ್ದರು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದರೂ ಕೂಡ ‘ನಿಮ್ಮ ಕನಸುಗಳನ್ನು ಬೆನ್ನಟ್ಟಿ, ಅವು ನನಸಾಗುತ್ತವೆ’ಎಂದು ಬರೆದಿರುವ ಚಾಂಪಿಯನ್ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಪೋಸ್ಟರ್ನಿಂದ ಪ್ರೇರಣೆ ಪಡೆಯುತ್ತಲೇ ಇದ್ದರು.
ಇತ್ತೀಚೆಗೆ ಜಾರ್ಖಂಡ್ ತಂಡದ ವಿರುದ್ದ ಜೆಮ್ಶೆಡ್ಪುರಲ್ಲಿ ನಡೆದಿದ್ದ ರಣಜಿ ಟ್ರೋಫಿ ಪಂದ್ಯದಲ್ಲಿ ದ್ವಿಶತಕ(247 ರನ್)ಗಳಿಸಿದ್ದ ಅಭಿಷೇಕ್ ಆಂಧ್ರಪ್ರದೇಶ ತಂಡಕ್ಕೆ ಇನಿಂಗ್ಸ್ ಅಂತರದ ಗೆಲುವು ತಂದುಕೊಟ್ಟಿದ್ದರು. ಕ್ರಿಕೆಟಿಗೆ ಅಮೋಘ ಪುನರಾಗಮನ ಮಾಡಿದ್ದರು.
ಅಭಿಷೇಕ್ ರೆಡ್ಡಿ 2015ರಲ್ಲಿ ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಆಡುವ ಮೂಲಕ ತನ್ನ ದೇಶೀಯ ಕ್ರಿಕೆಟ್ ವೃತ್ತಿಬದುಕನ್ನು ಆರಂಭಿಸಿದ್ದರು. ಕೇವಲ 20ನೇ ವಯಸ್ಸಿನಲ್ಲಿ ಚೊಚ್ಚಲ ಪಂದ್ಯವನ್ನಾಡಿ ಅರ್ಧಶತಕ ಗಳಿಸಿದ್ದರು. ಆದರೆ ಆ ನಂತರ ಎರಡು ಬಾರಿ ಗಾಯಗೊಂಡು ವೃತ್ತಿಜೀವನಕ್ಕೆ ವಿದಾಯ ಹೇಳುವ ಹಂತಕ್ಕೆ ತಲುಪಿದ್ದರು.
ವರ್ಷಗಳ ಕಾಲ ನೋವನ್ನು ಅನುಭವಿಸಿ, ತಾಳ್ಮೆಯನ್ನು ಮೈಗೂಡಿಸಿಕೊಂಡಿರುವ ಅಭಿಷೇಕ್ ಈಗ ಮತ್ತೊಮ್ಮೆ ತಮ್ಮ ಕಾಲ ಮೇಲೆ ನಿಂತಿದ್ದಾರೆ. ಕ್ರಿಕೆಟ್ ಮೈದಾನಕ್ಕೆ ವಾಪಸಾಗಿದ್ದು ಕ್ರಿಕೆಟ್ ಮುಂದುವರಿಸುವ ಕನಸು ನನಸಾಗಿಸಿಕೊಂಡಿದ್ದಾರೆ.
‘‘ನಾನು ದೇಶೀಯ ಕ್ರಿಕೆಟಿಗೆ ಕಾಲಿಟ್ಟಾಗ 20 ವರ್ಷವಾಗಿತ್ತು. ನಾನು ಆಗ ಚಿಕ್ಕವನಿದ್ದರೂ ಹೆಚ್ಚಿನ ಉತ್ಸಾಹವಿತ್ತು. ಆದರೆ ಎರಡು ಶಸ್ತ್ರಚಿಕಿತ್ಸೆಗಳು ನನ್ನನ್ನು ಜರ್ಝರಿತರನ್ನಾಗಿಸಿದವು. ನಾನು 2015ರಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾದೆ. ಆಗ ಕರ್ನಾಟಕ ತಂಡ ರಾಬಿನ್ ಉತ್ತಪ್ಪ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ವಿನಯಕುಮಾರ್ ಹಾಗೂ ಇನ್ನೂ ಅನೇಕ ಹಿರಿಯ ಆಟಗಾರರನ್ನು ಒಳಗೊಂಡ ಸ್ಟಾರ್ ತಂಡವಾಗಿತ್ತು. ಆಗ ನನ್ನದೇ ಆದ ಸ್ಥಾನ ಗಳಿಸುವುದು ಕಷ್ಟಕವಾಗಿತ್ತು. ಆದರೆ ನನ್ನ ಬ್ಯಾಟಿಂಗ್ ನನಗೆ ಯಶಸ್ಸು ತಂದುಕೊಟ್ಟಿತು. 2016ರಲ್ಲಿ ಶಸ್ತ್ರಚಿಕಿತ್ಸಗೆ ಒಳಗಾದ ನಂತರ ಕೇವಲ ಒಂದು ವರ್ಷದಲ್ಲಿ ಎಲ್ಲವೂ ಬದಲಾಯಿತು’’ ಎಂದು ಅಭಿಷೇಕ್ ಹಳೆಯ ನೆನಪು ಬಿಚ್ಚಿಟ್ಟರು.
‘‘2016ರಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಕಾಲಿಗೆ ಗಾಯವಾಗಿತ್ತು. 2023ರಲ್ಲಿ ಮತ್ತೊಮ್ಮೆ ಅದೇ ಕಾಲಿಗೆ ಗಾಯವಾಯಿತು. ಎರಡನೇ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದೆ. ಗಂಭೀರವಾದ ಗಾಯ ಗುಣಮುಖವಾಗಲು ತಿಂಗಳುಗಳು ಬೇಕಾದವು. ಆಗ ನಾನು ಕ್ರಿಕೆಟ್ ಕೈಬಿಡುವ ಯೋಚನೆಯಲ್ಲಿದ್ದೆ.ಆದರೆ ಕನಸು ಕಾಣುವುದನ್ನು ಮರೆಯಲಿಲ್ಲ. ನನ್ನ ಸಹ ಆಟಗಾರ ಹಾಗೂ ಸ್ನೇಹಿತ ಅಭಿಮನ್ಯು ಮಿಥುನ್ ಕಷ್ಟದ ಸಮಯದಲ್ಲಿ ನನಗೆ ನೆರವಾದರು. ನಾನು ಗಾಯಗೊಂಡಿದ್ದಾಗ ಅವರಲ್ಲಿ ಸಾಕಷ್ಟು ಮಾತನಾಡಿದ್ದೆ. ಅವರು ನನಗೆ ಮಾನಸಿಕವಾಗಿ ಚೇತರಿಸಿಕೊಳ್ಳಲು ನೆರವಾಗಿದ್ದರು’’ಎಂದು ಅಭಿಷೇಕ್ ಹೇಳಿದರು.
2014-15ರ ಋತುವಿನಲ್ಲಿ ರಣಜಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಕರ್ನಾಟಕ ತಂಡದಲ್ಲಿ ಅಭಿಷೇಕ್ ರೆಡ್ಡಿ ಅವರಿದ್ದರು. ತನ್ನ ತವರು ರಾಜ್ಯ ಆಂಧ್ರಪ್ರದೇಶಕ್ಕೆ ಮರಳುವ ಮೊದಲು ಕೆಲವು ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ತನ್ನ ಮೊದಲ ಸರ್ಜರಿಯ ನಂತರ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನದ ಆಧಾರದಲ್ಲಿ 2014-15ರಲ್ಲಿ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಂಡರ್-23 ತಂಡದಲ್ಲಿ ಸ್ಥಾನ ಪಡೆದಿದ್ದರು. ಆಗ ಅವರು ಸತತ ನಾಲ್ಕು ಬಾರಿ ಶತಕಗಳನ್ನು ಗಳಿಸಿದ್ದರು.
ಅಭಿಷೇಕ್ ಈ ತನಕ 25 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 31ರ ಸರಾಸರಿಯಲ್ಲಿ ಒಟ್ಟು 1,511 ರನ್ ಗಳಿಸಿದ್ದಾರೆ.
‘‘ನನ್ನ ತಾಯಿ ಆಂಧ್ರದವರು. ನನ್ನ ಎಲ್ಲ ಜೂನಿಯರ್ ಕ್ರಿಕೆಟನ್ನು ಕರ್ನಾಟಕದಲ್ಲಿ ಆಡಿದ್ದೆ. ನನ್ನ ತಂದೆ ಕರ್ನಾಟಕದವರು. ಕರ್ನಾಟಕ ನನ್ನ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ನನ್ನನ್ನು ಕ್ರಿಕೆಟಿಗನಾಗಿ ಕಾಣಬೇಕೆನ್ನುವುದು ನನ್ನ ಹೆತ್ತವರ ಕನಸಾಗಿತ್ತು. ನಾನು ಈ ಪಂದ್ಯವನ್ನು ಈಗಲೂ ಗೌರವಿಸುವೆ’’ ಎಂದು ಅಭಿಷೇಕ್ ಹೇಳಿದರು.







