ಟಿ20ಯಲ್ಲಿ ವೇಗವಾಗಿ 1,000 ರನ್ ಪೂರೈಸಿದ ಭಾರತದ 2ನೇ ಬ್ಯಾಟರ್ ಅಭಿಷೇಕ್ ಶರ್ಮಾ

ಅಭಿಷೇಕ್ ಶರ್ಮಾ | PC : PTI
ಬ್ರಿಸ್ಬೇನ್, ನ.8: ಅಭಿಷೇಕ್ ಶರ್ಮಾ ತನ್ನ ಯಶಸ್ವಿ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ 1,000 ರನ್ ಪೂರೈಸಿದ ಭಾರತದ 2ನೇ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು. ವಿರಾಟ್ ಕೊಹ್ಲಿ ಮಾತ್ರ ಕೆಲವೇ ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
ಅಭಿಷೇಕ್ ತನ್ನ 28ನೇ ಇನಿಂಗ್ಸ್ನಲ್ಲಿ ಈ ಮೈಲಿಗಲ್ಲು ತಲುಪಿದರು. ಕೊಹ್ಲಿ ಕೇವಲ 27 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಅವರು ಕಡಿಮೆ ಇನಿಂಗ್ಸ್ ಗಳಲ್ಲಿ 1,000 ಟಿ20 ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿರುವ ಕೆ.ಎಲ್.ರಾಹುಲ್(29 ಇನಿಂಗ್ಸ್), ಸೂರ್ಯಕುಮಾರ್ ಯಾದವ್(31) ಹಾಗೂ ರೋಹಿತ್ ಶರ್ಮಾ(40)ರನ್ನು ಹಿಂದಿಕ್ಕಿದರು.
ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ಅಭಿಷೇಕ್ ಅವರು ಎಸೆತಗಳ ಲೆಕ್ಕಾಚಾರದಲ್ಲಿ ಅತ್ಯಂತ ವೇಗವಾಗಿ 1,000 ಟಿ20 ರನ್ ಗಳಿಸಿದ್ದಾರೆ. 1,000 ರನ್ ಪೂರೈಸಲು ಕೇವಲ 528 ಎಸೆತಗಳನ್ನು ಎದುರಿಸಿದ್ದರು. ಈ ಮೂಲಕ ಸೂರ್ಯಕುಮಾರ್ ಯಾದವ್(573 ಎಸೆತ), ಫಿಲ್ ಸಾಲ್ಟ್(599), ಗ್ಲೆನ್ ಮ್ಯಾಕ್ಸ್ವೆಲ್(604) ಹಾಗೂ ಆ್ಯಂಡ್ರೆ ರಸೆಲ್ ಹಾಗೂ ಫಿನ್ ಅಲ್ಲೆನ್(609 ಎಸೆತ)ದಾಖಲೆಯನ್ನು ಮುರಿದರು.
ಗಾಬಾ ಸ್ಟೇಡಿಯಂನಲ್ಲಿ ಶನಿವಾರ ಆಸ್ಟ್ರೇಲಿಯ ತಂಡದ ವಿರುದ್ಧ ಭಾರತ ಆಡಿರುವ 5ನೇ ಹಾಗೂ ಕೊನೆಯ ಟಿ20 ಪಂದ್ಯದ ವೇಳೆ ಅಭಿಷೇಕ್ ಈ ಸಾಧನೆ ಮಾಡಿದರು. ಅಭಿಷೇಕ್ ಅವರು ಶುಭಮನ್ ಗಿಲ್ ಜೊತೆಗೂಡಿ ಇನಿಂಗ್ಸ್ ಆರಂಭಿಸಿದರು. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ಅಭಿಷೇಕ್ ಹಾಗೂ ಗಿಲ್ 4.5 ಓವರ್ ಗಳಲ್ಲಿ 52 ರನ್ ಜೊತೆಯಾಟ ನಡೆಸಿದ್ದರು.
ಆಗ ಅಭಿಷೇಕ್ 13 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸಹಿತ 23 ರನ್ ಗಳಿಸಿದ್ದರು. ಗಿಲ್ 16 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ.
►ಕಡಿಮೆ ಇನಿಂಗ್ಸ್ ಗಳಲ್ಲಿ 1,000 ಟಿ20 ರನ್ ಗಳಿಸಿದ ಆಟಗಾರರು
27: ವಿರಾಟ್ ಕೊಹ್ಲಿ
28: ಅಭಿಷೇಕ್ ಶರ್ಮಾ
29: ಕೆ.ಎಲ್.ರಾಹುಲ್
31: ಸೂರ್ಯಕುಮಾರ್ ಯಾದವ್
40: ರೋಹಿತ್ ಶರ್ಮಾ
ಕಡಿಮೆ ಎಸೆತಗಳಲ್ಲಿ 1,000 ಟಿ20 ರನ್ ಗಳಿಸಿದವರು
528 ಎಸೆತಗಳು: ಅಭಿಷೇಕ್ ಶರ್ಮಾ
573 ಎಸೆತಗಳು: ಸೂರ್ಯಕುಮಾರ್ ಯಾದವ್
599 ಎಸೆತಗಳು: ಫಿಲ್ ಸಾಲ್ಟ್
604 ಎಸೆತಗಳು: ಗ್ಲೆನ್ ಮ್ಯಾಕ್ಸ್ವೆಲ್
609 ಎಸೆತಗಳು: ಆಂಡ್ರೆ ರಸೆಲ್/ಫಿನ್ ಅಲ್ಲೆನ್







